ಕ್ರೀಡೆ

ಒಲಿಂಪಿಕ್ಸ್ ಪದಕ ಉಪ್ಪಾಗಿದೆ ಎಂದು ಹಾಕಿ ಗೋಲು ಕೀಪರ್ ಶ್ರೀಜೇಶ್ ಹೇಳಿದ್ದೇಕೆ?

ಬೆಂಗಳೂರು: ಭಾರತದ ಪುರುಷರ ಹಾಕಿ ತಂಡ ಕಂಚಿನ ಪದಕದ ಹೋರಾಟದಲ್ಲಿ ಬಲಿಷ್ಠ ಜರ್ಮನಿ ತಂಡವನ್ನು ಮಣಿಸುವಲ್ಲಿ ಗೋಲು ಕೀಪರ್ ಪಿಆರ್ ಶ್ರೀಜೇಶ್ ಪಾತ್ರ ನಿರ್ಣಾಯಕವಾದುದು. ಪಂದ್ಯದ ಅಂತಿಮ ಕ್ಷಣದಲ್ಲಿ ಜರ್ಮನಿ ತಂಡಕ್ಕೆ ದೊರೆತ ಪೆನಾಲ್ಟಿ ಕಾರ್ನರ್‌ಅನ್ನು ಏಕಾಂಗಿಯಾಗಿ ತಡೆದು ಶ್ರೀಜೇಶ್ ಬೀಗಿದ್ದರು. ಈ ಮೂಲಕ ಹೆಮ್ಮೆಯಿಂದ ಕಂಚಿನ ಹಾರಕ್ಕೆ ಕೊರಳೊಡ್ಡಿದ್ದ ಕೇರಳದ ಹಾಕಿ ತಾರೆ ಶ್ರೀಜೇಶ್, ಒಲಿಂಪಿಕ್ಸ್ ಪದಕ ಉಪ್ಪಾಗಿದೆ ಎಂದು ಹೇಳಿದ್ದಾರೆ!

ಸಾಮಾನ್ಯವಾಗಿ ಒಲಿಂಪಿಕ್ಸ್ ಪದಕ ಗೆದ್ದ ಎಲ್ಲ ಕ್ರೀಡಾಪಟುಗಳು ಮಾಡುವಂತೆ 33 ವರ್ಷದ ಶ್ರೀಜೇಶ್ ಕೂಡ ಪದಕವನ್ನು ಕಚ್ಚಿ ಪೋಸ್ ನೀಡಿರುವ ಚಿತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ಒಲಿಂಪಿಕ್ಸ್ ಪದಕ ಉಪ್ಪಾದ ರುಚಿ ಹೊಂದಿದೆ ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ಕಾರಣವನ್ನೂ ನೀಡಿರುವ ಅವರು, ಕಳೆದ 21 ವರ್ಷಗಳ ಪರಿಶ್ರಮದ ಬೆವರು ಅದಕ್ಕೆ ಅಂಟಿಕೊಂಡಿರುವುದೇ ಕಾರಣ ಎಂದೂ ವಿವರಿಸಿದ್ದಾರೆ.

ಶ್ರೀಜೇಶ್ ಅವರ ಹಾಕಿ ಜೀವನದ ಏಳ್ಗೆಯಲ್ಲಿ ತಂದೆ ರವೀಂದ್ರನ್ ಅವರ ಪಾತ್ರ ಮಹತ್ವದ್ದಾಗಿದ್ದು, ಗೆಲುವಿನ ಬಳಿಕ ಅವರು, ‘ಈ ಪದಕ ನನ್ನ ಅಚ್ಚನ್‌ಗೆ (ತಂದೆ) ಅರ್ಪಣೆ. ಅವರೇ ನನ್ನ ಹೀರೋ, ಅವರಿಂದಾಗಿಯೇ ನಾನಿಂದು ಇಲ್ಲಿದ್ದೇನೆ’ ಎಂದು ಟ್ವೀಟಿಸಿದ್ದರು.

‘ಇದು ಭಾರತೀಯ ಹಾಕಿಯ ಮರುಹುಟ್ಟು. 1980ರಲ್ಲಿ ನಾವು ಕೊನೇ ಪದಕ ಗೆದ್ದಿದ್ದೆವು. ನಂತರ ಬರಿಗೈಯಲ್ಲೇ ಮರಳುತ್ತಿದ್ದೆವು. ಇಂದಿನ ಈ ಗೆಲುವು ದೇಶದ ಯುವ ಜನರು ಮತ್ತೆ ಸ್ಟಿಕ್ ಕೈಗೆತ್ತಿಕೊಂಡು ಹಾಕಿ ಆಡಲು ಪ್ರೇರಣೆ ಮತ್ತು ಶಕ್ತಿ ತುಂಬಲಿದೆ. ಇದೊಂದು ಸೊಗಸಾದ ಆಟ’ ಎಂದೂ ಪಿಆರ್ ಶ್ರೀಜೇಶ್ ಗೆಲುವಿನ ಬಳಿಕ ಹೇಳಿಕೊಂಡಿದ್ದರು. ಜರ್ಮನಿಯ ಗೋಲು ಗಳಿಕೆಯ ಪ್ರಯತ್ನಗಳಿಗೆ ತಡೆಗೋಡೆಯಾಗಿ ನಿಂತಿದ್ದ ಶ್ರೀಜೇಶ್ ಗೆಲುವಿನ ಬಳಿಕ ಗೋಲು ಪೆಟ್ಟಿಗೆಗೆ ಸಾಷ್ಟಾಂಗ ನಮಸ್ಕಾರ ಮಾಡಿ ‘ಇದು ನನ್ನ ದೇಗುಲ’ ಎಂದಿದ್ದರು. ಗೋಲು ಪೆಟ್ಟಿಗೆಯ ಮೇಲೆ ಕುಳಿತುಕೊಂಡೂ ಸಂಭ್ರಮಿಸಿದ್ದರು.