ಕ್ರೀಡೆ

ಯಾರು ಈ 6.4 ಅಡಿ ಎತ್ತರದ ಉಮರ್​ ನಜೀರ್? ರೋಹಿತ್​, ದುಬೆ, ರಹಾನೆಯನ್ನು ಕಾಡಿದ ವೇಗಿಯ ವೇಗಕ್ಕೆ ಕ್ರಿಕೆಟಿಗರು ಫಿದಾ | Umar Nazir

Umar Nazir Mir: ಪ್ರಸಕ್ತ ನಡೆಯುತ್ತಿರುವ ರಣಜಿ ಟ್ರೋಫಿ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಬಹುತೇಕ ಆಟಗಾರರು ಪಾಲ್ಗೊಂಡಿದ್ದಾರೆ. ಕೆಲವು ವರ್ಷಗಳ ನಂತರ ರಣಜಿಗೆ ಮರಳಿರುವ ಭಾರತದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮ, ಶುಭಮನ್ ಗಿಲ್​, ಯಶಸ್ವಿ ಜೈಸ್ವಾಲ್​ ಮತ್ತು ಅಜಿಂಕ್ಯಾ ರಹಾನೆ ಇಲ್ಲಿಯೂ ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಭಾರತದ ಸ್ಟಾರ್​ ಬ್ಯಾಟರ್​ಗಳನ್ನು ಒಂದಂಕಿ ದಾಟಲು ಬಿಡದೆ ಕಾಡಿದ ಜಮ್ಮು-ಕಾಶ್ಮೀರ ತಂಡದ ವೇಗಿ ಉಮರ್​ ನಜೀರ್​ ಈಗ ಕ್ರಿಕೆಟ್​ ಪ್ರಿಯರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬ್ಯಾಟರ್​ಗಳ ಅಬ್ಬರಕ್ಕೆ ಬ್ರೇಕ್​

ರೋಹಿತ್ ಶರ್ಮ, ರಹಾನೆ ಮತ್ತು ಶಿವಂ ದುಬೆ ವಿರುದ್ಧ ತನ್ನ ಅದ್ಭುತ ಬೌಲಿಂಗ್​ ದಾಳಿ ಪ್ರದರ್ಶಿಸಿದ ಆರು ಅಡಿ ಎತ್ತರದ ಉಮರ್​, ಬೌನ್ಸ್​ ಹಾಗೂ ಪೇಸ್​ನಲ್ಲಿಯೇ ಸ್ಟಾರ್​ ಬ್ಯಾಟರ್​ಗಳ ಅಬ್ಬರವನ್ನು ಕಟ್ಟಿಹಾಕುತ್ತಿದ್ದಾರೆ. ದೇಶಿಯ ಕ್ರಿಕೆಟ್​ನಲ್ಲಿ ತನ್ನದೇ ಹೆಸರು ಸ್ಥಾಪಿಸಿಕೊಂಡಿರುವ 31 ವರ್ಷದ ಉಮರ್​ ನಜೀರ್ ಮಿರ್​​, ಶಿವಂ ದುಬೆರನ್ನು ಡಕ್​ ಔಟ್​ ಮಾಡುವಲ್ಲಿ ಯಶಸ್ವಿಯಾದರು. ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಸ್ಟಾರ್​ ಬ್ಯಾಟ್ಸ್​ಮನ್​ಗಳ ವಿಕೆಟ್​ಗಳನ್ನು ಕಬಳಿಸುವ ಮೂಲಕ ಉಮರ್​ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.

ನಜೀರ್ ಪ್ರದರ್ಶನ

2013ರಲ್ಲಿ ಕ್ರಿಕೆಟ್ ಲೋಕಕ್ಕೆ ಪದಾರ್ಪಣೆ ಮಾಡಿದ ಉಮರ್​, ಅಂದಿನಿಂದ ಇಂದಿನವರೆಗೆ ಒಟ್ಟು 57 ಪಂದ್ಯಗಳನ್ನಾಡಿ 138 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ 54 ವಿಕೆಟ್‌ಗಳನ್ನು ಪಡೆದಿದ್ದು, ಟಿ20 ಮ್ಯಾಚ್​ಗಳಲ್ಲಿ ಒಟ್ಟು 32 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಮೂಲತಃ ಪುಲ್ವಾಮಾದವರಾದ ನಜೀರ್​, 6.4 ಅಡಿ ಎತ್ತರ ಇರುವುದೇ ಅವರ ಬೌಲಿಂಗ್​ಗೆ ಪ್ಲಸ್​ ಎನ್ನಲಾಗಿದೆ. 2018-19ರ ದೇವಧರ್ ಟ್ರೋಫಿಗಾಗಿ ಭಾರತ 'ಸಿ' ತಂಡದಲ್ಲಿ ನಜೀರ್​ ಸ್ಥಾನ ಗಿಟ್ಟಿಸಿಕೊಂಡಿದ್ದರು. ದಿಗ್ಗಜ ಬ್ಯಾಟರ್​ ರೋಹಿತ್​ರ ವಿಕೆಟ್​ ಪಡೆದ ಉಮರ್​ ನಜೀರ್​ ಬೌಲಿಂಗ್​ ದಾಳಿಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).