ಕ್ರೀಡೆ

ಟೋಕಿಯೋ ಒಲಿಂಪಿಕ್ಸ್​: ಬೆಳ್ಳಿಯೊಂದಿಗೆ ಶುಭಾರಂಭ ಮಾಡಿದ ಭಾರತ ಸ್ವರ್ಣದೊಂದಿಗೆ ಶುಭಾಂತ್ಯ

ನವದೆಹಲಿ: ಈ ಬಾರಿಯ ಟೋಕಿಯೋ ಒಲಿಂಪಿಕ್ಸ್​ ಭಾರತದ ಪಾಲಿಗೆ ತುಂಬಾ ಸ್ಮರಣೀಯವಾಗಿದೆ. ವೇಟ್​ಲಿಫ್ಟರ್​ ಮೀರಾಬಾಯಿ ಚಾನು ಅವರ ಬೆಳ್ಳಿ ಪದಕದೊಂದಿಗೆ ಒಲಿಂಪಿಕ್ಸ್​ ಶುಭಾರಂಭ ಕಂಡ ಭಾರತ, ಜಾವೆಲಿನ್​ ಎಸೆತದಲ್ಲಿ ನೀರಜ್​ ಚೋಪ್ರಾ ಅವರ ಸ್ವರ್ಣ ಪದಕದೊಂದಿಗೆ ಅದ್ಧೂರಿಯಾಗಿಯೇ ಒಲಿಂಪಿಕ್ಸ್​ಗೆ ಶುಭಾಂತ್ಯವಾಡಿದೆ.

ಕಳೆದ ಬಾರಿ ಲಂಡನ್​ನಲ್ಲಿ ನಡೆದಿದ್ದ ಒಲಿಂಪಿಕ್ಸ್​ನಲ್ಲಿ ಭಾರತ ಆರು ಪದಕಗಳನ್ನು ಗೆದಿತ್ತು. ಈ ಬಾರಿ ಏಳು ಪದಕಗಳೊಂದಿಗೆ ಟೋಕಿಯೋದಲ್ಲಿ ನಡೆದ ಜಾಗತಿಕ ಕ್ರೀಡಾ ಹಬ್ಬದ ಓಟವನ್ನು ಯಶಸ್ವಿಯಾಗಿ ಮುಗಿಸಿದೆ.

ಒಳ್ಳೆಯ ಆರಂಭ ಕೊಟ್ಟ ಮೀರಾಬಾಯಿ

ಒಲಿಂಪಿಕ್ಸ್​ ಆರಂಭವಾದ ಮೊದಲ ದಿನವೇ ಭಾರತಕ್ಕೆ ಭಾರ ಎತ್ತುವ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಜಯಿಸುವ ಮೂಲಕ ಭಾರತಕ್ಕೆ ಶುಭಾರಂಭ ನೀಡಿದರು. ಒಟ್ಟು 202 ಕೆಜಿ ಭಾರ ಎತ್ತುವ ಮೂಲಕ ಭಾರ ಎತ್ತುವ ಸ್ಪರ್ಧೆಯಲ್ಲಿ ಮೀರಾಬಾಯಿ ಅಮೋಘ ಸಾಧನೆ ಮಾಡಿದರು. ಮೀರಾ ಸಾಧನೆಗೆ ರಾಷ್ಟ್ರಾದ್ಯಂತ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿತು. ಆದರೆ, ಪಿಸ್ತೂಲ್​ ಶೂಟರ್ಸ್​, ಸೌರಭ್​ ಚೌಧರಿ ಮತ್ತು ಅಭಿಶೇಕ್​ ವರ್ಮಾ ಹಾಗೂ ರೈಫಲ್​ ಶೂಟರ್ಸ್​ ಎಲವೆನಿಲ್​ ವಲರಿವನ್​ ಮತ್ತು ಅಪೂರ್ವಿ ಚಾಂದೆಲ್ಲ ಅವರ ಮೇಲೆ ಭಾರತೀಯರು ಇಟ್ಟಿದ್ದ ಭರವಸೆ ಹುಸಿಯಾಯಿತು.

ಮಹಿಳಾ ಬಾಕ್ಸಿಂಗ್​ ವಿಭಾಗದಲ್ಲಿ ಭಾರತದ ಭರವಸೆಯಾಗಿದ್ದ ಆರು ಬಾರಿಯ ವಿಶ್ವ ಚಾಂಪಿಯನ್ ಬಾಕ್ಸರ್ ಮೇರಿ ಕೋಮ್ ಪ್ರಿ-ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಸೋಲು ಕಾಣುವ ಮೂಲಕ ಭಾರತದ ಪದಕದ ಕನಸೊಂದು ನುಚ್ಚು ನೂರಾಗಿಸಿದರು. ಮಹಿಳೆಯರ 51 ಕೆ.ಜಿ.ವಿಭಾಗದಲ್ಲಿ 16ನೇ ಸುತ್ತಿನ ಹೋರಾಟದಲ್ಲಿ ಮೇರಿ ಕೋಮ್, ಕೊಲಂಬಿಯಾದ ಇಂಗ್ರಿಟ್‌ ವಲೆನ್ಸಿಯಾ ವಿರುದ್ಧ 2-3 ಅಂಕಗಳ ಅಂತರದಲ್ಲಿ ವಿರೋಚಿತ ಸೋಲು ಕಂಡರು. ಆದರೂ ಬಾಕ್ಸಿಂಗ್​ ವಿಭಾಗದಲ್ಲಿ ಭಾರತದ ಲವ್ಲಿನಾ ಬೊರ್ಗೊಹೈನ್‌ ಕಂಚಿನ ಪದಕ ಗೆಲ್ಲುವ ಮೂಲಕ ಕೊರಗನ್ನು ನೀಗಿಸಿದರು.

