ಕ್ರೀಡೆ

'ಟರ್ಬನ್ಡ್​ ಟೊರ್ನಾಡೊ' ಖ್ಯಾತಿಯ ಶತಾಯುಷಿ ಮ್ಯಾರಥಾನ್​ ಓಟಗಾರ ಫೌಜಾ ದುರ್ಮರಣ!: ಪ್ರಧಾನಿ ಮೋದಿ ಸಂತಾಪ

ಜಲಂಧರ್​: ಪಂಜಾಬ್​ನ ಶತಾಯುಷಿ ಮ್ಯಾರಥಾನ್​ ಓಟಗಾರ ಫೌಜಾ ಸಿಂಗ್​ ಸೋಮವಾರ ಸಂಜೆ ವಾಕಿಂಗ್​ಗೆ ಹೋಗಿದ್ದ ವೇಳೆ ಕಾರು ಡಿಕ್ಕಿಯಾಗಿ ಮೃತಪಟ್ಟಿದ್ದಾರೆ. ವಿಶ್ವದ ಅತಿಹಿರಿಯ ಮ್ಯಾರಥಾನ್​ ಓಟಗಾರ ಎನಿಸಿದ್ದ ಅವರಿಗೆ 114 ವರ್ಷ ವಯಸ್ಸಾಗಿತ್ತು.

ಜಲಂಧರ್​ ಜಿಲ್ಲೆಯ ಬಿಯಾಸ್​ ಹಳ್ಳಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಾರು ಡಿಕ್ಕಿಯಾಗಿ ಅವರ ತಲೆಗೆ ಗಾಯವಾಗಿತ್ತು. ಕೂಡಲೆ ಸಮೀಪದ ಖಾಸಗಿ ಆಸ್ಪತ್ರೆಗೆ ಅವರನ್ನು ಕರೆದೊಯ್ದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟರು. ಅಪಘಾತದ ನಂತರ ಕಾರು ಚಾಲಕ ಪರಾರಿಯಾಗಿದ್ದು, ಆತನ ಪತ್ತೆಗೆ ಜಲಂಧರ್​ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಜತೆಗೆ ಚಾಲಕನ ವಿರುದ್ಧ ಅತಿವೇಗ ಮತ್ತು ರ್ನಿಲಕ್ಷ್ಯದ ಚಾಲನೆ ಪ್ರಕರಣ ದಾಖಲಿಸಲಾಗಿದೆ.

1911ರಲ್ಲಿ ರೈತರ ಕುಟುಂಬದಲ್ಲಿ ಜನಿಸಿದ್ದ  ಫೌಜಾ ಸಿಂಗ್ ​, ಬಾಲ್ಯದಲ್ಲಿ ಅತ್ಯಂತ ದುರ್ಬಲ ಕಾಲುಗಳನ್ನು ಹೊಂದಿದ್ದ ಕಾರಣ 5ನೇ ವಯಸ್ಸಿನ ವೇಳೆಗೆ ನಡೆಯಲು ಆರಂಭಿಸಿದ್ದರು. ವೃದ್ದಾಪ್ಯದಲ್ಲಿ ಹಲವಾರು ಅಂತಾರಾಷ್ಟ್ರೀಯ ಮ್ಯಾರಥಾನ್​ ಸ್ಪರ್ಧೆಗಳಲ್ಲಿ ಭಾಗವಹಿಸಿ ಜಾಗತಿಕವಾಗಿಯೂ ಗಮನಸೆಳೆದಿದ್ದರು. ಜತೆಗೆ ಟರ್ಬನ್ಡ್​ ಟೊರ್ನಾಡೊ (ಪೇಟ ತೊಟ್ಟ ಸುಂಟರಗಾಳಿ) ಎಂದೇ ಹೆಸರಾಗಿದ್ದರು. ಜೀವನೋತ್ಸಾಹಕ್ಕೆ ಸ್ಫೂರ್ತಿಯಾಗಿದ್ದ ಜತೆಗೆ ಅವರ ದೈಹಿಕ ಸಹಿಷ್ಣುತೆ ಮತ್ತು ಕ್ರೀಡಾ ಮನೋಭಾವವೂ ಎಲ್ಲರ ಹೃದಯ ಗೆದ್ದಿತ್ತು. ಪತ್ನಿ, ಪುತ್ರಿ ಮೃತಪಟ್ಟ ಬಳಿಕ 1990ರಿಂದ ಪುತ್ರನೊಂದಿಗೆ ಲಂಡನ್​ನಲ್ಲಿ ನೆಲೆಸಿದ್ದ ಅವರು ಮೂರು ವರ್ಷಗಳ ಹಿಂದೆಯಷ್ಟೇ ತವರೂರಿಗೆ ಮರಳಿದ್ದರು. 2012ರ ಲಂಡನ್​ ಒಲಿಂಪಿಕ್ಸ್​ನ ಕ್ರೀಡಾಜ್ಯೋತಿ ಹಿಡಿದವರಲ್ಲಿ ಒಬ್ಬರಾಗಿದ್ದರು ಮತ್ತು ಬ್ರಿಟನ್​ ರಾಣಿಯಿಂದಲೂ ಗೌರವ ಪಡೆದಿದ್ದರು.

