ಕ್ರೀಡೆ

ಮಂಗಳವಾರ ಐಪಿಎಲ್ ಭವಿಷ್ಯನಿರ್ಧಾರ?

kumarvrl

ನವದೆಹಲಿ: ಈಗಾಗಲೆ ಏಪ್ರಿಲ್ 15ರವರೆಗೆ ಮುಂದೂಡಿಕೆ ಯಾಗಿರುವ ಐಪಿಎಲ್ 13ನೇ ಆವೃತ್ತಿಯ ಭವಿಷ್ಯದ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಮಂಗಳವಾರ (ಮಾರ್ಚ್ 24) ಮಹತ್ವದ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ. ಅಂದು 8 ಫ್ರಾಂಚೈಸಿ ಮಾಲೀಕರ ಜತೆಗೆ ಕಾನ್ಪರೆನ್ಸ್ ಕಾಲ್ ಮೂಲಕ ಸಭೆ ನಡೆಸಲಿರುವ ಬಿಸಿಸಿಐ ಮತ್ತು ಐಪಿಎಲ್ ಆಡಳಿತ ಮಂಡಳಿಯ ಅಧಿಕಾರಿಗಳು, ಟೂರ್ನಿಯನ್ನು ಇನ್ನಷ್ಟು ಸಮಯ ಮುಂದೂಡುವ ಅಥವಾ ರದ್ದುಗೊಳಿಸುವ ಬಗ್ಗೆ ನಿರ್ಧರಿಸುವ ಸಾಧ್ಯತೆ ಇದೆ.

ಭಾನುವಾರದಿಂದ ದೇಶದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿವೆ. ಏಪ್ರಿಲ್ 15ರವರೆಗೆ ವಿದೇಶಿ ಪ್ರವಾಸಿಗರಿಗೆ ವೀಸಾ ನೀಡುವ ಪ್ರಕ್ರಿಯೆಯನ್ನೂ ಅಮಾನತಿನಲ್ಲಿಡಲಾಗಿದೆ. ವಿದೇಶಿ ಕ್ರಿಕೆಟಿಗರಿಲ್ಲದೆ ಐಪಿಎಲ್ ಆಯೋಜಿಸುವ ಚಿಂತನೆಗೆ ಫ್ರಾಂಚೈಸಿಗಳು ಈಗಾಗಲೆ ತೀವ್ರ ವಿರೋಧ ವ್ಯಕ್ತಪಡಿಸಿವೆ. ದೇಶದಲ್ಲಿ ಸದ್ಯ ಎಲ್ಲ ಕ್ರೀಡಾ ಚಟುವಟಿಕೆಗಳೂ ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಈ ಎಲ್ಲ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ, ಐಪಿಎಲ್ ಭವಿಷ್ಯವನ್ನು ಬೇಗನೆ ನಿರ್ಧರಿಸುವುದು ಅಗತ್ಯವಾಗಿದೆ.

ಮುಂಬೈನಲ್ಲಿ ಕರೊನಾ ಕಳವಳ ಹೆಚ್ಚಾದ ಬೆನ್ನಲ್ಲೇ ಬಿಸಿಸಿಐ ತನ್ನ ಎಲ್ಲ ಉದ್ಯೋಗಿಗಳಿಗೆ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಈಗಾಗಲೆ ಸೂಚಿಸಿದೆ. ಹೀಗಾಗಿ ಬಿಸಿಸಿಐ ಕೇಂದ್ರ ಕಚೇರಿ ಸಂಪೂರ್ಣವಾಗಿ ಮುಚ್ಚಿದ್ದು, ಅಲ್ಲಿ ಸಭೆ ಸೇರುವುದು ಅಸಾಧ್ಯವಾಗಿದೆ. ಹೋಟೆಲ್​ಗಳಲ್ಲೂ ಸಭೆ ಸೇರಲು ಸದ್ಯಕ್ಕೆ ಸರ್ಕಾರಿ ನಿಯಮದ ಪ್ರಕಾರ ಅವಕಾಶವಿಲ್ಲ. ಇದರಿಂದ ಕಾನ್ಪರೆನ್ಸ್ ಕಾಲ್ ಮೂಲಕ ಎಲ್ಲರೂ ಸಂವಹನ ನಡೆಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಹಾಲಿ ಯೋಜನೆಯ ಪ್ರಕಾರ ಐಪಿಎಲ್ ಟೂರ್ನಿಯ ಎಲ್ಲ 60 ಪಂದ್ಯಗಳನ್ನು ಪೂರ್ಣಗೊಳಿಸಲು ಕನಿಷ್ಠ 37 ದಿನಗಳ ಕಾಲಾವಕಾಶ ಅಗತ್ಯವಾಗಿದೆ. -ಪಿಟಿಐ/ಏಜೆನ್ಸೀಸ್

