ಶಾರ್ಜಾ: ನಾಯಕಿ ಸ್ಮತಿ ಮಂದನಾ (68 ರನ್, 49 ಎಸೆತ, 5 ಬೌಂಡರಿ, 3 ಸಿಕ್ಸರ್) ಹಾಗೂ ಬೌಲರ್‌ಗಳ ಸಂಘಟಿತ ಹೋರಾಟದ ಲವಾಗಿ ಟ್ರೈಲ್‌ಬ್ಲೇಜರ್ಸ್ ತಂಡ ಮಹಿಳೆಯರ ಮಿನಿ-ಐಪಿಎಲ್ ಖ್ಯಾತಿಯ ಮಹಿಳಾ ಟಿ20 ಚಾಲೆಂಜ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಕನ್ನಡತಿ ರಾಜೇಶ್ವರಿ ಗಾಯಕ್ವಾಡ್ ಒಳಗೊಂಡ ಟ್ರೈಲ್‌ಬ್ಲೇಜರ್ಸ್ ತಂಡ ಸೂಪರ್‌ನೋವಾಸ್ ತಂಡವನ್ನು 16 ರನ್‌ಗಳಿಂದ ಸೋಲಿಸಿತು. ಈ ಸೋಲಿನೊಂದಿಗೆ ಹರ್ಮಾನ್‌ಪ್ರೀತ್ ಬಳಗ ಹ್ಯಾಟ್ರಿಕ್ ಪ್ರಶಸ್ತಿ ಗೆಲುವನ್ನು ತಪ್ಪಿಸಿಕೊಂಡಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟ್ರೈಲ್‌ಬ್ಲೇಜರ್ಸ್ ತಂಡ 8 ವಿಕೆಟ್‌ಗೆ 118 ರನ್‌ಗಳಿಸಿತು. ಪ್ರತಿಯಾಗಿ ಸಲ್ಮಾ ಖತುನ್ (18ಕ್ಕೆ 3) ಹಾಗೂ ದೀಪ್ತಿ ಶರ್ಮ (9ಕ್ಕೆ 2) ಮಾರಕ ದಾಳಿಗೆ ನಲುಗಿದ ಸೂಪರ್‌ನೋವಾಸ್ 7 ವಿಕೆಟ್‌ಗೆ 102 ರನ್‌ಗಳಿಸಲಷ್ಟೇ ಶಕ್ತವಾಯಿತು.
ಟ್ರೈಲ್‌ಬ್ಲೇಜರ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದ ಬಳಿಕ ಇನಿಂಗ್ಸ್ ಆರಂಭಿಸಿದ ಸೂಪರ್‌ನೋವಾಸ್ ಆರಂಭದಲ್ಲೇ ಭರವಸೆಯ ಚಾಮರಿ ಅಟಪಟ್ಟು (6) ವಿಕೆಟ್ ಕಳೆದುಕೊಂಡಿತು. ಜೆಮೀಮಾ ರೋಡ್ರಿಗಸ್ (13), ತನು ಭಾಟಿಯಾ (14) ವಿಫಲರಾದರು. ಒಂದು ಹಂತದಲ್ಲಿ ಹರ್ಮಾನ್‌ಪ್ರೀತ್ ಕೌರ್ (30) ಹಾಗೂ ಶಶಿಕಲಾ ಸಿರಿವರ್ಧನೆ (19) ಜೋಡಿ ಪ್ರತಿಹೋರಾಟಕ್ಕೆ ಯತ್ನಿಸಿದರೂ ಟ್ರೈಲ್‌ಬ್ಲೇಜರ್ಸ್ ಬೌಲರ್‌ಗಳು ಅವಕಾಶಗಳು ನೀಡಲಿಲ್ಲ.
