ಬೆಂಗಳೂರು: ಪ್ರಮುಖ ಸ್ಟಾರ್ ಆಟಗಾರರು ಕೊನೇಕ್ಷಣದಲ್ಲಿ ಟೂರ್ನಿಯಿಂದ ಹಿಂದೆ ಸರಿದ ಕಾರಣದಿಂದಾಗಿ, ಭಾನವಾರ ಆರಂಭವಾಗಬೇಕಿದ್ದ ಎರಡನೇ ಆವೃತ್ತಿಯ ಗ್ರಾೃನ್ ಪ್ರಿ ಬ್ಯಾಡ್ಮಿಂಟನ್ ಲೀಗ್ (ಜಿಪಿಬಿಎಲ್) ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ನಗರದ ಪಿಇಎಸ್ ವಿಶ್ವವಿದ್ಯಾಲಯದ ಆವರಣದಲ್ಲಿ ಆಗಸ್ಟ್ 27ರಿಂದ ಸೆಪ್ಟೆಂಬರ್ 8ರವರೆಗೆ ಆಯೋಜಿಸಲಾಗಿದ್ದ ಟೂರ್ನಿಯನ್ನು ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ (ಬಿಎಐ) ಹಾಗೂ ಜಿಪಿಬಿಎಲ್ ಲೀಗ್ ಆಡಳಿತ ಮಂಡಳಿಯ ನಡುವಿನ ಹಗ್ಗ-ಜಗ್ಗಾಟದಿಂದಾಗಿ ಮುಂದೂಡಲಾಗಿದೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಪಿಬಿಎಲ್ ಆಯುಕ್ತ ಪ್ರಶಾಂತ್ ರೆಡ್ಡಿ, ಲೀಗ್‌ನಲ್ಲಿ ಆಡಲು ಕರ್ನಾಟಕ ಹೈಕೋರ್ಟ್ ಆಟಗಾರರಿಗೆ ಸ್ಪಷ್ಟ ಅನುಮತಿ ನೀಡಿದ್ದರೂ, ಮಾನ್ಯತೆ ಹೊಂದದ ಲೀಗ್‌ಗಳಲ್ಲಿ ಆಡದಂತೆ ಸೂಚಿಸುವ ಮೂಲಕ ಲೀಗ್‌ನಲ್ಲಿ ಭಾಗವಹಿಸದಂತೆ ಆಟಗಾರರು, ಕೋಚ್ ಹಾಗೂ ತಾಂತ್ರಿಕ ವರ್ಗದ ಸಿಬ್ಬಂದಿ ಮೇಲೆ ಬಿಎಐ ಒತ್ತಡ ಹೇರಿದೆ. ಆಟಗಾರರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಲೀಗ್ ಅನ್ನು ಮುಂದೂಡಿದ್ದೇವೆ ಎಂದರು.
ಜಿಪಿಬಿಎಲ್‌ನ ಭಾಗವಾಗಲು ನಿರ್ಧರಿಸಿದ್ದ ಆಟಗಾರರ ಪರವಾಗಿ ನಾವು ನಿಲ್ಲುತ್ತೇವೆ. ಜತೆಗೆ ಆಟಗಾರರ ಆಕಾಂಕ್ಷೆಗಳಿಗೆ ಹೊಂದಿಕೆಯಾಗುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಕ್ಕನ್ನು ಗೌರವಿಸುತ್ತೇವೆ ಎಂದು ತಿಳಿಸಿದ್ದಾರೆ.
ಭಾರತದ ಅಗ್ರ ಆಟಗಾರರಾದ ಮಿಥುನ್ ಮಂಜುನಾಥ್ ಮತ್ತು ಸಾಯಿ ಪ್ರನೀತ್ ಅವರಂಥ ಆಟಗಾರರು ಹಿಂದೆಸರಿದಿದ್ದು ಟೂರ್ನಿಗೆ ಪ್ರಮುಖ ಹಿನ್ನಡೆ ಎನಿಸಿದೆ. ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ಆಟಗಾರರು ಟೂರ್ನಿಯಲ್ಲಿ ಭಾಗವಹಿಸಲು ಈಗಾಗಲೆ ಬೆಂಗಳೂರಿಗೆ ಆಗಮಿಸಿದ್ದರು ಎನ್ನಲಾಗಿದೆ. ಮೊದಲ ಆವೃತ್ತಿಯಲ್ಲಿ ಪಿವಿ ಸಿಂಧು, ಕೆ. ಶ್ರೀಕಾಂತ್, ಅಶ್ವಿನಿ ಪೊನ್ನಪ್ಪ, ಜ್ವಾಲಾ ಗುಟ್ಟಾ, ಎಚ್‌ಎಸ್ ಪ್ರಣಯ್ ಅವರಂಥ ಸ್ಟಾರ್ ಆಟಗಾರರು ತಂಡದ ಮೆಂಟರ್‌ಗಳಾಗಿ ಕಾರ್ಯನಿರ್ವಹಿಸಿದ್ದರು.