ಕ್ರೀಡೆ

Womens T-20 World Cup: ಯುಎಇಯಲ್ಲಿ ಇಂದಿನಿಂದ ಪ್ರಾರಂಭ..ಕಪ್‌ ಗೆಲ್ಲುವ ಫೆವರೀಟ್‌ ತಂಡ ಯಾವುದು ಗೊತ್ತಾ?

ಅಬುಧಾಬಿ: ಯುನೈಟೆಡ್​ ಅರಬ್​ ಎಮಿರೇಟ್ಸ್​(ಯುಎಇ)ನಲ್ಲಿ Womens T-20 World Cup ಗುರುವಾರ(ಅ.3)ದಿಂದ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಭಾರತ ಸಹ ಭಾಗವಹಿಸುತ್ತಿದ್ದು, ಕಪ್‌ ಗೆಲ್ಲುವ ಫೆವರೀಟ್‌ ತಂಡಗಳಲ್ಲಿ ಒಂದಾಗಿದೆ.

ಬಾಂಗ್ಲಾದೇಶದಲ್ಲಿ ನಡೆಯಬೇಕಿದ್ದ ಮಹಿಳೆಯರ ಟಿ20 ವಿಶ್ವಕಪ್‌ ಅಲ್ಲಿ ನಡೆಯುತ್ತಿರುವ ಹಿಂಸಾಚಾರದ ಹಿನ್ನೆಲೆಯಲ್ಲಿ ಐಸಿಸಿ ಈ ಟೂರ್ನಿಯನ್ನು ಯುಎಇಗೆ ಶಿಫ್ಟ್ ಮಾಡಿದೆ. ಈಗ ಮರಳು ನಾಡಿನಲ್ಲಿ ಕ್ರಿಕೆಟ್‌ ಕ್ರೇಜ್‌ ಹೆಚ್ಚಾಗಿದೆ. ಅಕ್ಟೋಬರ್ 3 ರಿಂದ 20ರವರೆಗೆ ಮಹಿಳಾ ವಿಶ್ವಕಪ್‌ ನಡೆಯಲಿದ್ದು, ಒಟ್ಟು 10 ತಂಡಗಳು ಭಾಗವಹಿಸುತ್ತಿವೆ.

ಇನ್ನು ಈ ಮೆಗಾ ಟೂರ್ನಿಯನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನ ಮೇಲೆ ನಿಂತಿದ್ದಾರೆ. ಇದುವರೆಗೆ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಮಹಿಳಾ ತಂಡಗಳು ಮಾತ್ರ ಟಿ20 ವಿಶ್ವಕಪ್ ಗೆದ್ದುಕೊಂಡಿವೆ. ಈ ಬಾರಿಯ ಚಾಂಪಿಯನ್‌ ಯಾರಾಗಬಹುದು ಎಂಬ ಕುತೂಹಲ ಹೆಚ್ಚಿದೆ.

ಟಿ-20 ಮಹಿಳಾ ವಿಶ್ವಕಪ್​ನಲ್ಲಿ ಪಾಲ್ಗೊಳ್ಳುವ 10 ತಂಡಗಳನ್ನು 2 ಗುಂಪು ಮಾಡಲಾಗಿದೆ. ಭಾರತ ತಂಡ ಎ ಗುಂಪಿನಲ್ಲಿದೆ. ಈ ಗುಂಪಿನಲ್ಲಿ ಬಲಿಷ್ಠ ತಂಡಗಳು ಇವೆ. ಪಾಕಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಶ್ರೀಲಂಕಾ ಇದೇ ಗುಂಪಿನಲ್ಲಿವೆ.

ಅ.4 ರಿಂದ ಭಾರತ ಪಂದ್ಯ ಆರಂಭ: Womens T-20 World Cup

ಬಾಂಗ್ಲಾದೇಶ, ಸ್ಕಾಟ್ಲೆಂಡ್, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಬಿ ಗುಂಪಿನಲ್ಲಿವೆ. ಭಾರತ ಅ.4 ರಿಂದ ಪಂದ್ಯ ಆರಂಭಿಸಲಿದೆ. ಹರ್ಮನ್‌ ಪ್ರೀತ್ ಪಡೆ ತನ್ನ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಕಾದಾಟ ನಡೆಸಲಿದೆ. ಅ. 6 ರಂದು ಭಾರತದ ಎರಡನೇ ಪಂದ್ಯ ಆಡಲಿದ್ದು, ಪಾಕಿಸ್ತಾನ ವಿರುದ್ಧ ಸೆಣಸಲಿದೆ. ಅ.9 ರಂದು ಶ್ರೀಲಂಕಾ, ಅ.13 ರಂದು ಆಸ್ಟ್ರೇಲಿಯಾ ವಿರುದ್ಧ ಪಂದ್ಯ ಆಡಲಿದೆ.

ವೆಸ್ಟ್‌ ಇಂಡೀಸ್ ಹಾಗೂ ಅಮೆರಿಕದಲ್ಲಿ ನಡೆದಿದ್ದ ಪುರುಷರ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದ ಭಾರತ ಪುರುಷರ ತಂಡದ ಪ್ರೇರಣೆ ಹರ್ಮನ್ ಪ್ರಿತ್‌ ಬಳಗಕ್ಕೆ ಸಿಗಲಿ ಎಂದು ಹಾರೈಸೋಣ.