ಕ್ರೀಡೆ

ಐಪಿಎಲ್ 13ನೇ ಆವೃತ್ತಿಯ ಅನಿಶ್ಚಿತತೆ ಮುಂದುವರಿಕೆ; ಬಿಸಿಸಿಐ-ಫ್ರಾಂಚೈಸಿ ಮಾಲೀಕರ ಸಭೆ ರದ್ದು

ನವದೆಹಲಿ: ಏಪ್ರಿಲ್ 15ರವರೆಗೆ ಮುಂದೂಡಿಕೆ ಯಾಗಿರುವ ಐಪಿಎಲ್ 13ನೇ ಆವೃತ್ತಿಯ ಭವಿಷ್ಯವನ್ನು ನಿರ್ಧರಿಸಲು ಮಂಗಳವಾರ ಕರೆಯಲಾಗಿದ್ದ ಸಭೆಯನ್ನು ಮುಂದೂಡಲಾ ಗಿದೆ. ಬಿಸಿಸಿಐ ಪದಾಧಿಕಾರಿಗಳು ಮತ್ತು ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ವಿಡಿಯೊ ಕಾನ್ಪರೆನ್ಸ್ ಕಾಲ್ ಮೂಲಕ ಸಭೆ ನಡೆಸ ಬೇಕಾಗಿತ್ತು. ಆದರೆ ಈಗ ಯಾವುದೇ ಚರ್ಚೆಯೇ ನಡೆಯದಿರುವುದರಿಂದ, ಐಪಿಎಲ್ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗುವ ಸಾಧ್ಯತೆ ಇದೆ.

ನಿಗದಿತ ವೇಳಾಪಟ್ಟಿಯ ಪ್ರಕಾರ ಮಾರ್ಚ್ 29ರಂದು ಆರಂಭಗೊಳ್ಳಬೇಕಾಗಿದ್ದ ಐಪಿಎಲ್ ಟೂರ್ನಿಯನ್ನು ಕರೊನಾ ಭೀತಿಯಿಂದಾಗಿ ಏಪ್ರಿಲ್ 15ರವರೆಗೆ ನಡೆಸದಿರಲು ಬಿಸಿಸಿಐ ಈಗಾಗಲೆ ನಿರ್ಧರಿಸಿದೆ. ‘ಮಾನವತ್ವ ಮೊದಲು. ಉಳಿದೆಲ್ಲವೂ ನಂತರದ ಸ್ಥಾನ ಪಡೆಯುತ್ತವೆ. ಸದ್ಯ ಪರಿಸ್ಥಿತಿ ಸುಧಾರಣೆಯನ್ನೇ ಕಂಡಿಲ್ಲ. ಹೀಗಾಗಿ ನಾವು ಯಾವುದೇ ಮಾತುಕತೆ ನಡೆಸುವುದರಲ್ಲಿ ಅರ್ಥವಿಲ್ಲ. ಸದ್ಯ ಐಪಿಎಲ್ ನಡೆಯದಿದ್ದರೆ ಏನೂ ಆಗುವುದಿಲ್ಲ’ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ-ಮಾಲೀಕ ನೆಸ್ ವಾಡಿಯಾ ತಿಳಿಸಿದ್ದಾರೆ. ‘ಈಗಿನ ಪರಿಸ್ಥಿತಿಯಲ್ಲಿ ಏನನ್ನೂ ರ್ಚಚಿಸಲಾಗದು. ಇಡೀ ದೇಶವೇ ಲಾಕ್​ಡೌನ್ ಆಗಿದೆ. ಈಗ ಐಪಿಎಲ್​ಗಿಂತ ಪ್ರಮುಖವಾದ ವಿಷಯಗಳ ಬಗ್ಗೆ ನಾವು ಗಮನಹರಿಸಬೇಕಾಗಿದೆ’ ಎಂದು ಮತ್ತೊಂದು ಫ್ರಾಂಚೈಸಿಯ ಮಾಲೀಕರು ಅಭಿಪ್ರಾಯಪಟ್ಟಿದ್ದಾರೆ. ಪರಿಸ್ಥಿತಿ ಸುಧಾರಣೆ ಕಾಣಬಹುದೆಂಬ ಭರವಸೆಯಿಂದ ಬಿಸಿಸಿಐ, ಐಪಿಎಲ್ ಭವಿಷ್ಯ ನಿರ್ಧರಿಸುವುದನ್ನು ಮುಂದೂಡಿದೆ ಎನ್ನಲಾಗಿದೆ.

