ಕ್ರೀಡೆ

ಭಾರತದ ಎಡವಟ್ಟು, ಬೆಂಗಳೂರು ಟೆಸ್ಟ್‌ನಲ್ಲಿ ಕಿವೀಸ್ ಪ್ರಾಬಲ್ಯ: ತಪ್ಪೊಪ್ಪಿಕೊಂಡ ರೋಹಿತ್

ಬೆಂಗಳೂರು; ಎರಡೂವರೆ ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಸಾಕ್ಷಿಯಾಗುವ ಗಾರ್ಡನ್‌ಸಿಟಿಯ ಕ್ರಿಕೆಟ್ ಅಭಿಮಾನಿಗಳ ಆಸೆಗೆ ಮೊದಲ ದಿನ ಮಳೆ ತಣ್ಣೀರು ಎರಚಿದರೆ, ಎರಡನೇ ದಿನ ಟೀಮ್ ಇಂಡಿಯಾ ಬ್ಯಾಟರ್‌ಗಳು ನೀರಸ ಪ್ರದರ್ಶನದ ಮೂಲಕ ನಿರಾಸೆ ಮೂಡಿಸಿದರು.

ಹವಾಮಾನ ವೈಪರಿತ್ಯದ ನಡುವೆ ಮೊದಲು ಬ್ಯಾಟಿಂಗ್ ಮಾಡುವ ಕೆಟ್ಟ ನಿರ್ಧಾರ ಕೈಗೊಂಡ ಭಾರತ ತಂಡ, ತವರಿನ ಅಂಗಣದಲ್ಲಿ ಕನಿಷ್ಠ ಮೊತ್ತಕ್ಕೆ ಇನಿಂಗ್ಸ್ ಮುಗಿಸಿತು. ವೇಗಿ ಮ್ಯಾಟ್ ಹೆನ್ರಿ (15ಕ್ಕೆ5) ಮಾರಕ ದಾಳಿಗೆ ಕುಸಿದ ರೋಹಿತ್ ಶರ್ಮ ಪಡೆ ನಂತರ ಎಡಗೈ ಆರಂಭಿಕ ಡೆವೋನ್ ಕಾನ್ ವೇ (91 ರನ್, 105 ಎಸೆತ, 11 ಬೌಂಡರಿ, 3 ಸಿಕ್ಸರ್) ಬ್ಯಾಟಿಂಗ್ ಎದುರು ಮಂಕಾಯಿತು. ಇದರೊಂದಿಗೆ ಪ್ರವಾಸಿ ನ್ಯೂಜಿಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯರ ಎದುರು ಮೊದಲ ದಿನ ಸಂಪೂರ್ಣ ಮೇಲುಗೈ ಸಾಧಿಸಿದೆ.

ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಬೇಗನೆ ಆರಂಭಗೊಂಡ ಪಂದ್ಯದ ಎರಡನೇ ದಿನ ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ, 31.2 ಓವರ್‌ಗಳಲ್ಲಿ ಕೇವಲ 46 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್, ಡೆವೋನ್ ಕಾನ್‌ವೇ ಹಾಗೂ ಟಾಮ್ ಲಾಥನ್ ಒದಗಿಸಿದ ಉತ್ತಮ ಆರಂಭದ ನೆರವಿನಿಂದ ದಿನದಂತ್ಯಕ್ಕೆ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 180 ರನ್‌ಕಲೆಹಾಕಿ ಸುಸ್ಥಿತಿಯಲ್ಲಿದೆ.

ತಪ್ಪೊಪ್ಪಿಕೊಂಡ ರೋಹಿತ್: ಉದ್ಯಾನನಗರಿಯಲ್ಲಿ 2 ದಿನಗಳಿಂದ ಸುರಿದ ಜಡಿಮಳೆಯಿಂದಾಗಿ ಪಿಚ್ ಅನ್ನು ಸಂಪೂರ್ಣವಾಗಿ ಹೊದಿಕೆಯಿಂದ ಮುಚ್ಚಲಾಗಿತ್ತು. ಆದರೂ, ಬುಧವಾರ ಸಂಜೆ ಹಾಗೂ ಗುರುವಾರ ಬೆಳಗ್ಗೆ ಎರಡೂ ದಿನ ಪಿಚ್ ಪರಿಶೀಲಿಸಿದ ರೋಹಿತ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ಅಚ್ಚರಿ ಎನಿಸಿತು. 4-5ನೇ ದಿನ ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡುವುದರಿಂದ ಎರಡನೇ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟ ಎಂದು ರೋಹಿತ್ ಟಾಸ್ ವೇಳೆ ಸಮರ್ಥಿಸಿಕೊಂಡರು.

ದಿನದಾಟದ ನಂತರ ಸುದ್ದಿಗೋಷ್ಠಿಗೆ ಹಾಜರಾದ ರೋಹಿತ್, ಪಿಚ್ ಅರಿಯುವಲ್ಲಿ ಎಡವಿದೆ ಎಂದು ತಪ್ಪೊಪ್ಪಿಕೊಂಡರು. 365 ದಿನಗಳಲ್ಲಿ ನಾವು ತೆಗದುಕೊಳ್ಳುವ ಒಂದೆರೆಡು ನಿರ್ಧಾರಗಳು ಈ ರೀತಿ ಪರಿಣಾಮ ಬೀರುತ್ತವೆ. ನಾಯಕನಾಗಿ ಈ ಸ್ಕೋರ್ ನೋಡಲು ಬೇಸರವಾಗುತ್ತಿದೆ ಎಂದರು. ಫೀಲ್ಡಿಂಗ್‌ನಲ್ಲೂ 2-3 ಕ್ಯಾಚ್‌ಗಳನ್ನು ಕೈಬಿಟ್ಟಿದರ ಜತೆಗೆ ಇಬ್ಬರು ವೇಗಿಗಳ ಜತೆಗೆ ಕಣಕ್ಕಿಳಿದಿದ್ದು ಭಾರತಕ್ಕೆ 2ನೇ ದಿನ ಹಿನ್ನಡೆ ಎನಿಸಿತು. ಜತೆಗೆ 2 ಡಿಆರ್‌ಎಸ್‌ಗಳನ್ನು ಕಳೆದುಕೊಂಡಿದೆ.