ಮೇ 28ರವರೆಗೆ ಇಂಗ್ಲೆಂಡ್ ಕ್ರಿಕೆಟ್ ಸ್ತಬ್ಧ

ಮೇ 28ರವರೆಗೆ ಇಂಗ್ಲೆಂಡ್ ಮತ್ತು ವೇಲ್ಸ್​ನಲ್ಲಿ ಯಾವುದೇ ವೃತ್ತಿಪರ ಕ್ರಿಕೆಟ್ ಪಂದ್ಯಗಳನ್ನು ನಡೆಸದಿರಲು ನಿರ್ಧರಿಸಲಾಗಿದೆ. ಇದರಿಂದಾಗಿ ಕೌಂಟಿ ಕ್ರಿಕೆಟ್ ಋತು ಕನಿಷ್ಠ 7 ವಾರ ತಡವಾಗಿ ಆರಂಭವಾಗಲಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) ತಿಳಿಸಿದೆ. ಇದರಿಂದ ಜೂನ್, ಜುಲೈ ಮತ್ತು ಆಗಸ್ಟ್​ನಲ್ಲಿ ಕ್ರಿಕೆಟ್ ಮುಂದುವರಿಯಲಿದ್ದು, ಜೂನ್​ನಲ್ಲಿ ನಿಗದಿಯಂತೆಯೇ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿ ಮತ್ತು ಭಾರತ ಮಹಿಳಾ ತಂಡದೆದುರಿನ ಸರಣಿ ನಡೆಯುವ ನಿರೀಕ್ಷೆ ಇದೆ. ಮುಂಬರುವ ದಿನಗಳಲ್ಲಿ ಪರಿಸ್ಥಿತಿಯನ್ನು ಪರಿಶೀಲಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಇಸಿಬಿ ತಿಳಿಸಿದೆ. ಈ ಸಂಕಷ್ಟದ ಸಮಯದಲ್ಲಿ ಆಟಗಾರರು, ಸಿಬ್ಬಂದಿ ಮತ್ತು ಅಭಿಮಾನಿಗಳ ಸಹಿತ ಸಂಪೂರ್ಣ ಕ್ರಿಕೆಟ್ ಕುಟುಂಬದ ಹಿತರಕ್ಷಣೆಗೆ ಆದ್ಯತೆ ನೀಡುವುದು ಅಗತ್ಯ ಎಂದು ಇಸಿಬಿ ಹೇಳಿದೆ. ಇಂಗ್ಲೆಂಡ್ ಕ್ರಿಕೆಟ್ ಋತು ಮಾರ್ಚ್ 24ರಂದು ಆರಂಭವಾಗಬೇಕಾಗಿತ್ತು ಮತ್ತು ಕೌಂಟಿ ಚಾಂಪಿಯನ್​ಷಿಪ್ ಏಪ್ರಿಲ್ 12ರಂದು ಶುರುವಾಗಿ ಮೇ 27ರವರೆಗೆ ನಡೆಯಬೇಕಾಗಿತ್ತು.

