ಕ್ರೀಡೆ

ಇಂದು ರಾಜಸ್ಥಾನ ರಾಯಲ್ಸ್​- ಮುಂಬೈ ಇಂಡಿಯನ್ಸ್ ಮುಖಾಮುಖಿ

ಅಬುಧಾಬಿ: ಪ್ಲೇ-ಆಫ್ ಹಂತಕ್ಕೇರಲು ಕೂದಲೆಳೆ ಅವಕಾಶ ಹೊಂದಿರುವ ರಾಜಸ್ಥಾನ ರಾಯಲ್ಸ್​ ಹಾಗೂ ಹಾಲಿ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡಗಳು ಎದುರಾಗಲಿವೆ. ಶೇಖ್​ ಜಯೇದ್​ ಸ್ಟೇಡಿಯಂನಲ್ಲಿ ನಡೆಯಲಿರುವ ಕದನ ರಾಯಲ್ಸ್​ ಪಾಲಿಗೆ ಮಹತ್ವ ಪಡೆದಿದೆ. ಹಿಂದಿನ ಪಂದ್ಯದಲ್ಲಿ ಸನ್​ರೈಸರ್ಸ್​ ಎದುರು 8 ವಿಕೆಟ್​ಗಳಿಂದ ಹೀನಾಯವಾಗಿ ಸೋಲು ಕಂಡಿರುವ ರಾಜಸ್ಥಾನ ತಂಡ ಪುಟಿದೇಳಬೇಕಿದೆ. ಮತ್ತೊಂದೆಡೆ, ಸಿಎಸ್​ಕೆ ತಂಡವನ್ನು 10 ವಿಕೆಟ್​ಗಳಿಂದ ಮಣಿಸಿ ಪ್ಲೇ-ಆಫ್​ ಹಂತವನ್ನು ಬಹುತೇಕ ಖಾತ್ರಿಪಡಿಸಿಕೊಂಡಿರುವ ಮುಂಬೈ ಸುಲಭ ಜಯದ ನಿರೀಕ್ಷೆಯಲ್ಲಿದೆ. ಮೊದಲ ಮುಖಾಮುಖಿಯಲ್ಲಿ ಮುಂಬೈ 57 ರನ್​ಗಳಿಂದ ಜಯ ದಾಖಲಿಸಿತ್ತು.

ಒತ್ತಡದಲ್ಲಿ ರಾಜಸ್ಥಾನ ರಾಯಲ್ಸ್​:

ಪ್ರಮುಖರ ವೈಫಲ್ಯವೇ ತಂಡಕ್ಕೆ ದೊಡ್ಡ ಹಿನ್ನಡೆಯಾಗಿದೆ. ನಾಯಕ ಸ್ಟೀವನ್​ ಸ್ಮಿತ್​ 11 ಪಂದ್ಯಗಳಿಂದ ಕೇವಲ 265 ರನ್​ಗಳಿಸಿದ್ದರೆ, ಬೆನ್​ಸ್ಟೋಕ್ಸ್​ (110ರನ್​), ಸಂಜು ಸ್ಯಾಮ್ಸನ್​ (272), ಜೋಸ್​ ಬಟ್ಲರ್​ (271) ದೊಡ್ಡ ಮೊತ್ತ ಸಿಡಿಸಲು ವಿಲರಾಗುತ್ತಿದ್ದಾರೆ. ಆರಂಭಿಕನಾಗಿ ಬಡ್ತಿ ನೀಡಿದರೂ ಕನ್ನಡಿಗ ರಾಬಿನ್​ ಉತ್ತಪ್ಪ ನಿರ್ವಹಣೆ ನೆಲಕಚ್ಚಿದೆ. ಆಲ್ರೌಂಡರ್​ ರಾಹುಲ್​ ತೆವಾಟಿಯಾ (224ರನ್​, 7 ವಿಕೆಟ್​) ತಕ್ಕಮಟ್ಟಿಗೆ ಯಶಕಾಣುತ್ತಿದ್ದಾರೆ. ಇನ್ನು ಬೌಲಿಂಗ್​ ವಿಭಾಗದಲ್ಲಿ ಜೋಫ್ರಾ ಆರ್ಚರ್​ (15 ವಿಕೆಟ್​) ಹೊರತುಪಡಿಸಿ ಉಳಿದ ಬೌಲರ್​ಗಳಿಂದ ತಂಡಕ್ಕೆ ಸಾಥ್​ ಸಿಗುತ್ತಿಲ್ಲ. ಯುವ ವೇಗಿ ಕಾರ್ತಿಕ್​ ತ್ಯಾಗಿ ಸಿಕ್ಕ ಅವಕಾಶ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಮುಂಬೈ ಎದುರು ಗೆದ್ದರಷ್ಟೇ ಪ್ಲೇ-ಆಫ್ ಹಂತಕ್ಕೇರುವ ಹೋರಾಟ ಜೀವಂತವಾಗಿರಲಿದೆ. ಒಂದು ವೇಳೆ ಸೋತರೆ ಟೂರ್ನಿಯಿಂದ 2ನೇ ತಂಡವಾಗಿ ಹೊರಬೀಳಲಿದೆ.