ಹುಸಿಯಾಗಲಿಲ್ಲ ಪಿವಿ ಸಿಂಧು ಪದಕ ನಿರೀಕ್ಷೆ

2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಹೈದರಾಬಾದ್‌ನ ಸಿಂಧು ಟೋಕಿಯೋ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಒಲಿಂಪಿಕ್ಸ್‌ನಲ್ಲಿ ಸತತ 2ನೇ ಬಾರಿಗೆ ಪದಕಕ್ಕೆ ಸಿಂಧು ಮುತ್ತಿಕ್ಕಿದರು. ಕೋಟ್ಯಂತರ ಕ್ರೀಡಾಭಿಮಾನಿಗಳ ನಿರೀಕ್ಷೆಯನ್ನು ಹುಸಿಗೊಳಿಸದ ಸಿಂಧು ನಿರೀಕ್ಷೆಯಂತೆಯೇ ಭಾರತಕ್ಕೆ ಪದಕ ತಂದುಕೊಡುವಲ್ಲಿ ಯಶಸ್ವಿಯಾದರು.

ಪುರುಷರ ಹಾಕಿ ತಂಡದ ಐತಿಹಾಸಿಕ ಸಾಧನೆ

ಒಲಿಂಪಿಕ್ಸ್‌ನ ಹಾಕಿಯಲ್ಲಿ ಪುರುಷರ ತಂಡವು ಕಂಚಿನ ಪದಕವನ್ನು ಗೆದ್ದುಕೊಂಡು 41 ವರ್ಷಗಳ ಬಳಿಕ ಐತಿಹಾಸಿಕ ಸಾಧನೆ ಮಾಡಿದೆ. ಜರ್ಮನಿ ವಿರುದ್ಧ 5-4 ಅಂತರದಲ್ಲಿ ಗೆದ್ದ ಭಾರತ ತಂಡ, ಪದಕ ಗೆದ್ದುಕೊಂಡಿದೆ. ಆದರೆ, ಮಹಿಳಾ ಹಾಕಿ ತಂಡದಿಂದ ಪದಕದ ನಿರೀಕ್ಷೆ ಹುಸಿಯಾಯಿತು. ಆದರೂ, ಒಲಿಂಪಿಕ್ಸ್ ಇತಿಹಾಸದಲ್ಲಿ 41 ವರ್ಷಗಳ ಬಳಿಕ ಭಾರತ ತಂಡ ಸೆಮಿಫೈನಲ್​ ಹಂತಕ್ಕೇರಿತು.

ಕುಸ್ತಿಯಲ್ಲೂ ನಿರಾಸೆ ಆಗಲಿಲ್ಲ

65 ಕೆ.ಜಿ. ವಿಭಾಗದಲ್ಲಿ ಭಜರಂಗ್​ ಪೂನಿಯಾ ಕಂಚಿನ ಪದಕ ಜಯಿಸಿದರೆ, ರವಿ ದಹಿಯಾ ಕೂಡ 57 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕಕ್ಕೆ ಮುತ್ತಿಕ್ಕಿದರು. ಆದರೆ, ವಿನೇಶ್​ ಫೋಗತ್​ ಹುಸಿಗೊಳಿಸಿದರು.

ಚಿನ್ನದ ಹುಡುಗ ನೀರಜ್​ ಚೋಪ್ರಾ

ಜಾಗತಿಕ ಕ್ರೀಡಾ ಹಬ್ಬ ಟೋಕಿಯೋ ಒಲಿಂಪಿಕ್ಸ್​ನಲ್ಲಿ ಬೆಳ್ಳಿಯೊಂದಿಗೆ ಶುಭಾರಂಭ ಕಂಡಿದ್ದ ಭಾರತಕ್ಕೆ ಚಿನ್ನದ ಪದಕ ಕನಸಾಗಿ ಉಳಿಯಬಹುದೇನೋ ಅಂದುಕೊಂಡಿದ್ದ ಕೊನೆಯ ಗಳಿಗೆಯಲ್ಲಿ ಭಾರತದ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್​​ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದರು. ನೀರಜ್ ಚೋಪ್ರಾ 87.58 ಮೀಟರ್ ಎಸೆದು ಇತಿಹಾಸ ಸೃಷ್ಟಿಸಿದರು. ಈ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಗೆ ಪಾತ್ರರಾಗಿದ್ದಾರೆ. (ಏಜೆನ್ಸೀಸ್​)