ಕ್ರಿಕೆಟಿಗ ಶ್ರೇಯಸ್ ಅಯ್ಯರ್ ಈಗ ಜಾದೂಗಾರ!

ಕರೊನಾ ಭಯದಿಂದಾಗಿ ದೇಶದ ಎಲ್ಲ ಕ್ರಿಕೆಟಿಗರು ಸದ್ಯ ಸ್ವಯಂ ದಿಗ್ಬಂಧನದಲ್ಲಿದ್ದಾರೆ. ಈ ಸಮಯದಲ್ಲಿ ಹೆಚ್ಚಿನ ಕ್ರಿಕೆಟಿಗರು ಫಿಟ್ನೆಸ್​ನತ್ತ ಗಮನಹರಿಸಿದ್ದರೆ, ತಾರಾ ಕ್ರಿಕೆಟಿಗರು ಕರೊನಾ ಜಾಗೃತಿ ಮೂಡಿಸುವ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಸಾರುತ್ತಿದ್ದಾರೆ. ಈ ನಡುವೆ ಮುಂಬೈ ಬ್ಯಾಟ್ಸ್​ಮನ್ ಶ್ರೇಯಸ್ ಅಯ್ಯರ್ ವಿಶಿಷ್ಟ ಹಾದಿ ಹಿಡಿದಿದ್ದು, ತಮ್ಮ ಜಾದು ಕಲೆಯ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಸಹೋದರಿ ನತಾಶಾ ಜತೆಗೂಡಿ ಅವರು ಪ್ರದರ್ಶಿಸಿರುವ ಕಾರ್ಡ್ ಮ್ಯಾಜಿಕ್​ನ ವಿಡಿಯೊವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಇದಕ್ಕೆ ಬಿಸಿಸಿಐ ಕೂಡ ಮೆಚ್ಚುಗೆ ವ್ಯಕ್ತಪಡಿಸಿದೆ. ಇಸ್ಪೀಟು ಎಲೆಗಳ ಗುಚ್ಛದಿಂದ ಸಹೋದರಿ ತನಗೆ ತೋರಿಸದೆ ಎತ್ತಿದ ಕಾರ್ಡ್ ಯಾವುದೆಂದು ಶ್ರೇಯಸ್ ನಿಖರವಾಗಿ ಗುರುತಿಸುವುದೇ ಈ ಮ್ಯಾಜಿಕ್ ಆಗಿದೆ. ಸದ್ಯ ಏಕದಿನ ಕ್ರಿಕೆಟ್​ನಲ್ಲಿ ಭಾರತ ತಂಡದ ಮಧ್ಯಮ ಕ್ರಮಾಂಕದ ಕಾಯಂ ಆಟಗಾರರಾಗಿರುವ ಶ್ರೇಯಸ್, ಐಪಿಎಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸಬೇಕಾಗಿದೆ.

ಸ್ಕಾಟ್ಲೆಂಡ್ ಮಾಜಿ ಕ್ರಿಕೆಟಿಗನಿಗೆ ಕರೊನಾ

ಸ್ಕಾಟ್ಲೆಂಡ್​ನ ಮಾಜಿ ಕ್ರಿಕೆಟಿಗ ಮಜಿದ್ ಹಕ್ ಕರೊನಾ ವೈರಸ್​ನಿಂದ ಬಳಲುತ್ತಿದ್ದಾರೆ. ಪಾಕ್ ಮೂಲದ 37 ವರ್ಷದ ಮಜಿದ್ ಗ್ಲಾಸ್ಗೋದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಫ್ ಸ್ಪಿನ್ನರ್ ಆಗಿದ್ದ ಅವರು ಸ್ಕಾಟ್ಲೆಂಡ್ ಪರ 2006ರಿಂದ 2015ರ ನಡುವೆ 54 ಏಕದಿನ ಮತ್ತು 24 ಟಿ20 ಪಂದ್ಯಗಳನ್ನು ಆಡಿದ್ದರು. ‘ಶೀಘ್ರದಲ್ಲಿಯೇ ಮನೆಗೆ ಮರಳುವ ನಿರೀಕ್ಷೆಯಲ್ಲಿದ್ದೇನೆ. ನನ್ನ ಶೀಘ್ರ ಚೇತರಿಕೆಗಾಗಿ ಪ್ರಾರ್ಥಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು’ ಎಂದು ಮಜಿದ್ ಹಕ್ ಟ್ವೀಟಿಸಿದ್ದಾರೆ. ಸ್ಕಾಟ್ಲೆಂಡ್​ನಲ್ಲಿ ಇದುವರೆಗೆ 266 ಕರೊನಾ ಪ್ರಕರಣಗಳು ಪತ್ತೆಯಾಗಿವೆ. ಮಜಿದ್ 2015ರ ಏಕದಿನ ವಿಶ್ವಕಪ್​ನಲ್ಲೂ ಸ್ಕಾಟ್ಲೆಂಡ್ ಪರ ಆಡಿದ್ದರು.

