ತ್ರೀಸಾ-ಗಾಯತ್ರಿ ಜೋಡಿ ಪಿಟಿಐ
ಕ್ರೀಡೆ

ಸಯ್ಯದ್​ ಮೋದಿ ಬ್ಯಾಡ್ಮಿಂಟನ್: ಫೈನಲ್​ಗೇರಿದ ತ್ರೀಸಾ-ಗಾಯತ್ರಿ, ತನ್ವಿ ಶರ್ಮ

ಆತಿಥೇಯ ಭಾರತಕ್ಕೆ ಭಾನುವಾರ ಅವಳಿ ಪ್ರಶಸ್ತಿಯ ನಿರೀಕ್ಷೆ

ಲಖನೌ: ಆತಿಥೇಯ ಭಾರತದ ತ್ರೀಸಾ ಜೋಲಿ-ಗಾಯತ್ರಿ ಗೋಪಿಚಂದ್​ ಮತ್ತು ತನ್ವಿ ಶರ್ಮ ಅವರು ಸಯ್ಯದ್​ ಮೋದಿ ಇಂಡಿಯಾ ಅಂತಾರಾಷ್ಟ್ರೀಯ ಸೂಪರ್​-300 ಬ್ಯಾಡ್ಮಿಂಟನ್​ ಟೂರ್ನಿಯಲ್ಲಿ ಕ್ರಮವಾಗಿ ಮಹಿಳೆಯರ ಡಬಲ್ಸ್​ ಮತ್ತು ಸಿಂಗಲ್ಸ್​ ವಿಭಾಗದಲ್ಲಿ ಫೈನಲ್​ಗೇರಿದ್ದಾರೆ. ಇದರೊಂದಿಗೆ ಭಾರತಕ್ಕೆ ಭಾನುವಾರ ಅವಳಿ ಪ್ರಶಸ್ತಿ ಒಲಿಯುವ ನಿರೀಕ್ಷೆ ಮೂಡಿದೆ.

ಹ್ಯಾಟ್ರಿಕ್​ ಪ್ರಶಸ್ತಿ ನಿರೀಕ್ಷೆಯಲ್ಲಿರುವ ಅಗ್ರ ಶ್ರೇಯಾಂಕಿತ ತ್ರೀಸಾ-ಗಾಯತ್ರಿ ಜೋಡಿ ಶನಿವಾರ ನಡೆದ ಸೆಮಿೈನಲ್​ ಪಂದ್ಯದಲ್ಲಿ 3ನೇ ಶ್ರೇಯಾಂಕಿತ ಯೂಕ್ರೇನ್​ನ ಪೊಲಿನಾ ಬುಹ್ರೋವಾ ಮತ್ತು ಯೆಹಿನಿಯಾ ಕಂಟೆಮೈರ್​ ಜೋಡಿಯನ್ನು 13-21, 21-10, 21-12 ಗೇಮ್​ಗಳಿಂದ ಪರಾಭವಗೊಳಿಸಿತು. ಈ ಮೂಲಕ ತ್ರೀಸಾ&ಗಾಯತ್ರಿ ಸತತ 3ನೇ ಬಾರಿ ಟೂರ್ನಿಯ ಫೈನಲ್​ಗೇರಿದ್ದು, 4ನೇ ಶ್ರೇಯಾಂಕಿತ ಇಂಡೋನೇಷ್ಯಾದ ಇಸ್ಯಾನಾ ಸೈಹಿರಾ ಮಿದಾ ಮತ್ತು ರಿಂಜನಿ ಕೆವಿನ್ನರ ನಸ್ಟಿನ್​ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.

ಮಿಶ್ರ ಡಬಲ್ಸ್​ ಸೆಮಿಫೈನಲ್​ನಲ್ಲಿ ಭಾರತದ ಸಾತ್ವಿಕ್​ ರೆಡ್ಡಿ ಕನಪುರಂ ಮತ್ತು ರೆಶಿಕಾ ಉದಯಸೂರರ್ಯನ್​ ಜೋಡಿ ನಿರಾಸೆ ಅನುಭವಿಸಿತು. ಸಾತ್ವಿಕ್​-ರೆಶಿಕಾ ಜೋಡಿ ಮಲೇಷ್ಯಾದ ವೀ ಯೀ ಹೆರ್ನ್​-ವನೀ ಗೋಬಿ ಜೋಡಿಯ ಎದುರು 17-21, 18-21ರಿಂದ ಪರಾಭವಗೊಂಡಿತು.

ಪ್ರಶಸ್ತಿ ಸನಿಹ ತನ್ವಿ ಶರ್ಮ

2ನೇ ಶ್ರೇಯಾಂಕಿತೆ ತನ್ವಿ ಶರ್ಮ ಸೆಮಿಫೈನಲ್​ನಲ್ಲಿ ದೇಶಬಾಂಧವೆ ಹಾಗೂ 3ನೇ ಶ್ರೇಯಾಂಕಿತೆ ಉನ್ನತಿ ಹೂಡಾ ವಿರುದ್ಧ 11-21, 21-10, 21-13 ಗೇಮ್​ಗಳಿಂದ ಗೆಲುವು ಸಾಧಿಸಿದರು. 17 ವರ್ಷದ ತನ್ವಿ ಈಗ ಟೂರ್ನಿಯ ಅತಿ ಕಿರಿಯ ಚಾಂಪಿಯನ್​ ಎನಿಸಿಸುವ ಅವಕಾಶ ಹೊಂದಿದ್ದಾರೆ. ಆಲ್​ ಇಂಡಿಯನ್​ ಉಪಾಂತ್ಯ ಕಾದಾಟದಲ್ಲಿ ತನ್ವಿ ಮೊದಲ ಗೇಮ್​ ಸೋತರೂ, ನಂತರದ 2 ಗೇಮ್​ಗಳಲ್ಲಿ 19 ವರ್ಷದ ಉನ್ನತಿಗೆ ತಿರುಗೇಟು ನೀಡಿದರು. ಪಂಜಾಬ್​ನ ಹೋಶಿಯಾರ್​ಪುರದ ತನ್ವಿ ಫೈನಲ್​ನಲ್ಲಿ 4ನೇ ಶ್ರೇಯಾಂಕಿತೆ ಥಾಯ್ಲೆಂಡ್​ನ ಸುಪನಿದ ಕಟೆಥೊಂಗ್​ ವಿರುದ್ಧ ಸೆಣಸಲಿದ್ದಾರೆ. ಸುಪನಿದ ಸೆಮೀಸ್​ನಲ್ಲಿ ಅಗ್ರ ಶ್ರೇಯಾಂಕಿತೆ ಜಪಾನ್​ನ ರಿಕೊ ಗುಂಜಿಗೆ 21-16, 20-22, 21-10ರಿಂದ ಆಘಾತಕಾರಿ ಸೋಲುಣಿಸಿದರು.