ಕ್ರೀಡೆ

ಇಂದು ಚಿನ್ನದ ಹುಡುಗ ನೀರಜ್ ಚೋಪ್ರಾ ಕಣಕ್ಕೆ: ಒಲಿಂಪಿಕ್ಸ್ ಫೈನಲ್‌ನಲ್ಲಿ 90 ಮೀ. ಗಡಿ ದಾಟುವರೇ ಭಾರತದ ತಾರೆ?

ಪ್ಯಾರಿಸ್: ಕೇವಲ ಒಂದೇ ಎಸೆತದಲ್ಲಿ ಅಗ್ರಸ್ಥಾನಿಯಾಗಿ ಫೈನಲ್ ಅರ್ಹತೆ ಗಿಟ್ಟಿಸಿಕೊಂಡಿರುವ ಹಾಲಿ ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಗುರುವಾರ ಕಣಕ್ಕಿಳಿಯಲಿದ್ದಾರೆ. ಸ್ಟೇಡ್ ಡಿಫ್ರಾನ್ಸ್ ನಡೆಯುವ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್‌ನಲ್ಲಿ ನೀರಜ್ ಚೋಪ್ರಾ 140 ಕೋಟಿ ಭಾರತೀಯರ ಚಿನ್ನದ ಕನಸು ನನಸಾಗಿಸುವ ನಿರೀಕ್ಷೆ ಹೊಂದಿದ್ದಾರೆ. ಸತತ ಎರಡನೇ ಬಾರಿ ಸ್ವರ್ಣ ಪದಕಕ್ಕೆ ಕೊರಳೊಡ್ಡುವ ಹಂಬಲದಲ್ಲಿರುವ ನೀರಜ್‌ಗೆ ಪದಕ ಉಳಿಸಿಕೊಳ್ಳುವ ಸವಾಲಿದೆ.

ಅರ್ಹತಾ ಸುತ್ತಿನಲ್ಲಿ ಹಾಲಿ ಋತುವಿನ ವೈಯಕ್ತಿಕ ಗರಿಷ್ಠ ಎಸೆತದ ದಾಖಲೆ ಬರೆದಿರುವ 26 ವರ್ಷದ ನೀರಜ್ ಚೋಪ್ರಾಗೆ ಫೈನಲ್‌ನಲ್ಲಿ ಕಠಿಣ ಸವಾಲು ಎದುರಾಗುವ ನಿರೀಕ್ಷೆಯಿದೆ. ಅರ್ಹತಾ ಸುತ್ತಿನಲ್ಲಿ 84 ಮೀಟರ್ ದೂರದ ಎಸೆತದೊಂದಿಗೆ ಫೈನಲ್‌ಗೆ ನೇರ ಅರ್ಹತೆ ಪಡೆದಿರುವರ ಪೈಕಿ 9 ಸ್ಪರ್ಧಿಗಳಲ್ಲಿ ಐವರು ಮೊದಲ ಎಸೆತದಲ್ಲಿ ಫೈನಲ್ ಸ್ಥಾನ ಖಾತ್ರಿಪಡಿಸಿಕೊಂಡಿದ್ದಾರೆ.

ಹರಿಯಾಣದ ಚಿನ್ನದ ಹುಡುಗ ಎನಿಸಿರುವ ನೀರಜ್, ಸ್ವರ್ಣವನ್ನು ಯಶಸ್ವಿಯಾಗಿ ಉಳಿಸಿಕೊಂಡರೆ ಈ ಸಾಧನೆ ಮಾಡಿದ 5ನೇ ಜಾವೆಲಿನ್ ಪಟು ಎನಿಸಲಿದ್ದಾರೆ. ಎರಿಕ್ ಲೆಮ್ಮಿಂಗ್ (ಸ್ವೀಡನ್ 1908, 1912), ಜಾನಿ ಮೈರಾ (ಫಿನ್‌ಲ್ಯಾಂಡ್ 1920,1924), ಜಾನ್ ಝೆಲೆಜ್ನಿ (ಜೆಕ್ ಗಣರಾಜ್ಯ 1992, 1996 ಮತ್ತು 2000) ಮತ್ತು ಆಂಡ್ರಿಯಾಸ್ ಥೋರ್ಕಿಲ್ಡ್ಸೆನ್ (ನಾರ್ವೆ 2008) ಹಿಂದಿನ ಸಾಧಕರು.

2022ರಲ್ಲಿ 89.94 ಮೀಟರ್ ದೂರದ ಎಸೆತ ನೀರಜ್ ಅವರ ಇದುವರೆಗಿನ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ಎನಿಸಿದ್ದು, ಈ ಬಾರಿ ಒಲಿಂಪಿಕ್ಸ್‌ನಲ್ಲಿ 90 ಮೀಟರ್ ಗಡಿ ದಾಟುವ ನಿರೀಕ್ಷೆ ಹೊಂದಲಾಗಿದೆ. 2008ರ ಬೀಜಿಂಗ್ ಗೇಮ್ಸ್‌ನಲ್ಲಿ ನಾರ್ವೆಯ ಆಂಡ್ರಿಯಾಸ್ ಥೋರ್ಕಿಲ್ಡ್ಸೆನ್ ಅವರ 90.57 ಮೀಟರ್ ದೂರದ ಎಸೆತ ಒಲಿಂಪಿಕ್ಸ್ ಕೂಟದ ದಾಖಲೆ ಎನಿಸಿದೆ. ಈಗಾಗಲೆ 90ರ ಕ್ಲಬ್ ಸೇರಿರುವ ಎರಡು ಬಾರಿಯ ವಿಶ್ವ ಚಾಂಪಿಯನ್ ಗ್ರೆನೇಡಾದ ಆಂಡರ್‌ಸನ್ ಪೀಟರ್ಸ್‌, ಪಾಕಿಸ್ತಾನದ ಅರ್ಷದ್ ನದೀಂ ಹಾಗೂ ಜೆಕ್ ಗಣರಾಜ್ಯದ ಜೇಕಬ್ ವಾಡ್ಲೆಚ್ನ ಫೈಲ್‌ನಲ್ಲಿ ಪದಕ ಫೇವರಿಟ್ ಎನಿಸಿದ್ದಾರೆ. ಕಳೆದ ಮೇನಲ್ಲಿ ನಡೆದ ದೋಹಾ ಡೈಮಂಡ್ ಲೀಗ್‌ನಲ್ಲಿ ಜೇಕಬ್ ವಾಡ್ಲೆಚ್, ನೀರಜ್ ಅವರನ್ನು ಹಿಂದಿಕ್ಕಿ ಚಿನ್ನ ಜಯಿಸಿದ್ದು, ಟೋಕಿಯೊದಲ್ಲಿ ರಜತ ಪದಕ ದಕ್ಕಿಸಿಕೊಂಡಿದ್ದರು. ನದೀಂ 2016ರಿಂದ 10 ಬಾರಿ ನೀರಜ್‌ಗೆ ಪ್ರತಿಸ್ಪರ್ಧಿ ಎನಿಸಿದ್ದಾರೆ.

ಫೈನಲ್ ಸ್ಪರ್ಧೆ ಆರಂಭ: ರಾತ್ರಿ 11.45