ಬ್ರಿಸ್ಬೇನ್: ವಿಶ್ವ ನಂ. 1 ಆಟಗಾರ್ತಿ ಆಶ್ಲೆಗ್ ಬಾರ್ಟಿ ಮುಂಬರುವ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಕರೊನಾ ವೈರಸ್ ಹಾವಳಿಯ ಈ ಸಮಯದಲ್ಲಿ ಪ್ರಯಾಣ ಮಾಡುವುದರಿಂದ ತಮ್ಮನ್ನು ಅಪಾಯಕ್ಕೆ ಸಿಲುಕಿಕೊಳ್ಳಲು ಇಷ್ಟಪಡದ ಕಾರಣ ಅವರು ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಆಸ್ಟ್ರೇಲಿಯಾದ 24 ವರ್ಷದ ಆಟಗಾರ್ತಿ ಬಾರ್ಟಿ, ಆಗಸ್ಟ್ 31ರಿಂದ ಸೆಪ್ಟೆಂಬರ್ 13ರವರೆಗೆ ನ್ಯೂಯಾರ್ಕ್ನಲ್ಲಿ ನಿಗದಿಯಾಗಿರುವ ಗ್ರಾಂಡ್ ಸ್ಲಾಂ ಕೂಟದಿಂದ ಇದುವರೆಗೆ ಅಧಿಕೃತವಾಗಿ ಹಿಂದೆ ಸರಿದಿರುವ ಅತ್ಯಂತ ಪ್ರಮುಖ ತಾರೆಯಾಗಿದ್ದಾರೆ. 'ನನ್ನ ತಂಡ ಮತ್ತು ನಾನು ಈ ವರ್ಷ ವೆಸ್ಟರ್ನ್-ಸದರ್ನ್ ಓಪನ್ ಮತ್ತು ಯುಎಸ್ ಓಪನ್ಗೆ ಪ್ರಯಾಣಿಸದಿರಲು ನಿರ್ಧರಿಸಿದ್ದೇವೆ' ಎಂದು ಬಾರ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಮೆರಿಕದಲ್ಲಿ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ಕರೊನಾಗೆ ಬಲಿಯಾಗಿದ್ದು, ಈಗಾಗಲೆ ಕೆಲ ಆಟಗಾರರು ಯುಎಸ್ ಓಪನ್ನಲ್ಲಿ ಆಡುವ ಬಗ್ಗೆ ಕಳವಳ ಹಂಚಿಕೊಂಡಿದ್ದಾರೆ.
'ನಾನು ಇವೆರಡೂ ಟೂರ್ನಿಗಳನ್ನು ಇಷ್ಟಪಡುತ್ತೇನೆ. ಹೀಗಾಗಿ ಇದೊಂದು ಕಠಿಣ ನಿರ್ಧಾರವಾಗಿದೆ. ಕೋವಿಡ್-19ರಿಂದ ಈಗಲೂ ಸಾಕಷ್ಟು ಅಪಾಯಗಳಿವೆ. ನಾನು ಮತ್ತು ನನ್ನ ತಂಡ ಈ ಪರಿಸ್ಥಿತಿಯಲ್ಲಿ ರಿಸ್ಕ್ ತೆಗೆದುಕೊಳ್ಳುವುದು ಸರಿಯಲ್ಲವೆನಿಸಿತು. ಯುಎಸ್ ಓಪನ್ ಟೂರ್ನಿಗೆ ನಾನು ಶುಭಹಾರೈಸುತ್ತೇನೆ. ಮುಂದಿನ ವರ್ಷ ಮತ್ತೆ ಯುಎಸ್ ಓಪನ್ಗೆ ಮರಳುವುದನ್ನು ಎದುರುನೋಡುತ್ತಿದ್ದೇನೆ' ಎಂದು ಬಾರ್ಟಿ ತಿಳಿಸಿದ್ದಾರೆ.