ಆತ್ಮವಿಶ್ವಾಸದಲ್ಲಿ ಮುಂಬೈ

ಮುಂಬೈ ಇಂಡಿಯನ್ಸ್​ ತಂಡಕ್ಕೆ ಮಧ್ಯಮ ಕ್ರಮಾಂಕವೇ ದೊಡ್ಡ ಶಕ್ತಿಯಾಗಿದೆ. ಸೂರ್ಯಕುಮಾರ್​ ಯಾದವ್​ (243ರನ್​), ಹಾರ್ದಿಕ್​ ಪಾಂಡ್ಯ (164), ಕೈರಾನ್​ ಪೊಲ್ಲಾರ್ಡ್​ (208) ಒಳಗೊಂಡ ಮಧ್ಯಮ ಕ್ರಮಾಂಕ ಅಗತ್ಯವಿದ್ದಲ್ಲಿ ತಂಡಕ್ಕೆ ಸಾಥ್​ ನೀಡುತ್ತಿದೆ. ಪಾಂಡ್ಯ ಸಹೋದರರು ಹಾಗೂ ಪೊಲ್ಲಾರ್ಡ್​ ಎದುರಾಳಿ ತಂಡಕ್ಕೆ ನಡುಕಹುಟ್ಟಿಸಬಲ್ಲರು. ಟ್ರೆಂಟ್​ ಬೌಲ್ಟ್​, ಜಸ್​ಪ್ರೀತ್​ ಬುಮ್ರಾ ಜೋಡಿಯೇ ಇದುವರೆಗೂ 33 ವಿಕೆಟ್​ ಹಂಚಿಕೊಂಡಿದೆ. ಸ್ಪಿನ್​ ವಿಭಾಗದಲ್ಲಿ ರಾಹುಲ್​ ಚಹರ್​ (13ವಿಕೆಟ್​) ಹಾಗೂ ಕೃನಾಲ್​ ಪಾಂಡ್ಯ (5 ವಿಕೆಟ್​) ಜೋಡಿ ತಕ್ಕಮಟ್ಟಿಗೆ ಯಶಕಂಡಿದೆ.

ಟೀಮ್​ ನ್ಯೂಸ್​

ರಾಜಸ್ಥಾನ ರಾಯಲ್ಸ್​

ಸತತ ವೈಫಲ್ಯ ಅನುಭವಿಸುತ್ತಿರುವ ರಾಬಿನ್​ ಉತ್ತಪ್ಪ ಬದಲಿಗೆ ಮನನ್​ ವೋಹ್ರಾ ಆಯ್ಕೆ ಪರಿಗಣಿಸಬಹುದು. ಕಾರ್ತಿಕ್​ ತ್ಯಾಗಿ ಬದಲಿಗೆ ವರುಣ್​ ಆರನ್​, ರಿಯಾನ್​ ಪರಾಗ್​ ಬದಲಿಗೆ ಮಹಿಪಾಲ್​ ಲೊಮ್ರೊರ್​ ತಂಡಕ್ಕೆ ವಾಪಸಾಗಬಹುದು.

