ಕ್ರೀಡೆ

RCB ಕ್ಯಾಪ್ಟನ್​ ಸ್ಥಾನಕ್ಕೆ ಇವರಿಬ್ಬರದ್ದೇ ಹೆಸರು! ಯಾರಾಗಲಿದ್ದಾರೆ 'ಬೆಂಗಳೂರು' ನಾಯಕ?

ನವದೆಹಲಿ: ಐಪಿಎಲ್​ ಇತಿಹಾಸದಲ್ಲಿ ಒಂದು ಬಾರಿಯೂ ಕಪ್​ ಗೆಲ್ಲದ ಹಾಗೂ ಹೀನಾಯ ಸೋಲುಗಳನ್ನು ಕಂಡಿರುವ ಫ್ರಾಂಚೈಸಿ ಎಂದರೆ ಅದು ರಾಯಲ್​ ಚಾಲೆಂಜರ್ಸ್​ ಬೆಂಗಳೂರು. ಫೈನಲ್​ ಹಣಾಹಣಿಗೆ ಬಂದು ಚಾಂಪಿಯನ್ಸ್​ ಪಟ್ಟ ಪಡೆಯದೇ ಇದ್ದರೂ ಸಹ ಸೋಲಿನ ಮೂಲಕವೇ ಇಂದು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಂತರಾಳದಿಂದ ಸಂಪಾದಿಸಿದ ತಂಡ ಎಂಬ ಹೆಗ್ಗಳಿಕೆ ಇರುವುದು ಆರ್​ಸಿಬಿಗೆ ಮಾತ್ರ. ಐಪಿಎಲ್​ನಲ್ಲಿ ಅತ್ಯಂತ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಫ್ರಾಂಚೈಸಿ ಯಾವುದಾದರೂ ಇದ್ದರೆ ಅದು ಆರ್​ಸಿಬಿ ಎಂಬುದು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗೂ ಗೊತ್ತಿರುವ ಸಂಗತಿ. ಸೋಲೇ ಇರಲಿ, ಗೆಲುವೇ ಇರಲಿ, ತಂಡವನ್ನು ಪ್ರತಿ ಹಂತದಲ್ಲೂ ಹುಚ್ಚೆದ್ದು ಪ್ರೋತ್ಸಾಹಿಸುವುದು ಈ ಟೀಮ್​ನ ಅಭಿಮಾನಿಗಳ ಹುಟ್ಟುಗುಣ ಎಂದರೆ ಖಂಡಿತ ತಪ್ಪಾಗಲಾರದು. ಇಷ್ಟರ ಮಟ್ಟಿಗೆ ಪ್ರೀತಿ ಇಟ್ಟುಕೊಂಡಿರುವ ಫ್ಯಾನ್ಸ್​, ಮತ್ತೊಮ್ಮೆ ವಿರಾಟ್​ ಕೊಹ್ಲಿ ಹೆಸರನ್ನು (RCB Captain) ಮುನ್ನೆಲೆಗೆ ತಂದಿದ್ದಾರೆ.

ಆರ್​ಸಿಬಿಗೆ ಕೊಹ್ಲಿಯೇ ಗತ್ತು

ಇನ್ನು ಇಂದು ನಡೆದ ಐಪಿಎಲ್​ ರಿಟೆನ್ಶನ್​ ಪ್ರಕ್ರಿಯೆಯಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿನ ಮುಖವಾಣಿ ಆಗಿರುವ ವಿರಾಟ್​ ಕೊಹ್ಲಿಯನ್ನು ಫ್ರಾಂಚೈಸಿ ಎಂದಿನಂತೆ ಉಳಿಸಿಕೊಂಡಿದೆ. ಈ ಬಾರಿ 21 ಕೋಟಿ ರೂ.ಗೆ ಕೊಹ್ಲಿರನ್ನು ತಮ್ಮ ತಂಡದಲ್ಲಿ ಇರಿಸಿಕೊಂಡಿದೆ. ಇದು ಆರ್​ಸಿಬಿ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದ್ದು, ಕ್ಯಾಪ್ಟನ್ ಆಗಿ 'ರನ್​ಮಷಿನ್'​ಅವರನ್ನೇ ಆಯ್ಕೆ ಮಾಡಿಕೊಳ್ಳಿ ಎಂದು ಜಾಲತಾಣಗಳ ಮುಖೇನ ಫ್ಯಾನ್ಸ್​ ಒತ್ತಾಯ ಮಾಡಿದ್ದಾರೆ. ಆದ್ರೆ, ಈ ವಿಷಯದಲ್ಲಿ ಫ್ರಾಂಚೈಸಿಗೆ ಗೊಂದಲ ಇರುವುದು ಖಚಿತ. ಅದಕ್ಕೆ ಬಲವಾದ ಕಾರಣವೂ ಇದೆ.