ಈ ವರ್ಷ ಯುಎಸ್ ಓಪನ್ ಟೂರ್ನಿಯ ಬಳಿಕ ಸೆಪ್ಟೆಂಬರ್ 27ರಿಂದ ನಡೆಯಲಿರುವ ಫ್ರೆಂಚ್ ಓಪನ್ ಕ್ಲೇ-ಕೋರ್ಟ್ ಗ್ರಾಂಡ್ ಸ್ಲಾಂ ಟೂರ್ನಿಯಲ್ಲಿ ಆಡುವ ಬಗ್ಗೆ ಬಾರ್ಟಿ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ. ಕಳೆದ ವರ್ಷ ಅವರು ಪ್ಯಾರಿಸ್ನ ಈ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿದ್ದರು. ಹಿಂದಿನ ವೇಳಾಪಟ್ಟಿಯ ಪ್ರಕಾರ ಮೇ-ಜೂನ್ನಲ್ಲಿ ನಡೆಯಬೇಕಾಗಿದ್ದ ಈ ಟೂರ್ನಿ ಕರೊನಾ ಭೀತಿಯಿಂದಾಗಿ ಮುಂದೂಡಲ್ಪಟ್ಟಿತ್ತು.
ಆಸ್ಟ್ರೇಲಿಯಾದಲ್ಲಿ ಅಂತಾರಾಷ್ಟ್ರೀಯ ಗಡಿಗಳನ್ನು ಬಂದ್ ಮಾಡಲಾಗಿದ್ದು, ಬಾರ್ಟಿಗೆ ಪ್ರಯಾಣ ಕಷ್ಟಕರವೆನಿಸಿದೆ. ಸರ್ಕಾರದಿಂದ ವಿಶೇಷ ಅನುಮತಿ ಪಡೆದು ಪ್ರಯಾಣಿಸುವ ಅವಕಾಶ ಅವರ ಮುಂದಿದ್ದರೂ, ಲಭ್ಯ ವಿಶೇಷ ವಿಮಾನಗಳ ಸಂಖ್ಯೆಯೂ ವಿರಳವಾಗಿದೆ. ಅವರು ಯುಎಸ್ ಓಪನ್ಗೆ ತೆರಳಿದರೂ, ಆಸ್ಟ್ರೇಲಿಯಾಕ್ಕೆ ಮರಳಿದ ಬಳಿಕ 2 ವಾರಗಳ ಕ್ವಾರಂಟೈನ್ನಲ್ಲಿರುವುದು ಕಡ್ಡಾಯವೆನಿಸುತ್ತಿತ್ತು.
ಕಳೆದ ಮಾರ್ಚ್ನಿಂದ ವೃತ್ತಿಪರ ಟೆನಿಸ್ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ಆಗಸ್ಟ್ 3ರಿಂದ ಪುನರಾರಂಭಗೊಳ್ಳುವ ನಿರೀಕ್ಷೆ ಇದೆ. ಇಟಲಿಯ ಪಲೆರ್ಮೋ ಓಪನ್ ಮಹಿಳಾ ಟೆನಿಸ್ ಟೂರ್ನಿಯ ಮೂಲಕ ಟೆನಿಸ್ ಚಟುವಟಿಕೆ ಪುನರಾರಂಭಗೊಳ್ಳಲಿದೆ. ಯುಎಸ್ ಓಪನ್ಗೆ ಪೂರ್ವಭಾವಿಯಾಗಿ ವೆಸ್ಟರ್ನ್-ಸದರ್ನ್ ಓಪನ್ ಟೂರ್ನಿ ಆಗಸ್ಟ್ 20ರಿಂದ 28ರವರೆಗೆ ನಡೆಯಲಿದೆ. ಸಿನ್ಸಿನಾಟಿಯಲ್ಲಿ ನಡೆಯಬೇಕಾಗಿದ್ದ ಈ ಟೂರ್ನಿಯನ್ನು, ಯುಎಸ್ ಓಪನ್ ನಡೆಯಲಿರುವ ಫ್ಲಷಿಂಗ್ ಮೆಡೋಸ್ನ ಬಿಲ್ಲಿ ಜೀನ್ ಕಿಂಗ್ ರಾಷ್ಟ್ರೀಯ ಟೆನಿಸ್ ಸೆಂಟರ್ಗೆ ಸ್ಥಳಾಂತರಿಸಲಾಗಿದೆ. ಸೆರೇನಾ ವಿಲಿಯಮ್ಸ್, ಕೋಕೋ ಗೌಫ್, ನೊವಾಕ್ ಜೋಕೊವಿಕ್, ರಾಫೆಲ್ ನಡಾಲ್ ಮತ್ತು ಜಪಾನ್ನ ನವೊಮಿ ಒಸಾಕಾ ಈಗಾಗಲೆ ಈ ಟೂರ್ನಿಯಲ್ಲಿ ಆಡಲಿರುವುದನ್ನು ಖಚಿತಪಡಿಸಿದ್ದಾರೆ.