ಸಂಭಾವ್ಯ ತಂಡ:ರಾಬಿನ್​ ಉತ್ತಪ್ಪ/ಮನನ್​ ವೋಹ್ರಾ, ಬೆನ್​ ಸ್ಟೋಕ್ಸ್​, ಸಂಜು ಸ್ಯಾಮ್ಸನ್​ (ವಿಕೀ), ಜೋಸ್​ ಬಟ್ಲರ್​, ಸ್ಟೀವನ್​ ಸ್ಮಿತ್​ (ನಾಯಕ), ರಿಯಾನ್​ ಪರಾಗ್​/ಮಹಿಪಾಲ್​, ರಾಹುಲ್​ ತೆವಾಟಿಯಾ, ಆರ್ಚರ್​, ಶ್ರೇಯಸ್​ ಗೋಪಾಲ್​, ಅಂಕಿತ್​ ರಜಪೂತ್​, ಕಾರ್ತಿಕ್​ ​ ತ್ಯಾಗಿ/ವರುಣ್​ ಆರನ್​

ಕಳೆದ ಪಂದ್ಯ: ಸನ್​ರೈಸರ್ಸ್​ ಎದುರು 8 ವಿಕೆಟ್​ ಸೋಲು

ಮುಂಬೈ ಇಂಡಿಯನ್ಸ್​

ಗಾಯದ ಸಮಸ್ಯೆಯಿಂದ ಸಿಎಸ್​ಕೆ ವಿರುದ್ಧ ಹೊರಗುಳಿದಿದ್ದ ರೋಹಿತ್​ ಶರ್ಮ ತಂಡಕ್ಕೆ ವಾಪಸಾಗಲಿದ್ದಾರೆ. ಅವರೇ ತಂಡ ಮುನ್ನಡೆಸಲಿದ್ದಾರೆ. ರೋಹಿತ್​ ಆಗಮನದಿಂದಾಗಿ ಸೌರವ್​ ತಿವಾರಿ ಹೊರಗುಳಿಯಲಿದ್ದಾರೆ. ಜೇಮ್ಸ್​ ಪ್ಯಾಟಿನ್​ಸನ್​, ಕೌಲ್ಟನ್​ ನಥಾನ್​ ನಿಲ್​ ಬದಲಿಗೆ ತಂಡಕ್ಕೆ ವಾಪಸಾಗಬಹುದು.

ಸಂಭಾವ್ಯ ತಂಡ: ಕ್ವಿಂಟನ್​ ಡಿ ಕಾಕ್​ (ವಿಕೀ), ರೋಹಿತ್​ ಶರ್ಮ (ನಾಯಕ), ಇಶಾನ್​ ಕಿಶನ್​, ಸೂರ್ಯಕುಮಾರ್​ ಯಾದವ್​, ಹಾರ್ದಿಕ್​ ​ ಪಾಂಡ್ಯ, ಕೈರಾನ್​ ಪೊಲ್ಲಾರ್ಡ್​, ಕೃನಾಲ್​ ಪಾಂಡ್ಯ, ನಥಾನ್​ ಕೌಲ್ಟರ್​ ನಿಲ್​/ಜೇಮ್ಸ್​ ಪ್ಯಾಟಿನ್​ಸನ್​, ರಾಹುಲ್​ ಚಹರ್​, ಟ್ರೆಂಟ್​ ಬೌಲ್ಟ್​, ಜಸ್​ಪ್ರೀತ್​ ಬುಮ್ರಾ

ಕಳೆದ ಪಂದ್ಯ: ಸಿಎಸ್​ಕೆ ಎದುರು 10 ವಿಕೆಟ್​ ಜಯ

ಪಂದ್ಯ ಆರಂಭ : ರಾತ್ರಿ: 7.30ಕ್ಕೆ

ನೇರ ಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​ ನೆಟ್​ವರ್ಕ್​

ಮುಖಾಮುಖಿ: 21, ರಾಜಸ್ಥಾನ: 10, ಮುಂಬೈ: 11.