ನವದೆಹಲಿ: ಒಲಿಂಪಿಕ್ಸ್ ಸಿದ್ಧತೆ ಮತ್ತು ಸ್ಪರ್ಧೆಯ ವೇಳೆ ಸಂಪೂರ್ಣವಾಗಿ ಪಿಸ್ತೂಲ್ನೊಂದಿಗೆ ಸಮಯ ಕಳೆದಿದ್ದ ಅವಳಿ ಕಂಚು ವಿಜೇತೆ ಮನು ಭಾಕರ್ ಇನ್ನು 3 ತಿಂಗಳು ಶೂಟಿಂಗ್ನಿಂದ ಸಂಪೂರ್ಣ ದೂರ ಉಳಿಯಲಿದ್ದಾರೆ. ಹಾಗೆಂದು ಇದು ಅವರಿಗೆ ಪೂರ್ಣ ರಜಾದಿನಗಳಾಗಿರುವುದಿಲ್ಲ. ಈ ಸಮಯದಲ್ಲಿ ಅವರು ಭರತನಾಟ್ಯ, ಕುದುರೆ ಸವಾರಿ, ವಯೋಲಿನ್ ನುಡಿಸುವುದು, ಮಾರ್ಷಿಯಲ್ ಆರ್ಟ್ಸ್ ಮತ್ತು ಸ್ಕೇಟಿಂಗ್ನಂಥ ಹವ್ಯಾಸಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
"ನನಗೆ ನೃತ್ಯ ಇಷ್ಟ. ನಾನು ಭರತನಾಟ್ಯವನ್ನು ಕಲಿಯುತ್ತಿರುವೆ. ಅದು ನನಗಿಷ್ಟ. ಫ್ರಾನ್ಸ್ನಲ್ಲಿ ಶೂಟಿಂಗ್ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾಗ, ಭರತನಾಟ್ಯ ಕ್ಲಾಸ್ನಲ್ಲಿ ಪಾಲ್ಗೊಳ್ಳಲು (ತಮಿಳುನಾಡಿನಿಂದ ಆನ್ಲೈನ್ ಕ್ಲಾಸ್) ಸಮಯ ಸಿಕ್ಕಿರಲಿಲ್ಲ. ಇನ್ನು ಭರತನಾಟ್ಯ ತರಗತಿಗೆ ನೇರವಾಗಿ ಹಾಜರಾಗಿ ಕಲಿಯುವೆ. ಜತೆಗೆ ವಯೋಲಿನ್ ಕಲಿಕೆ ಮುಂದುವರಿಸುವೆ. ಶೂಟಿಂಗ್ಗೆ ಮುನ್ನ ಕರಾಟೆ ಕಲಿತಿದ್ದೆ. ಮತ್ತೆ ಅದರಲ್ಲಿ ತೊಡಗಿಸಿಕೊಳ್ಳುವೆ. ನನಗೆ ಕುದುರೆ ಸವಾರಿ ಮತ್ತು ಸ್ಕೇಟಿಂಗ್ ಕೂಡ ಇಷ್ಟ. ಕಳೆದ ಕೆಲಸಮಯದಿಂದ ಕುದುರೆ ಸವಾರಿ ಕಲಿಯತ್ತಿರುವೆ. ಸ್ಕೆ$ಡೈವಿಂಗ್, ಸ್ಕೂಬಾ ಡೈವಿಂಗ್ ಬಗ್ಗೆಯೂ ಆಸಕ್ತಿ ಇದೆ' ಎಂದು 22 ವರ್ಷದ ಮನು ಭಾಕರ್ ಸುದ್ದಿಸಂಸ್ಥೆ ಜತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ. 3 ತಿಂಗಳ ಬಿಡುವಿನಿಂದಾಗಿ ಮನು, ಅಕ್ಟೋಬರ್ನಲ್ಲಿ ನವದೆಹಲಿಯಲ್ಲಿ ನಡೆಯಲಿರುವ ಶೂಟಿಂಗ್ ವಿಶ್ವಕಪ್ ಫೈನಲ್ನಲ್ಲಿ ಭಾಗವಹಿಸುವುದಿಲ್ಲ. ಮುಂದಿನ ಸ್ಪರ್ಧೆಗಳಿಗೆ ಸಂಪೂರ್ಣ ಫಿಟ್ ಆಗುವ ದೃಷ್ಟಿಯಿಂದ ಈ ಬಿಡುವು ಅಗತ್ಯ ಎಂದು ಅವರ ಕೋಚ್ ಜಸ್ಪಾಲ್ ರಾಣಾ ತಿಳಿಸಿದ್ದಾರೆ.
ಶೂಟಿಂಗ್ ಅಭ್ಯಾಸದ ವೇಳೆ ಯೋಗಾ ಮಾಡುವುದಕ್ಕಾಗಿ ಬೆಳಗ್ಗೆ 6 ಗಂಟೆಗೆ ಏಳಬೇಕಾಗಿತ್ತು. ಅಷ್ಟು ಬೇಗ ಏಳುವುದನ್ನು ನಾನು ಬಹಳ ದ್ವೇಷಿಸುತ್ತಿದ್ದೆ ಎಂದು ಮನು ಹೇಳಿದ್ದಾರೆ. ಒಲಿಂಪಿಕ್ಸ್ ಪದಕ ಗೆಲುವಿನ ಬಳಿಕ ಮನು, ವಯೋಲಿನ್ನಲ್ಲಿ ರಾಷ್ಟ್ರಗೀತೆ ನುಡಿಸಿದ ವಿಡಿಯೋ ವೈರಲ್ ಆಗಿತ್ತು. ಅದು ತನ್ನ ಸಹೋದರ ಉಡುಗೊರೆ ನೀಡಿದ್ದ ವಯೋಲಿನ್. ಅದರಲ್ಲಿ ನಾನು ವಯೋಲಿನ್ನ ಮೂಲಭೂತ ವಿಷಯಗಳನ್ನು ಮಾತ್ರ ಕಲಿತಿರುವೆ. ಪೂರ್ಣ ಪರಿಣತಿಯನ್ನು ಇನ್ನೂ ಪಡೆದಿಲ್ಲ ಎಂದು ಹರಿಯಾಣದ ಜಾಜ್ಜರ್ನ ಮನು ತಿಳಿಸಿದ್ದಾರೆ.