ಟೋಕಿಯೊ: ಈ ವರ್ಷದ ಟೋಕಿಯೊ ಒಲಿಂಪಿಕ್ಸ್ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವುದರಿಂದ ಕ್ರೀಡಾಪಟುಗಳೇನೋ, ಮುಂದಿನ ವರ್ಷವಾದರೂ ಸ್ಪರ್ಧಿಸಬಹುದು ಎಂದು ನಿರಾಳವಾಗಿದ್ದಾರೆ. ಆದರೆ ಕ್ರೀಡಾ ಸ್ಪರ್ಧೆಗಳನ್ನು ವೀಕ್ಷಿಸಲು ಸಜ್ಜಾಗಿದ್ದ ಪ್ರೇಕ್ಷಕರು ಮಾತ್ರ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಒಲಿಂಪಿಕ್ಸ್ ವೀಕ್ಷಣೆಗಾಗಿ ಟೋಕಿಯೊಗೆ ವಿಮಾನದ ಟಿಕೆಟ್ಗಳನ್ನು ಮತ್ತು ಅಲ್ಲಿನ ಹೋಟೆಲ್ ರೂಂಗಳನ್ನು ಮುಂಗಡವಾಗಿ ಕಾಯ್ದಿರಿಸಿದ್ದ ಪ್ರೇಕ್ಷಕರು ಈಗ ಹಣ ವಾಪಸ್ ಸಿಗದೆ ಪರದಾಡುವಂತಾಗಿದೆ. ಕ್ರೀಡಾ ಸ್ಪರ್ಧೆಗಳ ವೀಕ್ಷಣೆಗೆ ಕಾಯ್ದಿರಿಸಿದ್ದ ಟಿಕೆಟ್ಗಳನ್ನು ಮುಂದಿನ ವರ್ಷದ ಸ್ಪರ್ಧೆಗಳಿಗೂ ಬಳಸಬಹುದು ಅಥವಾ ಈ ಹಣವನ್ನು ವಾಪಸ್ ನೀಡಲು ಸಿದ್ಧ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ತಿಳಿಸಿದೆ.
ಆದರೆ, ಹೋಟೆಲ್ ಮತ್ತು ವಿಮಾನದ ಟಿಕೆಟ್ಗಳ ಬುಕ್ಕಿಂಗ್ ಅದರ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಖಾಸಗಿ ಸಂಸ್ಥೆಗಳು ಮುಂಗಡ ಪಾವತಿಯನ್ನು ಹಿಂದಿರುಗಿಸುತ್ತವೆಯೋ, ಇಲ್ಲವೋ ಎಂಬ ಬಗ್ಗೆ ಸಾವಿರಾರು ಕ್ರೀಡಾಪ್ರೇಮಿಗಳು ಚಿಂತೆಯಲ್ಲಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ಸಂಘಟಕರು ಕ್ರೀಡಾಕೂಟದ ವೇಳೆ 6 ಲಕ್ಷ ವಿದೇಶಿ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಲ್ಲಿದ್ದರು. ಆದರೆ ಕರೊನಾ ಕಳವಳದಿಂದಾಗಿ ಮುಂದಿನ ವರ್ಷದ ವೇಳೆ ಇಷ್ಟು ಪ್ರವಾಸಿಗರು ಆಗಮಿಸುತ್ತಾರೆಯೇ ಎಂಬ ಬಗ್ಗೆ ಅನುಮಾನವನ್ನು ಹೊಂದಿದೆ.
ಮುಂದಿನ ವರ್ಷವೂ ಅನುಮಾನ: ಮುಂದಿನ ವರ್ಷವೂ ಒಲಿಂಪಿಕ್ಸ್ ಆಯೋಜನೆಗೊಳ್ಳುವ ಬಗ್ಗೆ ಅನುಮಾನವಿದೆ. ಈಗಿನ ಸ್ಥಿತಿಯಲ್ಲಿ ಏನನ್ನೂ ಹೇಳಲಾಗದು ಎಂದು ಟೋಕಿಯೊ ಗೇಮ್್ಸ ಸಂಘಟನಾ ಸಮಿತಿ ಸಿಇಒ ಟೊಶಿರೊ ಮುಟೊ ಹೇಳಿದ್ದಾರೆ.