ಕ್ರೀಡೆ

ಡೆಲ್ಲಿ ಕ್ಯಾಪಿಟಲ್ಸ್​ಗೆ ಇಂದು ಪಂಜಾಬ್​ ಕಿಂಗ್ಸ್​ ಸವಾಲು

ಅಹಮದಾಬಾದ್​: ಕಳೆದ ಪಂದ್ಯದಲ್ಲಿ ಸುಲಭ ಗೆಲುವು ದಾಖಲಿಸಿ ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ತಂಡಗಳಾದ ಪಂಜಾಬ್​ ಕಿಂಗ್ಸ್​ ಮತ್ತು ಡೆಲ್ಲಿ ಕ್ಯಾಪಿಟಲ್ಸ್​, ಐಪಿಎಲ್​&14ರಲ್ಲಿ ಭಾನುವಾರದ 2ನೇ ಪಂದ್ಯದಲ್ಲಿ ಸೆಣಸಲಿವೆ. ಪ್ಲೇಆ್​ ಅವಕಾಶ ವೃದ್ಧಿಸಿಕೊಳ್ಳುವ ಸಲುವಾಗಿ ಉಭಯ ತಂಡಗಳು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹೋರಾಟದಲ್ಲಿ ಗೆಲುವಿನ ಲಯ ಕಾಯ್ದುಕೊಳ್ಳಲು ಪ್ರಯತ್ನಿಸಲಿವೆ. ಹಾಲಿ ರನ್ನರ್​ಅಪ್​ ಡೆಲ್ಲಿ ತಂಡ ಇದುವರೆಗೆ ಆಡಿದ 7 ಪಂದ್ಯಗಳಲ್ಲಿ 5ರಲ್ಲಿ ಜಯಿಸಿ ಬಲಿಷ್ಠ ಸ್ಥಿತಿಯಲ್ಲಿದೆ. ರಿಷಭ್​ ಪಂತ್​ ಅವರಿಗೆ ನಾಯಕತ್ವ ಅನುಭವ ಕಡಿಮೆ ಇದ್ದರೂ, ತಂಡದ ಆಟಗಾರರ ಉತ್ತಮ ನಿರ್ವಹಣೆ ಅವರ ಕೆಲಸವನ್ನು ಸುಲಭವಾಗಿಸಿದೆ. ಮತ್ತೊಂದೆಡೆ ಪಂಜಾಬ್​ ತಂಡ ಅಸ್ಥಿರ ನಿರ್ವಹಣೆಯ ಹಿನ್ನಡೆ ಹೊಂದಿದ್ದು, ಇದುವರೆಗೆ ಆಡಿದ 7 ಪಂದ್ಯಗಳಲ್ಲಿ 3ರಲ್ಲಿ ಗೆದ್ದು, 4ರಲ್ಲಿ ಸೋತಿದೆ. ಕಳೆದ 3 ಪಂದ್ಯಗಳಲ್ಲಿ 2ರಲ್ಲಿ ಜಯಿಸಿರುವ ಕೆಎಲ್​ ರಾಹುಲ್​ ಬಳಗ ನಿಧಾನವಾಗಿ ಲಯಕ್ಕೆ ಮರಳುವ ಸೂಚನೆ ರವಾನಿಸಿದೆ. ಮೋದಿ ಕ್ರೀಡಾಂಗಣದ ಪಿಚ್​ ಪಂದ್ಯ ಸಾಗಿದಂತೆ ಬ್ಯಾಟಿಂಗ್​ಗೆ ಕಠಿಣವಾಗುತ್ತಿದೆ. ಹೀಗಾಗಿ ಟಾಸ್​ ಗೆದ್ದ ತಂಡ ಮೊದಲು ಬ್ಯಾಟಿಂಗ್​ ಮಾಡಲು ಆದ್ಯತೆ ನೀಡಿದರೆ ಅಚ್ಚರಿ ಇಲ್ಲ. ಉಭಯ ತಂಡಗಳ ಬಲಿಷ್ಠ ಬ್ಯಾಟಿಂಗ್​ ವಿಭಾಗ ಪಂದ್ಯದ ಕುತೂಹಲವನ್ನು ಹೆಚ್ಚಿಸಿದೆ.