ಇವರಿಬ್ಬರ ಹೆಸರು ಮೊದಲಿಗೆ

17ನೇ ಆವೃತ್ತಿಯಲ್ಲಿ ಫಾಫ್ ಡು ಪ್ಲೆಸಿಸ್​ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ಕ್ಯಾಪ್ಟನ್ ಆಗಿ ಮುನ್ನಡೆಸಿದ್ದೇ ಆದರೂ ಉತ್ತಮ ಫಲಿತಾಂಶ ದೊರಕಲಿಲ್ಲ. ಆದರೆ, ವಿರಾಟ್​ ಕೊಹ್ಲಿ ನಾಯಕತ್ವದಲ್ಲಿ ಆರ್​ಸಿಬಿ ಮುಂದುವರಿದರೆ, ಫಲಿತಾಂಶದ ಜತೆಗೆ ಆಟಕ್ಕೆ ಇನ್ನಷ್ಟು ಕಳೆ ಬರಲಿದೆ ಎಂಬುದು ಅಭಿಮಾನಿಗಳ ಅನಿಸಿಕೆ, ಅಭಿಪ್ರಾಯ. ಹೀಗಾಗಿ ಆರ್​ಸಿಬಿಗೆ ಮತ್ತೊಮ್ಮೆ ವಿರಾಟ್​ ಅವರೇ ಕ್ಯಾಪ್ಟನ್ ಆಗಲಿ ಎಂಬುದು ಫ್ಯಾನ್ಸ್​ಗಳ ಆಶಯ. ಇದು ಒಂದೆಡೆಯಾದರೆ, ಆಕ್ಷನ್​ಗೆ ಬಂದಿರುವ ಕನ್ನಡಿಗ ಕೆ.ಎಲ್​. ರಾಹುಲ್​ ಮೇಲೆ ಫ್ರಾಂಚೈಸಿ ಕಣ್ಣಿಟ್ಟಿರುವುದು ಮತ್ತೊಂದೆಡೆ.

ಕೆ.ಎಲ್​. ರಾಹುಲ್​- ವಿರಾಟ್​ ಕೊಹ್ಲಿ

ಆರ್​ಸಿಬಿಗೆ ನೂತನ ನಾಯಕನ ಅವಶ್ಯಕತೆ ಹೆಚ್ಚಾಗಿದ್ದು, ಈ ಸಾಲಿನಲ್ಲಿ ವಿರಾಟ್​ ಹಾಗೂ ರಾಹುಲ್ ಹೆಸರು ಮೊದಲಿಗಿದೆ. ಕೊಹ್ಲಿ ಅವರ ಉಪಸ್ಥಿತಿ ಈಗಾಗಲೇ ತಂಡದಲ್ಲಿದೆ. ಆದರೆ, ಕೆ.ಎಲ್​. ರಾಹುಲ್​ ಇನ್ನು ತಂಡದಲ್ಲಿ ಸ್ಥಾನ ಪಡೆದಿಲ್ಲ. ಅದಕ್ಕೆ, ಹರಾಜು ಪ್ರಕ್ರಿಯೆ ನಡೆಯಬೇಕು, ಅಲ್ಲಿ ಮ್ಯಾನೇಜ್​ಮೆಂಟ್​ ಕನ್ನಡಿಗನಿಗೆ ಮಣೆ ಹಾಕಲಿದೆಯಾ ಎಂಬುದನ್ನು ಖಚಿತ ಪಡಿಸಿಕೊಳ್ಳಬೇಕು. ಆಕ್ಷನ್​ನಲ್ಲಿ ಏನಾದರೂ ರಾಹುಲ್​ರನ್ನು ಆರ್​ಸಿಬಿ ಕರೆದುಕೊಂಡರೆ, ಖಂಡಿತವಾಗಿ ತಂಡದ ಹೊಸ ಕ್ಯಾಪ್ಟನ್​ ಆಗಿ ಕೆ.ಎಲ್​. ರಾಹುಲ್​ ಬರುವುದು ಬಹುತೇಕ ಗ್ಯಾರಂಟಿ ಎಂದೇ ವರದಿಗಳು ಉಲ್ಲೇಖಿಸಿವೆ. ಈ ಎಲ್ಲಾ ಗೊಂದಲಗಳಿಗೆ ಹರಾಜು ಪ್ರಕ್ರಿಕೆಯಲ್ಲಿ ಸ್ಪಷ್ಟ ಉತ್ತರ ಸಿಗುವ ನಿರೀಕ್ಷೆಯಿದೆ,(ಏಜೆನ್ಸೀಸ್).