ಕ್ರೀಡೆ

ಏಕದಿನ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಧವನ್-ಋತುರಾಜ್ ನಡುವೆ ಪೈಪೋಟಿ

ನವದೆಹಲಿ: ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸದ ಏಕದಿನ ಸರಣಿಗೆ ಭಾರತ ತಂಡದಲ್ಲಿ ಆರಂಭಿಕರಾಗಿ ಸ್ಥಾನ ಪಡೆಯಲು ಅನುಭವಿ ಎಡಗೈ ಬ್ಯಾಟರ್ ಶಿಖರ್ ಧವನ್ ಮತ್ತು ಯುವ ಬ್ಯಾಟರ್ ಋತುರಾಜ್ ಗಾಯಕ್ವಾಡ್ ನಡುವೆ ನಿಕಟ ಪೈಪೋಟಿ ಏರ್ಪಟ್ಟಿದೆ. ಇತ್ತೀಚೆಗೆ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಏಕದಿನ ತಂಡದಲ್ಲೂ ಸ್ಥಾನ ಗಿಟ್ಟಿಸಿಕೊಳ್ಳುವುದು ಬಹುತೇಕ ನಿಶ್ಚಿತವೆನಿಸಿದೆ.

ವಿರಾಟ್ ಕೊಹ್ಲಿ ಅವರನ್ನು ವಜಾಗೊಳಿಸಿ ರೋಹಿತ್ ಶರ್ಮ ಅವರನ್ನು ಏಕದಿನ ತಂಡದ ಹೊಸ ನಾಯಕರನ್ನಾಗಿ ಬಿಸಿಸಿಐ ಕಳೆದ ವಾರವೇ ಘೋಷಣೆ ಹೊರಡಿಸಿತ್ತು. ಆದರೆ ತಂಡದ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ವಿಜಯ್ ಹಜಾರೆ ಟ್ರೋಫಿಯಲ್ಲಿನ ಆಟಗಾರರ ನಿರ್ವಹಣೆಯನ್ನು ಗಮನಿಸಿ ಆಯ್ಕೆಗಾರರು ಶೀಘ್ರವೇ ತಂಡವನ್ನು ಅಂತಿಮಗೊಳಿಸುವ ನಿರೀಕ್ಷೆ ಇದೆ. ಏಕದಿನ ತಂಡದ ಮೊದಲ ಆಯ್ಕೆಯ ಆರಂಭಿಕ ಜೋಡಿಯಾಗಿ ರೋಹಿತ್ ಶರ್ಮ ಮತ್ತು ಕೆಎಲ್ ರಾಹುಲ್ ಇರಲಿದ್ದು, ಅವರೊಂದಿಗೆ ಹೆಚ್ಚುವರಿ ಆರಂಭಿಕರಾಗಿ ಯಾರು ತೆರಳುವರು ಎಂಬ ಕುತೂಹಲವಿದೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಮಹಾರಾಷ್ಟ್ರ ತಂಡದ ನಾಯಕತ್ವದ ಜತೆಗೆ ಹ್ಯಾಟ್ರಿಕ್ ಶತಕ ಸಿಡಿಸಿ ಮಿಂಚಿರುವ ಋತುರಾಜ್ ಗಾಯಕ್ವಾಡ್ ಕಳೆದ ಐಪಿಎಲ್‌ನಲ್ಲೂ ಗರಿಷ್ಠ ರನ್ ಸಿಡಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಕಳೆದ ಜುಲೈನಲ್ಲಿ ಶ್ರೀಲಂಕಾ ಪ್ರವಾಸದ ಟಿ20 ಸರಣಿಯಲ್ಲಿ 2 ಪಂದ್ಯ ಆಡಿದ್ದ ಅವರು ಭಾರತ ಪರ ಏಕದಿನ ಕ್ರಿಕೆಟ್‌ಗೆ ಇನ್ನಷ್ಟೇ ಪದಾರ್ಪಣೆ ಮಾಡಬೇಕಾಗಿದೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಮಧ್ಯಪ್ರದೇಶ ವಿರುದ್ಧ 136, ಛತ್ತೀಸ್‌ಗಢ ವಿರುದ್ಧ ಅಜೇಯ 154 ಮತ್ತು ಕೇರಳ ವಿರುದ್ಧ 124 ರನ್ ಸಿಡಿಸಿ ಮಿಂಚಿದ್ದ ಋತುರಾಜ್ ಅವರನ್ನು ಈ ಬಾರಿ ಕಡೆಗಣಿಸುವುದು ಕಷ್ಟವಾಗಲಿದೆ. ಆದರೆ ಅವರಿಗೆ ಸವಾಲಿನ ದಕ್ಷಿಣ ಆಫ್ರಿಕಾ ಪ್ರವಾಸದಲ್ಲೇ ಪದಾರ್ಪಣೆಯ ಅವಕಾಶ ಸಿಗುವುದೇ ಎಂಬುದು ಕೂಡ ಜಟಿಲ ಪ್ರಶ್ನೆಯಾಗಿದೆ. ದಿಗ್ಗಜ ರಾಹುಲ್ ದ್ರಾವಿಡ್ ಕೋಚ್ ಆದ ಬಳಿಕ ಹಿರಿಯ ಆಟಗಾರರಿಗೆ ಸೂಕ್ತ ಮನ್ನಣೆ ಲಭಿಸುತ್ತಿದ್ದು, ಅವರನ್ನು ಒಮ್ಮೆಲೆ ಕಡೆಗಣಿಸಲಾಗುತ್ತಿಲ್ಲ. ಇದರಿಂದಾಗಿಯೇ ಮಹತ್ವದ ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ತಂಡದಲ್ಲಿ ಅಜಿಂಕ್ಯ ರಹಾನೆ ಮತ್ತು ಇಶಾಂತ್ ಶರ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗುತ್ತಿದೆ. ಈ ಲೆಕ್ಕಾಚಾರದ ಅನ್ವಯ ಶಿಖರ್ ಧವನ್ ಏಕದಿನ ತಂಡದಲ್ಲಿ ಮತ್ತೊಮ್ಮೆ ಅವಕಾಶ ಪಡೆಯುವ ನಿರೀಕ್ಷೆ ಇದೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ 4 ಇನಿಂಗ್ಸ್‌ಗಳಲ್ಲಿ ಧವನ್ 0, 12, 14, 18 ರನ್ ಗಳಿಸಿ ವೈಫಲ್ಯ ಕಂಡಿದ್ದಾರೆ. ಆದರೆ ಕಳೆದ ಐಪಿಎಲ್‌ನಲ್ಲಿ ಸಾಕಷ್ಟು ರನ್ ಗಳಿಸಿದ್ದರು. ಅಲ್ಲದೆ ಕಳೆದ ಜುಲೈನಲ್ಲಿ ಶ್ರೀಲಂಕಾ ಪ್ರವಾಸದ ವೇಳೆ ಅವರು ಹಂಗಾಮಿ ನಾಯಕರಾಗಿಯೂ ಆಗಿನ ಹಂಗಾಮಿ ಕೋಚ್ ದ್ರಾವಿಡ್ ಜತೆ ಕಾರ್ಯನಿರ್ವಹಿಸಿದ್ದರು. ಅಂದರೆ ಭಾರತ ಕೊನೇ ಬಾರಿ ಏಕದಿನ ಪಂದ್ಯವಾಡಿದಾಗ ಅವರು ತಂಡದ ನಾಯಕರಾಗಿದ್ದರು. ಹೀಗಾಗಿ ಧವನ್‌ಗೆ ಕೊನೇ ಅವಕಾಶವೊಂದು ಲಭಿಸುವುದು ನಿರೀಕ್ಷಿತವೆನಿಸಿದೆ.