ಲಂಕಾದಲ್ಲೂ ಕ್ರಿಕೆಟ್ ಸ್ಥಗಿತ

ಕರೊನಾ ಭೀತಿಯಿಂದಾಗಿ ಶ್ರೀಲಂಕಾದಲ್ಲಿ ಕರ್ಫ್ಯೂ ಜಾರಿಯಾದ ಬೆನ್ನಲ್ಲೇ ದೇಶದ ಎಲ್ಲ ಕ್ರಿಕೆಟ್ ಚಟುವಟಿಕೆಗಳು ಸ್ಥಗಿತಗೊಂಡಿವೆ. ಲಂಕಾದ ವಾರ್ಷಿಕ ಶಾಲಾ ಟೂರ್ನಿಯಲ್ಲಿ ಮಾರ್ಚ್ 12 ಮತ್ತು 14ರಂದು ಥಾಮಸ್ ಕಾಲೇಜ್ ಮತ್ತು ರಾಯಲ್ ಕಾಲೇಜ್ ನಡುವೆ ನಡೆದ ಪಂದ್ಯವನ್ನು ಕೊಲಂಬೊದ ಸಿಂಹಶೀಸ್ ಸ್ಪೋರ್ಟ್ಸ್ ಕ್ಲಬ್​ನಲ್ಲಿ ಸಾವಿರಾರು ಪ್ರೇಕ್ಷಕರು ವೀಕ್ಷಿಸಿದ್ದರು. ಈ ಪೈಕಿ ಒಬ್ಬ ಪ್ರೇಕ್ಷಕನಿಗೆ ಕರೊನಾ ವೈರಸ್ ಇದ್ದುದು ನಂತರ ನಡೆದ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದರಿಂದಾಗಿ ಪಂದ್ಯದ ವೇಳೆ ಆತನ ಸಂಪರ್ಕಕ್ಕೆ ಬಂದ ಎಲ್ಲರಿಗೂ ಸ್ವಯಂ ದಿಗ್ಬಂಧನದಲ್ಲಿರಲು ಸೂಚಿಸಲಾಗಿದೆ. ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಷೆ ಈ ಪಂದ್ಯವನ್ನು ರದ್ದುಗೊಳಿಸಲು ಮನವಿ ಸಲ್ಲಿಸಿದ್ದರೂ, ಅದಕ್ಕೆ ಯಾರೂ ಸೂಕ್ತವಾಗಿ ಸ್ಪಂದಿಸಿರಲಿಲ್ಲ. ಈ ಮುನ್ನ ಶ್ರೀಲಂಕಾದಲ್ಲಿ ನಿಗದಿಯಾಗಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಮುಂದೂಡಿಕೆಯಾಗಿತ್ತು. ಇದರ ನಡುವೆಯೂ ದೇಶೀಯ ಪಂದ್ಯಗಳನ್ನು ಮುಂದುವರಿಯಲು ಅವಕಾಶ ನೀಡಲಾಗಿತ್ತು.