LBW Wickets: ಟಿ20, ಏಕದಿನ ಮತ್ತು ಟೆಸ್ಟ್ ಫಾರ್ಮೆಟ್ಗಳ ಪೈಕಿ ಟೆಸ್ಟ್ ಕ್ರಿಕೆಟ್ ಅತ್ಯಂತ ಕುತೂಹಲಕಾರಿ ಹಾಗೂ ಆಸಕ್ತಿದಾಯಕ. ಬಹುತೇಕರು ಇದು ಬೋರ್ ಹೊಡಿಸುವಂತ ಫಾರ್ಮೆಟ್ ಎಂದು ಹೇಳುತ್ತಾರೆ. ಆದರೆ, ಟೆಸ್ಟ್ ಕ್ರಿಕೆಟ್ಗೆ ನೋಡುಗರ ಸಂಖ್ಯೆ ಹೆಚ್ಚಿದೆ. ಟೆಸ್ಟ್ ಕ್ರಿಕೆಟ್‌ನ ಮಹತ್ವವು ಇಂದಿಗೂ ಕಡಿಮೆಯಾಗಿಲ್ಲ.
ದೀರ್ಘ ಸ್ವರೂಪ ಎಷ್ಟು ಮುಖ್ಯ ಎಂಬುದನ್ನು ನಾವು ಟೆಸ್ಟ್ ಮೂಲಕ ಅರ್ಥಮಾಡಿಕೊಳ್ಳಬಹುದು. ಪ್ರಸ್ತುತ, ಭಾರತ ಮತ್ತು ಇಂಗ್ಲೆಂಡ್ ನಡುವೆ ಟೆಸ್ಟ್ ಸರಣಿ ನಡೆಯುತ್ತಿದೆ. ಶುಭಮನ್ ಗಿಲ್ ನೇತೃತ್ವದ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ಸೋಲನ್ನು ಅನುಭವಿಸಿದೆ. ಇನ್ನೂ 4 ಪಂದ್ಯಗಳು ಬಾಕಿ ಉಳಿದಿದೆ. ಇದರಲ್ಲಿ ಸರಣಿ ಗೆಲುವು ಯಾರ ಮುಡಿಗೆ ಎಂಬುದನ್ನು ಮುಂಬರುವ ದಿನಗಳಲ್ಲಿ ಕಾದು ನೋಡಬೇಕಿದೆ. ಅಸಲಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಎಲ್‌ಬಿಡಬ್ಲ್ಯೂ ವಿಕೆಟ್ ಪಡೆದ ಬೌಲರ್‌ಗಳು ಯಾರು ಎಂಬ ಮಾಹಿತಿ ನಿಮಗೆ ಗೊತ್ತಿದ್ಯಾ? ಅದಕ್ಕೆ ಇಲ್ಲಿದೆ ನೋಡಿ ಉತ್ತರ.
ಎಲ್‌ಬಿಡಬ್ಲ್ಯೂ ಅಂದರೆ ಲೆಗ್ ಬಿಫೋರ್ ವಿಕೆಟ್‌ನ ಸಂಕ್ಷಿಪ್ತ ರೂಪ. ಎಲ್‌ಬಿಡಬ್ಲ್ಯೂ ಮಾಡಿ ವಿಕೆಟ್ ಕಬಳಿಸುವುದು ಅಷ್ಟು ಸುಲಭದ ಮಾತಲ್ಲ. ಅನೇಕ ಶ್ರೇಷ್ಠ ಬೌಲರ್‌ಗಳು ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ ಮತ್ತು ಅವರ ರಾಷ್ಟ್ರೀಯ ತಂಡಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಬ್ಯಾಟರ್‌ಗಳು ಕ್ರೀಸ್‌ನಲ್ಲಿ ಅಂಟಿ ನಿಂತಿರುವಾಗ, ಕ್ಯಾಚ್ ಅಥವಾ ವಿಕೆಟ್‌ಗಳನ್ನು ಕೊಡಲು ಬಯಸದೆ ಇದ್ದಾಗ, ಬೌಲರ್‌ಗಳು ಹೆಚ್ಚಿನ ಯಾರ್ಕರ್‌ಗಳನ್ನು ಹೊಡೆಯಲು ಪ್ರಯತ್ನಿಸುತ್ತಾರೆ ಮತ್ತು ಎಲ್‌ಬಿಡಬ್ಲ್ಯೂ ಮೂಲಕ ವಿಕೆಟ್ ಕೀಳಲು ಮುಂದಾಗುತ್ತಾರೆ. ಈ ರೀತಿ ಹೆಚ್ಚು ವಿಕೆಟ್ ಪಡೆದವರು ಕೆಲವೇ ಕೆಲವರು ಎಂಬುದೇ ವಿಶೇಷ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಎಲ್‌ಬಿಡಬ್ಲ್ಯೂ ವಿಕೆಟ್ ಪಡೆದ ಬೌಲರ್ ನಮ್ಮ ಹೆಮ್ಮೆಯ ಕನ್ನಡಿಗ ಅನಿಲ್ ಕುಂಬ್ಳೆ. 'ಜಂಬೊ' ಎಂದೇ ಜನಪ್ರಿಯತೆ ಪಡೆದಿರುವ ಟೀಮ್ ಇಂಡಿಯಾ ಸ್ಪಿನ್ ದಂತಕಥೆ ಅನಿಲ್ ಕುಂಬ್ಳೆ, 156 ಎಲ್‌ಬಿಡಬ್ಲ್ಯೂ ವಿಕೆಟ್‌ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 132 ಟೆಸ್ಟ್‌ಗಳನ್ನು ಆಡಿರುವ ಅವರು ಒಟ್ಟು 619 ವಿಕೆಟ್‌ಗಳನ್ನು ಪಡೆದಿದ್ದಾರೆ. ಕ್ರಿಕೆಟ್ ಫ್ಯಾನ್ಸ್ಗೆ ಕುಂಬ್ಳೆ ಅವರ ಲೆಗ್-ಬ್ರೇಕ್ ಗೂಗ್ಲಿ ಬೌಲಿಂಗ್ ಮತ್ತು ಅವರ ಬದ್ಧತೆಯ ಬಗ್ಗೆ ಚೆನ್ನಾಗಿ ಅರಿವಿದೆ. ಅದಕ್ಕಾಗಿಯೇ ಕುಂಬ್ಳೆ ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಭಾರತೀಯ ಬೌಲರ್ ಆಗಿ ಮಿಂಚಿದ್ದಾರೆ.
ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಶ್ರೀಲಂಕಾದ ಲೆಜೆಂಡ್ರಿ ಬೌಲರ್ ಮುತ್ತಯ್ಯ ಮುರಳೀಧರನ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಹೆಸರಿಗೆ 150 ಎಲ್‌ಬಿಡಬ್ಲ್ಯೂ ವಿಕೆಟ್‌ಗಳು ಸೇರಿವೆ. 133 ಟೆಸ್ಟ್‌ಗಳನ್ನು ಆಡಿರುವ ಮುರಳೀಧರನ್ ಒಟ್ಟಾರೆಯಾಗಿ 800 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ವೃತ್ತಿ ಜೀವನವನ್ನು ಆಧರಿಸಿ '800' ಎಂಬ ಬಯೋಪಿಕ್ ಸಿನಿಮಾವನ್ನು ತಮಿಳಿನಲ್ಲಿ ತೆರೆಗೆ ತರಲಾಯಿತು.
ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ, ದಿವಂಗತ ಶೇನ್ ವಾರ್ನ್ 138 ಎಲ್‌ಬಿಡಬ್ಲ್ಯೂ ವಿಕೆಟ್‌ಗಳನ್ನು ಪಡೆಯುವ ಮೂಲಕ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಸ್ಲೈಡರ್‌ಗಳು, ಫ್ಲಿಪ್ಪರ್‌ಗಳು ಮತ್ತು ಗೂಗ್ಲಿಗಳೊಂದಿಗೆ ಬ್ಯಾಟರ್‌ಗಳನ್ನು ನಾಕ್ಔಟ್ ಮಾಡುವಲ್ಲಿ ನಿಪುಣರಾಗಿದ್ದ ವಾರ್ನ್, 145 ಟೆಸ್ಟ್ ಪಂದ್ಯಗಳನ್ನು ಆಡಿರುವ ವಾರ್ನ್, ತಮ್ಮ ವೃತ್ತಿಜೀವನದಲ್ಲಿ ಒಟ್ಟು 708 ವಿಕೆಟ್‌ಗಳನ್ನು ಪಡೆದಿದ್ದಾರೆ. ಅತಿ ಹೆಚ್ಚು ಎಲ್‌ಬಿಡಬ್ಲ್ಯೂ ವಿಕೆಟ್‌ಗಳನ್ನು ಪಡೆದ ಅಗ್ರ ಮೂರು ಬೌಲರ್‌ಗಳು ಕೂಡ ಸ್ಪಿನ್ನರ್‌ಗಳೇ ಎಂಬುದು ವಿಶೇಷ.
ಈ ಮೂವರ ನಂತರದಲ್ಲಿ 119 ಎಲ್‌ಬಿಡಬ್ಲ್ಯೂ ವಿಕೆಟ್‌ಗಳನ್ನು ಪಡೆದ ಪಾಕಿಸ್ತಾನದ ಬೌಲರ್ ವಾಸಿಮ್ ಅಕ್ರಮ್ ಈ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ. ಟೀಮ್ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ 117 ಎಲ್‌ಬಿಡಬ್ಲ್ಯೂ ವಿಕೆಟ್‌ಗಳೊಂದಿಗೆ 5ನೇ ಸ್ಥಾನದಲ್ಲಿದ್ದಾರೆ. ಗ್ಲೆನ್ ಮೆಕ್‌ಗ್ರಾತ್ (113), ಕಪಿಲ್ ದೇವ್ (111), ವಕಾರ್ ಯೂನಿಸ್ (110), ರಂಗನ ಹೆರಾತ್ (108), ಮತ್ತು ಸ್ಟುವರ್ಟ್ ಬ್ರಾಡ್ (101) ಟಾಪ್ ಹತ್ತರಲ್ಲಿರುವ ಇತರ ಬೌಲರ್‌ಗಳು,(ಏಜೆನ್ಸೀಸ್).