ವೆಂಕಟೇಶ್‌ಗೆ ಸ್ಥಾನ ಫಿಕ್ಸ್?

ಐಪಿಎಲ್ 14ನೇ ಆವೃತ್ತಿಯಲ್ಲಿ ಕೆಕೆಆರ್ ಪರ ಮಿಂಚಿದ ಬಳಿಕ ವಿಜಯ್ ಹಜಾರೆ ಟ್ರೋಫಿಯಲ್ಲೂ ಮಧ್ಯಪ್ರದೇಶ ಪರ ಆಲ್ರೌಂಡ್ ನಿರ್ವಹಣೆಯೊಂದಿಗೆ ಗಮನಸೆಳೆದಿರುವ ವೆಂಕಟೇಶ್ ಅಯ್ಯರ್‌ಗೆ ಏಕದಿನ ತಂಡಕ್ಕೂ ಎಂಟ್ರಿ ನಿಶ್ಚಿತವೆನಿಸಿದೆ. ಹಾರ್ದಿಕ್ ಪಾಂಡ್ಯ ಗೈರಿನಲ್ಲಿ ಅವರು ತಂಡದ ಆಲ್ರೌಂಡರ್ ಸ್ಥಾನಕ್ಕೆ ಪ್ರಮುಖ ಆಕಾಂಕ್ಷಿಯಾಗಿದ್ದಾರೆ. ಆರಂಭಿಕನಾಗಿ ರನ್‌ಪ್ರವಾಹ ಹರಿಸುತ್ತಿದ್ದರೂ ಅವರು ಟೀಮ್ ಇಂಡಿಯಾದಲ್ಲಿ 5 ಅಥವಾ 6ನೇ ಕ್ರಮಾಂಕದಲ್ಲಿ ಫಿನಿಷರ್ ಪಾತ್ರ ನಿರ್ವಹಿಸಬೇಕಾಗುತ್ತದೆ. ಇದಕ್ಕಿಂತ ಮುಖ್ಯವಾಗಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರು ಪ್ರತಿ ಪಂದ್ಯದಲ್ಲಿ 9-10 ಓವರ್ ಬೌಲಿಂಗ್ ಕೂಡ ಮಾಡುತ್ತಿದ್ದು, ಉಪಯುಕ್ತ ವಿಕೆಟ್‌ಗಳನ್ನೂ ಕಬಳಿಸಿದ್ದಾರೆ. ಇದು ಅವರಿಗೆ ಸ್ಥಾನ ಕಲ್ಪಿಸಲು ಪ್ರಮುಖ ಕಾರಣವಾಗಿರಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.