Asia Cup 2025: ಭಾರತ ತಂಡವು ಸೆಪ್ಟೆಂಬರ್ 10 ರಂದು ಯುಎಇ ವಿರುದ್ಧ ತಮ್ಮ ಏಷ್ಯಾಕಪ್ 2025 ಅಭಿಯಾನವನ್ನು ಆರಂಭಿಸಲಿದ್ದು. ಟಿ20ಐ ಸ್ವರೂಪದಲ್ಲಿ ಟೀಂ ಇಂಡಿಯಾ ಯುಎಇಯನ್ನು ಒಮ್ಮೆ ಮಾತ್ರ ಎದುರಿಸಿದೆ, ಅದು ಒಂದು ದಶಕದ ಹಿಂದೆ.
ಈ ವಿಷಯವಾಗಿ ಮಾತನಾಡಿರುವ ಯುಎಇ ತಂಡದ ಆರಂಭಿಕ ಆಟಗಾರ ಅಲಿಶನ್ ಶರಫು, ಸೂಪರ್‌ಸ್ಟಾರ್‌ಗಳಿಂದ ತುಂಬಿರುವ ತಂಡದೊಂದಿಗೆ ಆಡಲು ಉತ್ಸುಕವಾಗಿದೆ ಎಂದು ಹೇಳಿದ್ದಾರೆ. ಅವರೆಲ್ಲರೂ ಶ್ರೇಷ್ಠ ಆಟಗಾರರು, ಜಸ್ಪ್ರೀತ್ ಬುಮ್ರಾ ಅಥವಾ ಹಾರ್ದಿಕ್ ಪಾಂಡ್ಯರಂತಹ ಆಟಗಾರರು ಒಬ್ಬರೆ ನಿಂತು ಪಂದ್ಯದ ದಿಕ್ಕನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ, ನಾವು ಅವರಿಗೆ ಕಠಿಣ ಸ್ಪರ್ಧೆ ಒಡ್ಡಲು ಸಿದ್ಧವಾಗಿದ್ದೇವೆ ಎಂದರು.
ಇದನ್ನೂ ಓದಿ:ಭಾರತದಲ್ಲಿ ಭೂಮಿಯೇ ಯುದ್ಧದ ಗೆಲುವಿನ ಸಂಕೇತವಾಗಿರಲಿದೆ; ಸೇನಾ ಮುಖ್ಯಸ್ಥ ಉಪೇಂದ್ರ ದ್ವಿವೇದಿ| Army Chief
ಯುಎಇ ತಂಡ ಇತ್ತೀಚೆಗೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ವಿರುದ್ಧ ತ್ರಿಕೋನ ಸರಣಿಯಲ್ಲಿ ಆಡಿದ ಎಲ್ಲ ಪಂದ್ಯಗಳನ್ನು ಸೋತಿದ್ದು, ಈ ವಿಷಯವಾಗಿ ಮಾತನಾಡಿದ ಶರಫು, ಸೋಲುಗಳ ಹೊರತಾಗಿಯೂ ನಮ್ಮ ತಂಡವು ತನ್ನ ಸಾಮರ್ಥ್ಯದ ಮೇಲೆ ವಿಶ್ವಾಸ ಹೊಂದಿದ್ದು, ಸೂರ್ಯಕುಮಾರ್ ಯಾದವ್ ತಂಡದ ವಿರುದ್ಧ ಉತ್ತಮವಾಗಿ ಆಡಲಿದ್ದೇವೆ ಎಂದರು. ಭಾರತ ವಿರುದ್ಧದ ಪಂದ್ಯದಲ್ಲಿ ನಾವು ಹೆಸರುಗಳ ವಿರುದ್ಧ ಆಡುವುದಿಲ್ಲ, ಬದಲಾಗಿ ನಾವು ಚೆಂಡಿನ ಅರ್ಹತೆಗೆ ತಕ್ಕಂತೆ ಆಡುತ್ತೇವೆ, ನಮ್ಮದೇ ಆದ ಮೂಲಭೂತ ಅಂಶಗಳಿದ್ದು, ಆ ರೀತಿ ನಮ್ಮ ಗಮನವನ್ನು ಕೇಂದ್ರೀಕರಿಸುತ್ತೇವೆ ಎಂದು ಹೇಳಿದರು.
ಯುಎಇ ಈ ಪಂದ್ಯಾವಳಿಯಲ್ಲಿ ನಾಯಕ ಮುಹಮ್ಮದ್ ವಸೀಮ್, ಪವರ್-ಹಿಟ್ಟರ್ ಆಸಿಫ್ ಖಾನ್ ಸೇರಿದಂತೆ ಅನೇಕ ಉತ್ತಮ ಪ್ರತಿಭೆಗಳನ್ನು ಹೊಂದಿದೆ.(ಏಜೆನ್ಸೀಸ್)