1999ರಲ್ಲಿ ಚಾರಿಟಿಗಾಗಿ ತನ್ನ 89ನೇ ವಯಸ್ಸಿನಲ್ಲಿ ಮ್ಯಾರಥಾನ್​ ಓಡಲು ಆರಂಭಿಸಿದ್ದ ಫೌಜಾ ಸಿಂಗ್, ಪ್ರತಿಷ್ಠಿತ ಲಂಡನ್​, ನ್ಯೂಯಾರ್ಕ್​, ಹಾಂಕಾಂಗ್​ ಮ್ಯಾರಥಾನ್​ಗಳಲ್ಲೂ ಓಡಿದ್ದರು. ಟೊರಾಂಟೊದ ಆಹ್ವಾನಿತ ಓಟದ ಸ್ಪರ್ಧೆಗೆ ಅವರದೇ ಹೆಸರಿಡಲಾಗಿದೆ. ತಮ್ಮ ವಯೋಮಿತಿ ವಿಭಾಗದಲ್ಲಿ ಅವರು ಹಲವಾರು ವಿಶ್ವದಾಖಲೆಗಳನ್ನೂ ಬರೆದಿದ್ದಾರೆ. ಆದರೆ ತಮ್ಮ ವಯಸ್ಸು ಖಚಿತಪಡಿಸುವ ಜನನ ಪ್ರಮಾಣಪತ್ರ ಹೊಂದಿರದ ಕಾರಣ ಈ ದಾಖಲೆಗಳು ಗಿನ್ನೆಸ್​ ವರ್ಲ್ಡ್​ ರೆಕಾರ್ಡ್ಸ್​ನಲ್ಲಿ ಸ್ಥಾನ ಪಡೆದಿಲ್ಲ.

ಸಿಖ್​ ಸಂಸತಿಯನ್ನು ಎಲ್ಲರಿಗೂ ಮನದಟ್ಟು ಮಾಡುವ ಗುರಿಯನ್ನೂ ಹೊಂದಿದ್ದರು. ಪಂಜಾಬ್​ನ ಮಾಜಿ ಮಾಹಿತಿ ಆಯುಕ್ತ ಮತ್ತು ಲೇಖಕ ಖುಶ್ವಂತ್​ ಸಿಂಗ್​ "ದಿ ಟರ್ಬನ್ಡ್​ ಟೊರ್ನಾಡೊ' ಹೆಸರಿನಲ್ಲಿ ಫೌಜಾ ಸಿಂಗ್ ಸಿಂಗ್​ ಅವರ 114 ಪುಟಗಳ ಜೀವನಚರಿತ್ರೆಯನ್ನೂ ಬರೆದಿದ್ದರು.

ಪ್ರಧಾನಿ ಮೋದಿ ಸಂತಾಪ

ಫೌಜಾ ಸಿಂಗ್  ​ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಕಂಬನಿ ಮಿಡಿದಿದ್ದು, "ವಿಶಿಷ್ಟ ವ್ಯಕ್ತಿತ್ವ ಮತ್ತು ಫಿಟ್ನೆಸ್​ ವಿಷಯದಲ್ಲಿ ಭಾರತದ ಯುವಕರನ್ನು ಪ್ರೇರೇಪಿಸಿದ ರೀತಿಯಿಂದಾಗಿ ಅವರು ಅಸಾಧಾರಣವಾಗಿದ್ದರು.  ಫೌಜಾ ಸಿಂಗ್  ಜೀ ಸಾವಿನಿಂದ ತೀವ್ರ ದುಃಖವಾಗಿದೆ' ಎಂದಿದ್ದಾರೆ.