ನವದೆಹಲಿ: ಬೌಂಡರಿ-ಸಿಕ್ಸರ್‌ಗಳ ಸುರಿಮಳೆಗೈದ ಸನ್‌ರೈಸರ್ಸ್ ಹೈದರಾಬಾದ್ ತಂಡ ಐಪಿಎಲ್-17ರಲ್ಲಿ ಮತ್ತೆ ರನ್ ಪ್ರವಾಹ ಹರಿಸಿ ಸತತ 4ನೇ ಜಯದ ಸಂಭ್ರಮ ಕಂಡಿದೆ. ಎಡಗೈ ಬ್ಯಾಟರ್ ಟ್ರಾವಿಸ್ ಹೆಡ್ (89 ರನ್, 32 ಎಸೆತ, 11 ಬೌಂಡರಿ, 6 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಸನ್‌ರೈಸರ್ಸ್ ತಂಡ ತನ್ನ 7ನೇ ಲೀಗ್ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್‌ನ ದಿಟ್ಟ ಹೋರಾಟದ ನಡುವೆಯೂ 67 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ ಪ್ಯಾಟ್ ಕಮ್ಮಿನ್ಸ್ ಪಡೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದರೆ, ರಿಷಭ್ ಪಂತ್ ಪಡೆ 7ನೇ ಸ್ಥಾನಕ್ಕೆ ಇಳಿದಿದೆ
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಸನ್‌ರೈಸರ್ಸ್, ಟ್ರಾವಿಸ್ ಹೆಡ್- ಅಭಿಷೇಕ್ ಶರ್ಮ (46 ರನ್, 12 ಎಸೆತ, 2 ಬೌಂಡರಿ, 6 ಸಿಕ್ಸರ್) ಪವರ್‌ಪ್ಲೇನಲ್ಲಿ ಒದಗಿಸಿದ ದಾಖಲೆಯ ಆರಂಭ ಹಾಗೂ ಆಲ್ರೌಂಡರ್ ಶಾಬಾಜ್ ಅಹ್ಮದ್ (59* ರನ್, 29 ಎಸೆತ, 2 ಬೌಂಡರಿ, 5 ಸಿಕ್ಸರ್) ಚೊಚ್ಚಲ ಅರ್ಧಶತಕದ ಬಲದಿಂದ 7 ವಿಕೆಟ್‌ಗೆ 266 ರನ್ ಪೇರಿಸಿತು. ಪ್ರತಿಯಾಗಿ ಜೇಕ್ ಫ್ರೇಸರ್ ಮೆಕ್‌ಗುರ್ಕ್ (65 ರನ್,18 ಎಸೆತ, 5 ಬೌಂಡರಿ, 7 ಸಿಕ್ಸರ್) ಅಬ್ಬರ ಹಾಗೂ ನಾಯಕ ರಿಷಭ್ ಪಂತ್ (44 ರನ್, 35 ಎಸೆತ, 5 ಬೌಂಡರಿ, 1 ಸಿಕ್ಸರ್) ಹೋರಾಟದ ನಡುವೆಯೂ ಡೆಲ್ಲಿ 19.1 ಓವರ್‌ಗಳಲ್ಲಿ 199 ರನ್‌ಗಳಿಗೆ ಸರ್ವಪತನ ಕಂಡಿತು.
ಫ್ರೇಸರ್-ಪಂತ್ ಪ್ರತಿರೋಧ: ಬೃಹತ್ ಮೊತ್ತದ ಚೇಸಿಂಗ್‌ಗೆ ಇಳಿದ ಡೆಲ್ಲಿ ಪರ ಇಂಪ್ಯಾಕ್ಟ್ ಪ್ಲೇಯರ್ ಪೃಥ್ವಿ ಷಾ (16) ಮೊದಲ ಓವರ್‌ನಲ್ಲಿ ಸತತ 4 ಬೌಂಡರಿ ಸಿಡಿಸಿ ಡಗೌಟ್ ಸೇರಿದರೆ, ಅನುಭವಿ ಡೇವಿಡ್ ವಾರ್ನರ್ (1) ನಿರಾಸೆ ಮೂಡಿಸಿದರು. ನಂತರ 22 ವರ್ಷದ ಜೇಕ್ ಮೆಕ್‌ಗುರ್ಕ್ ಡೆಲ್ಲಿ ಚೇಸಿಂಗ್‌ಗೆ ಬಲ ತುಂಬಿದರು. ಇನಿಂಗ್ಸ್‌ನ 3ನೇ ಓವರ್‌ನಲ್ಲಿ ವಾಷಿಂಗ್ಟನ್‌ಗೆ 30 ರನ್ ಚಚ್ಚಿದ 15 ಎಸೆತಗಳಲ್ಲಿ ಡೆಲ್ಲಿ ಪರ ವೇಗದ ಅರ್ಧಶತಕ ಗಳಿಸಿದರು. ಇವರಿಗೆ ಅಭಿಷೇಕ್ ಪೊರೆಲ್ (42) ಸಾಥ್ ನೀಡಿದರು. ಇವರಿಬ್ಬರು 3ನೇ ವಿಕೆಟ್‌ಗೆ 30 ಎಸೆತದಲ್ಲಿ 84 ರನ್ ಕಸಿದರು. ಇದರಲ್ಲಿ ್ರೇಸರ್ ಒಬ್ಬರೇ 60 ರನ್ ಚಚ್ಚಿದರು. 7ನೇ ಓವರ್‌ನಲ್ಲಿ 100ರ ಗಡಿ ದಾಟಿದ ಡೆಲ್ಲಿ ಹೋರಾಟ ಪ್ರದರ್ಶಿಸಿತು. ಆಗ ಮಯಾಂಕ್ ಮಾರ್ಕಂಡೆ (17ಕ್ಕೆ 2) ಇವರಿಬ್ಬರ ವಿಕೆಟ್ ಕಬಳಿಸಿ ಡೆಲ್ಲಿ ಚೇಸಿಂಗ್‌ಗೆ ಬ್ರೇಕ್ ಹಾಕಿದರು. ಟ್ರಿಸ್ಟಾನ್ ಸ್ಟಬ್ಸ್ (10), ಲಲಿತ್ ಯಾದವ್ (7) ಬೇಗನೆ ನಿರ್ಗಮಿಸಿದರು. ಕೊನೆಯಲ್ಲಿ ಪಂತ್ ಏಕಾಂಗಿ ಹೋರಾಟ ನಡೆಸಿ ಸೋಲಿನ ಅಂತರ ತಗ್ಗಿಸಿದರು. ಕೊನೆಯಲ್ಲಿ ನಟರಾಜನ್ (19ಕ್ಕೆ 4) ಕಡಿವಾಣ ಹೇರಿದರು.