ಪಂಜಾಬ್​ಗೆ ಸ್ಪಿನ್​ ಬಲ
ಕಳೆದ ಪಂದ್ಯದಲ್ಲಿ ಸ್ಪಿನ್ನರ್​ಗಳಾದ ಹರ್​ಪ್ರೀತ್​ ಬ್ರಾರ್​ ಮತ್ತು ರವಿ ಬಿಷ್ಣೋಯಿ ಬಿಗಿ ದಾಳಿಯ ನೆರವಿನಿಂದ ಆರ್​ಸಿಬಿಯ ಬಲಿಷ್ಠ ಬ್ಯಾಟಿಂಗ್​ ಪಡೆಗೆ ಕಡಿವಾಣ ಹಾಕಿದ್ದ ಪಂಜಾಬ್​ ತಂಡ, ಡೆಲ್ಲಿ ತಂಡದ ಬಲಿಷ್ಠ ಬ್ಯಾಟಿಂಗ್​ ವಿಭಾಗದ ವಿರುದ್ಧವೂ ಅಂಥದ್ದೇ ನಿರ್ವಹಣೆ ತೋರುವ ಹಂಬಲದಲ್ಲಿದೆ. ಬ್ರಾರ್​&ಬಿಷ್ಣೋಯಿ ಜೋಡಿ 8 ಓವರ್​ಗಳಲ್ಲಿ 36 ರನ್​ ನೀಡಿ 5 ವಿಕೆಟ್​ ಕಬಳಿಸಿತ್ತು. ಭಾರತೀಯ ಬ್ಯಾಟ್ಸ್​ಮನ್​ಗಳದ್ದೇ ಬಲ ಹೊಂದಿರುವ ಡೆಲ್ಲಿ ತಂಡವನ್ನು ಸ್ಪಿನ್ನರ್​ಗಳು ಕಟ್ಟಿ ಹಾಕುವುದು ಸುಲಭವಲ್ಲ. ಬ್ಯಾಟಿಂಗ್​ನಲ್ಲಿ ಕೆಎಲ್​ ರಾಹುಲ್​ ನಾಯಕನ ಆಟವಾಡುತ್ತಿರುವುದು ತಂಡಕ್ಕೆ ಬಲ ತುಂಬಿದೆ.

ಡೆಲ್ಲಿಗೆ ಬ್ಯಾಟಿಂಗ್​ ಬಲ
ಶಿಖರ್​ ಧವನ್​ (311 ರನ್​) ಮತ್ತು ಪೃಥ್ವಿ ಷಾ (269) ಭದ್ರ ಬುನಾದಿ ಹಾಕಿಕೊಟ್ಟ ಪಂದ್ಯಗಳಲ್ಲಿ ಡೆಲ್ಲಿ ತಂಡಕ್ಕೆ ಸುಲಭ ಜಯ ಲಭಿಸಿದೆ. ಈ ಜೋಡಿ ಇದುವರೆಗೆ 5 ಅರ್ಧಶತಕ ಬಾರಿಸಿದೆ. ಜತೆಗೆ 71 ಬೌಂಡರಿ ಮತ್ತು 15 ಸಿಕ್ಸರ್​ ಕೂಡ ಸಿಡಿಸಿವೆ. ಮಧ್ಯಮ ಕ್ರಮಾಂಕದಲ್ಲಿ ರಿಷಭ್​ ಪಂತ್​, ಸ್ಟೀವನ್​ ಸ್ಮಿತ್​ ಮತ್ತು ಶಿಮ್ರೋನ್​ ಹೆಟ್ಮೆಯರ್​ ಕೂಡ ರನ್​ ಗಳಿಸುತ್ತಿದ್ದಾರೆ. ಡೆಲ್ಲಿ ಬೌಲಿಂಗ್​ ವಿಭಾಗವೂ ಪ್ರಬಲವಾಗಿದ್ದು, ಯುವ ವೇಗಿ ಆವೇಶ್​ ಖಾನ್​ 13 ವಿಕೆಟ್​ ಕಬಳಿಸಿ ಮಿಂಚಿದ್ದಾರೆ. ಕರೊನಾದಿಂದ ಗುಣಮುಖರಾಗಿ ಮರಳಿದ ಬಳಿಕ ಆಲ್ರೌಂಡರ್​ ಅರ್​ ಪಟೇಲ್​ ಕೂಡ ತಂಡದ ಬಲ ಹಿಗ್ಗಿಸಿದ್ದಾರೆ. ಕಗಿಸೊ ರಬಾಡ ಕಳೆದೆರಡು ಪಂದ್ಯಗಳಿಂದ ಉತ್ತಮ ದಾಳಿ ಸಂಟಿಸುತ್ತಿದ್ದರೂ, ವಿಕೆಟ್​ ಕಬಳಿಸುವ ಚಕಚಕ್ಯತೆಯ ಕೊರತೆ ಇದೆ.

