ಕ್ರೀಡೆ

ಇಂದು ರೋಹಿತ್​-ಸಿರಾಜ್​ ಮುಖಾಮುಖಿ ಕುತೂಹಲ; ಹೀಗಿದೆ ಕಾರಣ...

ಅಹಮದಾಬಾದ್: ಐಪಿಎಲ್​ 18ರಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್​ ಟೈಟಾನ್ಸ್​ ಮುಖಾಮುಖಿ ಆಗಲಿದ್ದು, ಈ ವೇಳೆ ರೋಹಿತ್​ ಶರ್ಮ-ಮೊಹಮದ್ ಸಿರಾಜ್​ ಮುಖಾಮುಖಿ ಕುತೂಹಲ ಕೆರಳಿಸಿದೆ.

ಕಳೆದ ಚಾಂಪಿಯನ್ಸ್​ ಟ್ರೋಫಿಗೆ ವೇಗಿ ಮೊಹಮದ್​ ಸಿರಾಜ್​ ಅವರನ್ನು ಭಾರತ ತಂಡದಿಂದ ಕಡೆಗಣಿಸಿದ ವೇಳೆ ನಾಯಕ ರೋಹಿತ್​ ಶರ್ಮ, ಹೊಸ ಚೆಂಡಿನಲ್ಲಷ್ಟೇ ಸಿರಾಜ್​ ಯಶ ಕಂಡಿದ್ದು, ಹಳೆಯ ಚೆಂಡಿನಲ್ಲಿ ಪರಿಣಾಮಕಾರಿ ಎನಿಸಿಲ್ಲ ಎಂಬ ಸಮರ್ಥನೆ ನೀಡಿದ್ದರು. ಇತ್ತೀಚೆಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಿರಾಜ್​, ವಿಶ್ವದ ಅಗ್ರ 10 ವೇಗಿಗಳ ಪೈಕಿ ಕಳೆದೊಂದು ವರ್ಷದಲ್ಲಿ ನಾನೇ ಗರಿಷ್ಠ ವಿಕೆಟ್​ ಗಳಿಸಿರುವೆ. ಎಕಾನಮಿ ಕೂಡ ಕಡಿಮೆಯಾಗಿದೆ. ಅಂಕಿ-ಅಂಶಗಳೇ ಎಲ್ಲವನ್ನು ಹೇಳುತ್ತಿವೆ. ನಾನು ಹೊಸ-ಹಳೆಯ ಚೆಂಡಿನಲ್ಲಿ ಉತ್ತಮ ನಿರ್ವಹಣೆ ತೋರಿರುವೆ ಎಂದಿದ್ದರು. ನಂತರ ಇದಕ್ಕೆ ತೇಪೆ ಹಚ್ಚಿ, ರೋಹಿತ್​ ತಂಡದ ಒಳಿತಿಗಾಗಿ ನಿರ್ಧಾರ ಕೈಗೊಂಡರು. ದುಬೈನ ಸ್ಪಿನ್​ ಸ್ನೇಹಿ ಪಿಚ್​ನಲ್ಲಿ ಅವರಿಗೆ ನನ್ನ ಅಗತ್ಯವಿರಲಿಲ್ಲ ಎಂದಿದ್ದರು.

ಗುಜರಾತ್​ ಪರ ಆಡಿದ ಮೊದಲ ಪಂದ್ಯದಲ್ಲಿ ಸಿರಾಜ್​ 4 ಓವರ್​ಗಳಲ್ಲಿ 54 ರನ್​ ಬಿಟ್ಟುಕೊಟ್ಟಿದ್ದರು. ಅದರಲ್ಲೂ ಇನಿಂಗ್ಸ್​ನ ಅಂತಿಮ ಓವರ್​ ಒಂದರಲ್ಲೇ ಬರೋಬ್ಬರಿ 23 ರನ್​ ನೀಡಿದ್ದರು. ಹೀಗಾಗಿ ರೋಹಿತ್​ ಹೇಳಿಕೆ ಸರಿಯೇ ಅಥವಾ ಸಿರಾಜ್​ ಅದನ್ನು ಸುಳ್ಳಾಗಿಸುವರೇ ಎಂಬುದು ಇವರಿಬ್ಬರ ಮುಖಾಮುಖಿಯಲ್ಲಿ ಸ್ಪಷ್ಟವಾಗಬೇಕಿದೆ.