ವಿಮೆ ಮೊತ್ತವೂ ಅನುಮಾನ: ಐಪಿಎಲ್​ನಲ್ಲಿ ಪ್ರತಿಯೊಂದಕ್ಕೂ ಬಿಸಿಸಿಐ ಮತ್ತು ಫ್ರಾಂಚೈಸಿಗಳು ವಿಮೆ ಮಾಡಿರುತ್ತವೆ. ಆದರೆ ಈಗ ಸರ್ಕಾರವೇ ಲಾಕ್​ಡೌನ್ ಮಾಡಿರುವುದರಿಂದ ಈ ವಿಮೆಯಿಂದ ಪರಿಹಾರ ಸಿಗುವ ಬಗ್ಗೆ ಅನುಮಾನವಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.  

ಸದ್ಯಕ್ಕೆ ನಮ್ಮ ಬಳಿ ಉತ್ತರವಿಲ್ಲ

ಐಪಿಎಲ್ ಭವಿಷ್ಯದ ಬಗ್ಗೆ ಸದ್ಯಕ್ಕೆ ನನ್ನ ಬಳಿ ಯಾವುದೇ ಉತ್ತರವಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ. ‘ಈಗ ನಾನು ಏನನ್ನೂ ಹೇಳಲಾರೆ. ಈ ಹಿಂದೆ ಟೂರ್ನಿಯನ್ನು ಮುಂದೂಡುವಾಗ ಯಾವ ಸ್ಥಿತಿಯಲ್ಲಿದ್ದೆವೋ, ಈಗಲೂ ಅದೇ ಸ್ಥಿತಿಯಲ್ಲಿದ್ದೇವೆ. ಕಳೆದ 10 ದಿನಗಳಲ್ಲಿ ಏನೂ ಬದಲಾಗಿಲ್ಲ’ ಎಂದು ಗಂಗೂಲಿ ಹೇಳಿದ್ದಾರೆ. ‘ಈಗ ಏನೇ ಯೋಜನೆ ಹಾಕಿಕೊಳ್ಳಲು ಕೂಡ ಸಾಧ್ಯವಾಗುತ್ತಿಲ್ಲ. ಐಸಿಸಿಯ ಫ್ಯೂಚರ್ ಟೂರ್ ಪ್ರೋಗ್ರಾಂ (ಎಫ್​ಟಿಪಿ) ಈಗಾಗಲೆ ನಿಗದಿಯಾಗಿದೆ. ಅದನ್ನು ಬದಲಾಯಿಸಲು ನಮ್ಮಿಂದ ಸಾಧ್ಯವಿಲ್ಲ’ ಎಂದಿದ್ದಾರೆ.

ನನ್ನ ನಗರವನ್ನು (ಕೋಲ್ಕತ) ಈ ರೀತಿ ನೋಡುವೆ (ಲಾಕ್​ಡೌನ್) ಎಂಬ ಯೋಚನೆಯನ್ನೂ ಮಾಡಿರಲಿಲ್ಲ. ಸುರಕ್ಷಿತವಾಗಿರಿ, ಇದು ಶೀಘ್ರದಲ್ಲೇ ಬದಲಾಗಲಿದೆ. ಉತ್ತಮ ದಿನಗಳು ಬರಲಿವೆ. | ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