ಸ್ಮತಿ ಮಂದನಾ ಏಕಾಂಗಿ ಹೋರಾಟ, ರಾಧಾ ಕಡಿವಾಣ
ಸ್ಮತಿ ಮಂದನಾ ಹಾಗೂ ಡಿಯೇಂಡ್ರ ಡಾಟಿನ್ (20 ರನ್, 32 ಎಸೆತ, 1 ಬೌಂಡರಿ) ಜೋಡಿ ಬಿರುಸಿನ ಆರಂಭ ನೀಡಿತು. ಆರಂಭಿಕ ಓವರ್‌ಗಳಲ್ಲಿ ಸ್ಫೋಟಿಸಿದ ಈ ಜೋಡಿ ಬೃಹತ್ ಮೊತ್ತ ಪೇರಿಸುವ ಅವಕಾಶ ಹೆಚ್ಚಿಸಿತು. ಆದರೆ, ಇನಿಂಗ್ಸ್ ಸಾಗುತ್ತಿದ್ದರಂತೆ ಸೂಪರ್‌ನೋವಾಸ್ ಬೌಲರ್‌ಗಳು ಕಡಿವಾಣ ಹಾಕಿದರು. ಈ ಜೋಡಿ ಮೊದಲ ವಿಕೆಟ್‌ಗೆ 71 ರನ್ ಕಲೆಹಾಕಿತು. ಪೂನಂ ಯಾದವ್ (23ಕ್ಕೆ 1) ಡಾಟಿನ್ ವಿಕೆಟ್ ಕಬಳಿಸಿ ಈ ಟ್ರೈಲ್‌ಬ್ಲೇಜರ್ಸ್ ಕುಸಿತಕ್ಕೆ ಮುನ್ನುಡಿ ಬರೆದರು. ಬಳಿಕ ಏಕಾಂಗಿ ನಿರ್ವಹಣೆ ತೋರಿದ ಸ್ಮತಿ, ಶಶಿಕಲಾ ಸಿರಿವರ್ಧನೆ ಎಸೆತದಲ್ಲಿ ಸ್ಟಂಪ್ ಔಟಾದರು. ಬಳಿಕ ಬಂದ ಬ್ಯಾಟುಗಾರ್ತಿಯರು ಬಂದಷ್ಟೇ ವೇಗವಾಗಿ ವಾಪಸಾದರು.
ರಾಧಾ ಯಾದವ್ ಮಾರಕ ದಾಳಿಗೆ ಸ್ಮತಿ ಮಂದನಾ ಪಡೆ ನಲುಗಿತು. ಕಡೇ ಓವರ್‌ನಲ್ಲಿ ರಾಧಾ ಒಂದು ರನ್ ನೀಡಿದ ಮೂರು ವಿಕೆಟ್ ಕಬಳಿಸಿದರು. ಅಂತಿಮ ಎಸೆತದಲ್ಲಿ ಥಾಯ್ಲೆಂಡ್ ಆಟಗಾರ್ತಿ ನಟಾಕಮ್ ಚಂತಮ್ (0) ರನೌಟ್ ಬಲೆಗೆ ಬಿದ್ದರು. ಕಡೇ ಓವರ್‌ನಲ್ಲಿ ಟ್ರೈಲ್‌ಬ್ಲೇಜರ್ಸ್ ಒಟ್ಟು 4 ವಿಕೆಟ್ ಕಳೆದುಕೊಂಡಿತು. ಒಂದು ಹಂತದಲ್ಲಿ ಸುಲಭವಾಗಿ 140ರ ಗಡಿ ದಾಟುವ ಅವಕಾಶ ಹೊಂದಿದ್ದ ಟ್ರೈಲ್‌ಬ್ಲೇಜರ್ಸ್ 17 ರನ್ ಅಂತರದಲ್ಲಿ 6 ವಿಕೆಟ್ ಕೈಚೆಲ್ಲಿತು.
ಟ್ರೈಲ್‌ಬ್ಲೇಜರ್ಸ್: 8 ವಿಕೆಟ್‌ಗೆ 118 (ಸ್ಮತಿ ಮಂದನಾ 68, ಡಾಟಿನ್ 20, ರಿಚಾ ಘೋಷ್ 10, ರಾಧಾ ಯಾದವ್ 16ಕ್ಕೆ 5, ಪೂನಂ ಯಾದವ್ 23ಕ್ಕೆ 1, ಶಶಿಕಲಾ ಸಿರಿವರ್ಧನೆ 22ಕ್ಕೆ 1). ಸೂಪರ್‌ನೋವಾಸ್: 7 ವಿಕೆಟ್‌ಗೆ 102 (ಹರ್ಮಾನ್‌ಪ್ರೀತ್ 30, ಸಿರಿವರ್ಧನೆ 19, ಸಲ್ಮಾ ಖತುನ್ 18ಕ್ಕೆ 3, ದೀಪ್ತಿ ಶರ್ಮ 9ಕ್ಕೆ 2).