*ಪಂಜಾಬ್​ ಕಿಂಗ್ಸ್​: ಕಳೆದ ಪಂದ್ಯದಲ್ಲಿ ಸ್ಪಿನ್ನರ್​ಗಳಿಂದ ಗೆಲುವು ಒಲಿದಿದ್ದರೂ, ವೇಗದ ಬೌಲಿಂಗ್​ ವಿಭಾಗದ ಸಮಸ್ಯೆ ಇನ್ನೂ ಉಳಿದಿದೆ. ಕನ್ನಡಿಗ ಮಯಾಂಕ್​ ಅಗರ್ವಾಲ್​ ಫಿಟ್​ ಆಗಿ ಮರಳಿದರೆ ಸಹಜವಾಗಿಯೇ ಪ್ರಭ್​ಸಿಮ್ರಾನ್​ ಸಿಂಗ್​ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ರಿಲಿ ಮೆರಿಡಿತ್​ಗೆ ಮತ್ತೆ ಅವಕಾಶ ಸಿಗುವ ಬಗ್ಗೆಯೂ ಅನುಮಾನವಿದೆ.
ಕಳೆದ ಪಂದ್ಯ: ಆರ್​ಸಿಬಿ ವಿರುದ್ಧ 34 ರನ್​ ಜಯ.
*ಡೆಲ್ಲಿ ಕ್ಯಾಪಿಟಲ್ಸ್​: ಗಾಯದಿಂದಾಗಿ ಕಳೆದ ಪಂದ್ಯದಿಂದ ಹೊರಗುಳಿದಿದ್ದ ಸ್ಪಿನ್ನರ್​ ಅಮಿತ್​ ಮಿಶ್ರಾ ಮರಳಿ ಕಣಕ್ಕಿಳಿಯಬಹುದು. ಇಲ್ಲಿನ ಪಿಚ್​ನಲ್ಲಿ ಅವರು ತಂಡದ ಬಲ ಹೆಚ್ಚಿಸಲಿದ್ದಾರೆ. ಮಿಶ್ರಾ ಮರಳಿದರೆ ಲಲಿತ್​ ಯಾದವ್​ ಮತ್ತೊಮ್ಮೆ ಹೊರಗುಳಿಯಬಹುದು. ಲಲಿತ್​ ಯಾದವ್​ ಕಳೆದ ಪಂದ್ಯದಲ್ಲಿ ಮಿಂಚಿರುವುದರಿಂದ ವೇಗಿ ಇಶಾಂತ್​ ಶರ್ಮ ಹೊರಬಿದ್ದರೂ ಅಚ್ಚರಿ ಇಲ್ಲ.
ಕಳೆದ ಪಂದ್ಯ: ಕೆಕೆಆರ್​ ವಿರುದ್ಧ 7 ವಿಕೆಟ್​ ಜಯ.

ಮುಖಾಮುಖಿ: 27
ಪಂಜಾಬ್​: 15
ಡೆಲ್ಲಿ: 12
ಆರಂಭ: ರಾತ್ರಿ 7.30
ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​