ಪ್ಯಾರಿಸ್: ಭಾರತಕ್ಕೆ ಪ್ಯಾರಿಸ್ನಲ್ಲಿ ಯಶಸ್ವಿ ಕ್ರೀಡೆ ಎನಿಸಿದ ಶೂಟಿಂಗ್ ಸ್ಪರ್ಧೆ ಸೋಮವಾರ ಮುಕ್ತಾಯಗೊಳ್ಳಲಿದೆ. 12 ವರ್ಷಗಳ ಒಲಿಂಪಿಕ್ಸ್ ಶೂಟಿಂಗ್ನಲ್ಲಿ ಪದಕ ಬೇಟೆಯಾಡಿದ ಭಾರತ ಇದುವರೆಗೆ ಒಟ್ಟು 3 ಕಂಚಿನ ಪದಕ ಒಲಿಸಿಕೊಂಡಿದೆ. ಕೊನೇ ದಿನ ಪುರುಷರ 25 ಮೀ. ರ್ಯಾಪಿಡ್ ಫೈರ್ ಪಿಸ್ತೂಲ್ ಮತ್ತು ಮಿಶ್ರ ಸ್ಕೀಟ್ ಶೂಟಿಂಗ್ ವಿಭಾಗದ ಪದಕಗಳಿಗೆ ಹೋರಾಟ ನಡೆಯಲಿವೆ. ಭಾರತ ಮತ್ತೊಂದು ಪದಕ ಗೆಲುವಿನೊಂದಿಗೆ ಯಶಸ್ವಿ ಮುಕ್ತಾಯ ಕಾಣುವ ಹಂಬಲದಲ್ಲಿದೆ.
ವಿಜಯ್ವೀರ್ ಫೈನಲ್ಗೇರಲು ವಿಫಲ
ಪ್ಯಾರಿಸ್: ಭಾರತದ ಶೂಟರ್ಗಳಾದ ವಿಜಯವೀರ್ ಸಿಧು ಮತ್ತು ಅನೀಶ್ ಬಾನ್ವಾಲಾ ಪ್ಯಾರಿಸ್ ಒಲಿಂಪಿಕ್ಸ್ನ ಪುರುಷರ 25 ಮೀ. ರ್ಯಾಪಿಡ್ ಫೈರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಫೈನಲ್ಗೇರಲು ವಿಫಲರಾಗಿದ್ದಾರೆ. 2 ಸುತ್ತಿನ ಅರ್ಹತಾ ಸ್ಪರ್ಧೆಯ ಬಳಿಕ ವಿಜಯವೀರ್ 9 ಮತ್ತು ಅನೀಶ್ 13ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಅಗ್ರ 6 ಶೂಟರ್ಗಳಷ್ಟೇ ಫೈನಲ್ಗೇರಿದರು.
ಮೊದಲ ಸುತ್ತಿನ ಸ್ಪರ್ಧೆಯ ಬಳಿಕ 5ನೇ ಸ್ಥಾನದಲ್ಲಿದ್ದ ವಿಜಯವೀರ್ ಫೈನಲ್ಗೇರುವ ನಿರೀಕ್ಷೆ ಮೂಡಿಸಿದ್ದರು. ಆದರೆ ಅಂತಿಮವಾಗಿ 583 ಅಂಕದೊಂದಿಗೆ 9ನೇ ಸ್ಥಾನಕ್ಕೆ ಕುಸಿದರು. ಮೊದಲ ಸುತ್ತಿನ ಬಳಿಕ 9ನೇ ಸ್ಥಾನದಲ್ಲಿದ್ದ ಅನೀಶ್ ಬಳಿಕ 582 ಅಂಕದೊಂದಿಗೆ 13ನೇ ಸ್ಥಾನಕ್ಕೆ ಕುಸಿದರು.
ಮಹೇಶ್ವರಿ 14, ರೈಜಾ 23ನೇ ಸ್ಥಾನಕ್ಕೆ ತೃಪ್ತಿ: ಭಾರತದ ಶೂಟರ್ಗಳಾದ ಮಹೇಶ್ವರಿ ಚೌಹಾಣ್ ಮತ್ತು ರೈಜಾ ದಿಲ್ಲೋನ್ ಮಹಿಳೆಯರ ಸ್ಕೀಟ್ ಶೂಟಿಂಗ್ ಸ್ಪರ್ಧೆಯ ಅರ್ಹತಾ ಸುತ್ತಿನಲ್ಲಿ ಕ್ರಮವಾಗಿ 14 ಮತ್ತು 23ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಅಗ್ರ 6 ಶೂಟರ್ಗಳ ಫೈನಲ್ಗೇರಲು ಅವರಿಬ್ಬರು ವಿಫಲರಾದರು. ಮಹೇಶ್ವರಿ ಒಟ್ಟು 5 ಸುತ್ತಿನ ಅರ್ಹತಾ ಸ್ಪರ್ಧೆಯಲ್ಲಿ 118 ಅಂಕ (23, 24, 24, 25, 22) ಗಳಿಸಿದರೆ, ರೈಜಾ 113 ಅಂಕ (21, 22, 23, 23, 24) ಕಲೆಹಾಕಿದರು.