ಸಿಡ್ನಿ: ನಾಥನ್ ಲ್ಯಾನ್ (50ಕ್ಕೆ 5, ಪಂದ್ಯದಲ್ಲಿ 10 ವಿಕೆಟ್) ಮಾರಕ ದಾಳಿ ನೆರವಿನಿಂದ ಆತಿಥೇಯ ಆಸ್ಟ್ರೇಲಿಯಾ ತಂಡ ಟ್ರಾನ್ಸ್-ಟಾಸ್ಮನ್ ಟ್ರೋಫಿ ಟೆಸ್ಟ್ ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ 279 ರನ್ಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿತು. ಇದರಿಂದ 3 ಪಂದ್ಯಗಳ ಸರಣಿಯನ್ನು ಆಸ್ಟ್ರೇಲಿಯಾ 3-0ಯಿಂದ ವಶಪಡಿಸಿಕೊಂಡಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ, ಐಸಿಸಿ ಟೆಸ್ಟ್ ಚಾಂಪಿಯನ್ಷಿಪ್ನಲ್ಲಿ 296 ಅಂಕಗಳೊಂದಿಗೆ 2ನೇ ಸ್ಥಾನ ಕಾಯ್ದುಕೊಂಡಿತು. ಭಾರತ ತಂಡ 360 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಸೋಮವಾರ ಮುಕ್ತಾಯಗೊಂಡ ಪಂದ್ಯದಲ್ಲಿ ವಿಕೆಟ್ ನಷ್ಟವಿಲ್ಲದೆ 40 ರನ್ಗಳಿಂದ 4ನೇ ದಿನದಾಟ ಆರಂಭಿಸಿದ ಆಸೀಸ್ ತಂಡ, ಆರಂಭಿಕ ಡೇವಿಡ್ ವಾರ್ನರ್ (111 ರನ್, 159 ಎಸೆತ, 9 ಬೌಂಡರಿ) ಹಾಗೂ ಮಾರ್ನಸ್ ಲಬುಶೇನ್ (59ರನ್, 74 ಎಸೆತ, 3ಬೌಂಡರಿ) ಜೋಡಿಯ ಭರ್ಜರಿ ಬ್ಯಾಟಿಂಗ್ ನೆರವಿನಿಂದ 2 ವಿಕೆಟ್ಗೆ 217 ರನ್ಗಳಿಸಿ 2ನೇ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಈ ನಡುವೆ ವಾರ್ನರ್-ಲಬುಶೇನ್ ಪಿಚ್ ಮೇಲೆ ಓಡಿದ್ದರಿಂದ 5 ಪೆನಾಲ್ಟಿ ರನ್ ನೀಡಿದ ಅಂಪೈರ್, ಅದನ್ನು ಕಿವೀಸ್ ಮೊದಲ ಇನಿಂಗ್ಸ್ಗೆ ಸೇರಿಸಿದ್ದರು. ಇದರಿಂದ 416 ರನ್ ಗುರಿ ಪಡೆದ ನ್ಯೂಜಿಲೆಂಡ್, 47.5 ಓವರ್ಗಳಲ್ಲಿ ಕೇವಲ 136 ರನ್ಗಳಿಗೆ ಸರ್ವಪತನ ಕಂಡು ಇನ್ನೊಂದು ದಿನ ಬಾಕಿ ಇರುವಂತೆಯೇ ಶರಣಾಯಿತು. ಆಸ್ಟ್ರೇಲಿಯಾ ತಂಡ ಪರ್ತ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯವನ್ನು 296 ರನ್ಗಳಿಂದ ಜಯಿಸಿದರೆ, ಮೆಲ್ಬೋರ್ನ್ನಲ್ಲಿ ನಡೆದ 2ನೇ ಪಂದ್ಯವನ್ನು 247 ರನ್ಗಳಿಂದ ಗೆಲುವು ದಾಖಲಿಸಿತ್ತು.
ಆಸ್ಟ್ರೇಲಿಯಾ: 454 ಮತ್ತು 2 ವಿಕೆಟ್ಗೆ 217 ಡಿಕ್ಲೇರ್ (ವಾರ್ನರ್ 111*, ಬರ್ನ್ಸ್ 40, ಲಬುಶೇನ್ 59), ನ್ಯೂಜಿಲೆಂಡ್: 256 ಮತ್ತು 136 (ಗ್ರಾಂಡ್ಹೋಮ್ 52, ರಾಸ್ ಟೇಲರ್ 22, ನಾಥನ್ ಲ್ಯಾನ್ 50ಕ್ಕೆ 5, ಮಿಚೆಲ್ ಸ್ಟಾರ್ಕ್ 25ಕ್ಕೆ 3).
2ನೇ ಸ್ಥಾನಕ್ಕೇರಿದ ಆಸೀಸ್: ಕ್ಲೀನ್ಸ್ವೀಪ್ ಗೆಲುವಿನೊಂದಿಗೆ ಆಸ್ಟ್ರೇಲಿಯಾ ತಂಡ ಐಸಿಸಿ ಟೆಸ್ಟ್ ರ್ಯಾಂಕಿಂಗ್ನಲ್ಲಿ 108 ಅಂಕದೊಂದಿಗೆ 5ರಿಂದ 2ನೇ ಸ್ಥಾನಕ್ಕೇರಿದರೆ, ನ್ಯೂಜಿಲೆಂಡ್ ತಂಡ 105 ಅಂಕದೊಂದಿಗೆ 2ರಿಂದ 3ನೇ ಸ್ಥಾನಕ್ಕೆ ಕುಸಿತ ಕಂಡಿತು. ಭಾರತ 120 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ 102 ಅಂಕದೊಂದಿಗೆ 4ನೇ ಸ್ಥಾನಕ್ಕಿಳಿಯಿತು.
ರಾಸ್ ಟೇಲರ್ ದಾಖಲೆ: ನ್ಯೂಜಿಲೆಂಡ್ ತಂಡದ ಅನುಭವಿ ಬ್ಯಾಟ್ಸ್ಮನ್ ರಾಸ್ ಟೇಲರ್ 22 ರನ್ಗಳಿಸಿ ಔಟಾದರೂ ದಾಖಲೆ ಬರೆದರು. ಟೆಸ್ಟ್ ಕ್ರಿಕೆಟ್ನಲ್ಲಿ ನ್ಯೂಜಿಲೆಂಡ್ ಪರ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆ ಅವರದಾಯಿತು. 99ನೇ ಟೆಸ್ಟ್ ಪಂದ್ಯವಾಡಿದ 35 ವರ್ಷದ ಟೇಲರ್ 19 ಶತಕ ಸೇರಿದಂತೆ 7,174 ರನ್ ಬಾರಿಸಿದ್ದಾರೆ. ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ (111 ಟೆಸ್ಟ್, 7,172 ರನ್) ದಾಖಲೆ ಹಿಂದಿಕ್ಕಿದರು.