ಕ್ರೀಡೆ

ಗೋವಾ ಚಾಲೆಂಜರ್ಸ್‌ ಅಲ್ಟಿಮೇಟ್ ಟೇಬಲ್ ಟೆನಿಸ್ ಟೂರ್ನಿ ಚಾಂಪಿಯನ್: ಚೆನ್ನೈ ರನ್ನರ್ ಅಪ್

ಪುಣೆ: ಭಾರತದ ಅಗ್ರ ಶ್ರೇಯಾಂಕಿತ ಟೇಬಲ್ ಟಿನಿಸ್ ಪಟು ಹರ್ಮೀತ್ ದೇಸಾಯಿ ಮತ್ತು ವಿಶ್ವ ಚಾಂಪಿಯನ್‌ಷಿಪ್ ಪದಕ ವಿಜೇತ ಅಲ್ವಾರೊ ರೋಬಲ್ಸ್ ಅವರ ನೆರವಿನಿಂದ ಗೋವಾ ಚಾಲೆಂಜರ್ಸ್‌ ತಂಡ ಅಲ್ಟಿಮೇಟ್ ಟೇಬಲ್ ಟೆನಿಸ್ ಸೀಸನ್-4ರ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಚೊಚ್ಚಲ ಪ್ರಶಸ್ತಿ ಗೆದ್ದ ಗೋವಾ ಫ್ರಾಂಚೈಸಿ ಟ್ರೋಫಿ ಮತ್ತು 75 ಲಕ್ಷ ರೂ.ಗಳನ್ನು ತನ್ನದಾಗಿಸಿಕೊಂಡಿದೆ.

ಸೋಮವಾರ ನಡೆದ ೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಲಯನ್ಸ್ ತಂಡವನ್ನು 8-7 ಗೋಲುಗಳಿಂದ ಗೋವಾ ರೋಚಕ ಗೆಲುವು ದಾಖಲಿಸಿತು. ರನ್ನರ್ ಅಪ್ ಚೆನ್ನೈ 50 ಲಕ್ಷ ರೂ. ಬಹುಮಾನ ಮೊತ್ತಕ್ಕೆ ಭಾಜನವಾಯಿತು.

ಪುರುಷರ ಸಿಂಗಲ್ಸ್ನಲ್ಲಿ ಹರ್ಮೀತ್ ದೇಸಾಯಿ 2-1 ರಿಂದ ಬೆನೆಡಿಕ್ಟ ಡುಡಾ ಅವರನ್ನು ಸೋಲಿಸಿ ಗೋವಾ ಚಾಲೆಂಜರ್ಸ್‌ ಗೆ ಉತ್ತಮ ಆರಂಭ ಒದಗಿಸಿದರು. ಲೀಗ್‌ನಲ್ಲಿ ಅಜೇಯರಾಗಿ ಉಳಿದಿದ್ದ ವಿಶ್ವದ 32ನೇ ಶ್ರೇಯಾಂಕಿತ ಡುಡಾ ಮೊದಲ ಗೇಮ್ ಅನ್ನು 11-6 ರಿಂದ ಗೆದ್ದರೆ, ಹರ್ಮೀತ್ ದೇಸಾಯಿ ಎರಡನೇ ಗೇಮ್ ಅನ್ನು 11-4 ರಿಂದ ಗೆದ್ದು ಪಂದ್ಯವನ್ನು ನಿರ್ಣಾಯಕ ಹಂತಕ್ಕೆ ತಳ್ಳಿದರು. ಅಂತಿಮವಾಗಿ ಹರ್ಮೀತ್ 11-8 ಅಂಕಗಳ ಅಂತರದಲ್ಲಿ ಜಯ ಸಾಧಿಸಿ ಪಂದ್ಯವನ್ನು ಗೆದ್ದುಕೊಂಡರು.

ಲೀಗ್‌ನಲ್ಲಿ 200ಕ್ಕೂ ಹೆಚ್ಚು ಅಂಕಗಳಿಸಿದ ಚೆನ್ನೈ ಲಯನ್ಸ್ ಆಟಗಾರ್ತಿ ಯಾಂಗ್ಜಿ ಲಿಯು ಹಾಲಿ ಆವೃತ್ತಿಯಲ್ಲಿ ಅಜೇಯ ಓಟವನ್ನು ಮುಂದುವರಿಸಿ 2-1 ಅಂತರದಿಂದ ಗೋವಾದ ಸುತಾಸಿನಿ ಸಾವೆಟ್ಟಾಬುಟ್ ಅವರನ್ನು ಸೋಲಿಸಿ ಸಮಬಲ ತಂದರು. ಮಿಶ್ರ ಡಬಲ್ಸ್ನಲ್ಲಿ ಅಚಂತಾ ಶರತ್ ಕಮಲ್ ಮತ್ತು ಯಾಂಗ್ಜಿ ಜೋಡಿ ಹರ್ಮೀತ್ ಮತ್ತು ಸುತಾಸಿನಿ 2-1ರಿಂದ ಮಣಿಸಿತು.