ನವದೆಹಲಿ: ಟೋಕಿಯೋ ಒಲಿಂಪಿಕ್ಸ್ನಲ್ಲಿ 49ಕೆಜಿ ವಿಭಾಗದ ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಸಿದ ಮೀರಾಬಾಯಿ ಚಾನು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿರುವ ಪ್ರಧಾನಿ ಮೋದಿ, ಇದೊಂದು ಸಂತೋಷದಾಯಕ ಆರಂಭ. ಇದರಿಂದ ಭಾರತವು ಉಲ್ಲಾಸಗೊಂಡಿದೆ. ಅದ್ಭುತ ಪ್ರದರ್ಶನ ನೀಡಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿಗೆ ಅಭಿನಂದನೆ. ಅವರ ಯಶಸ್ಸು ಪ್ರತಿಯೊಬ್ಬ ಭಾರತೀಯನನ್ನು ಪ್ರೇರೇಪಿಸುತ್ತದೆ ಎಂದು ಪ್ರಧಾನಿ ಶ್ಲಾಘಿಸಿದ್ದಾರೆ.
ಇಷ್ಟೇ ಅಲ್ಲದೆ, #Cheer4India ಎಂಬ ಹ್ಯಾಶ್ಟ್ಯಾಗ್ ಮೂಲಕ ಕ್ರೀಡಾಪಟುಗಳನ್ನು ಪ್ರಧಾನಿ ಮೋದಿ ಹುರಿದುಂಬಿಸಿದ್ದಾರೆ.
ಪುರುಷರ 10 ಮೀ ಏರ್ ಪಿಸ್ತೋಲ್ ಸ್ಪರ್ಧೆಯಲ್ಲಿ ಭಾರತದ ಸೌರಭ್ ಚೌಧರಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಅರ್ಹತಾ ಸುತ್ತಿನಲ್ಲಿ ಮೊದಲಿಗರಾಗಿ ಆಟ ಮುಗಿಸಿದ್ದಾರೆ. ಈ ಮೂಲಕ ಪದಕಗಳಿಗಾಗಿ ಸೆಣಸುವ ಫೈನಲ್ಸ್ ಸ್ಪರ್ಧೆಗೆ ಬಡ್ತಿ ಪಡೆದಿದ್ದಾರೆ.