ಟೋಕಿಯೋ: ಜಾಗತಿಕ ಕ್ರೀಡಾ ಹಬ್ಬ ಟೋಕಿಯೋ ಒಲಿಂಪಿಕ್ಸ್ ಆರಂಭವಾದ ಎರಡೇ ದಿನಕ್ಕೆ ಭಾರತ ಮೊದಲ ಪದಕ ಬೇಟೆಯಾಡಿದೆ. 49 ಕೆಜಿ ವೇಟ್ ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕವನ್ನು ಜಯಿಸಿದ್ದಾರೆ.
84 ಮತ್ತು 87 ಕೆಜಿ ಭಾರವನ್ನು ಎತ್ತುವಲ್ಲಿ ಯಶಸ್ವಿಯಾದ ಮೀರಾಬಾಯಿ 89ಕೆಜಿ ಭಾರ ಎತ್ತುವಲ್ಲಿ ವಿಫಲವಾದರು. ಹೀಗಾಗಿ ಅವರು ಎರಡನೇ ಸ್ಥಾನವನ್ನು ಅಲಂಕರಿಸುವ ಮೂಲಕ ಬೆಳ್ಳಿ ಪದಕವನ್ನು ಜಯಿಸಿದರು.
ಚೀನಾದ ಹೌ ಝಿಜು 94 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಲ್ಲದೆ, ಒಲಿಂಪಿಕ್ಸ್ ದಾಖಲೆ ಸೃಷ್ಟಿಸಿದ್ದಾರೆ.
ಪುರುಷರ 10 ಮೀ ಏರ್ ಪಿಸ್ತೋಲ್ ಸ್ಪರ್ಧೆಯಲ್ಲಿ ಭಾರತದ ಸೌರಭ್ ಚೌಧರಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಅರ್ಹತಾ ಸುತ್ತಿನಲ್ಲಿ ಮೊದಲಿಗರಾಗಿ ಆಟ ಮುಗಿಸಿದ್ದಾರೆ. ಈ ಮೂಲಕ ಪದಕಗಳಿಗಾಗಿ ಸೆಣಸುವ ಫೈನಲ್ಸ್ ಸ್ಪರ್ಧೆಗೆ ಬಡ್ತಿ ಪಡೆದಿದ್ದಾರೆ.