ಮೌಂಟ್ವೌಂಗನುಯಿ: ಏಕದಿನ ಕ್ರಿಕೆಟ್ನ ಕುರಿತಾಗಿ ತಾತ್ಸಾರದ ಧೋರಣೆಗೆ ಕಿವೀಸ್ ನೆಲದಲ್ಲಿ ಸರಣಿ ಸೋಲಿನ ಹಿನ್ನಡೆ ಕಂಡಿರುವ ಟೀಮ್ ಇಂಡಿಯಾ, ವೈಟ್ವಾಷ್ ತಪ್ಪಿಸಿಕೊಳ್ಳುವ ಏಕೈಕ ಉದ್ದೇಶದಲ್ಲಿ ಆತಿಥೇಯ ನ್ಯೂಜಿಲೆಂಡ್ ವಿರುದ್ಧದ 3ನೇ ಪಂದ್ಯದಲ್ಲಿ ಮಂಗಳವಾರ ಕಣಕ್ಕಿಳಿಯಲಿದೆ. ಏಕದಿನ ಸರಣಿಯಲ್ಲಿ ಒಂದಾದರೂ ಗೆಲುವಿನೊಂದಿಗೆ ಬಹುಮುಖ್ಯವಾದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ತಯಾರಿ ನಡೆಸುವ ಗುರಿಯೂ ಭಾರತ ತಂಡಕ್ಕಿದೆ.
ಬೇ ಓವಲ್ ಮೈದಾನದಲ್ಲಿ ಪಂದ್ಯ ನಡೆಯಲಿದ್ದು, ನ್ಯೂಜಿಲೆಂಡ್ ವಾತಾವರಣಕ್ಕಿಂತ ಹೆಚ್ಚಾಗಿ ತಂಡದ ಕಳಪೆ ನಿರ್ವಹಣೆಯೇ ಸೋಲಿನಲ್ಲಿ ಪ್ರಮುಖವಾಗಿ ಕಾಣುತ್ತಿದೆ. ಮೊದಲ ಏಕದಿನ ಪಂದ್ಯದಲ್ಲಿ 347 ರನ್ಗಳನ್ನು ರಕ್ಷಿಸಿಕೊಳ್ಳುವಲ್ಲಿ ಸೋತಿದ್ದ ಭಾರತ, 2ನೇ ಏಕದಿನ ಪಂದ್ಯದಲ್ಲಿ 274 ರನ್ ಬೆನ್ನಟ್ಟುವಲ್ಲಿ ಎಡವಿತ್ತು.
ಪ್ರಸ್ತುತ ಸರಣಿಯಲ್ಲೀಗ ಭಾರತ ಕಳೆದುಕೊಳ್ಳವಂಥದ್ದು ಏನೂ ಉಳಿದಿಲ್ಲ. ಹಾಗಾಗಿ ಇಡೀ ಕಿವೀಸ್ ಪ್ರವಾಸದಲ್ಲಿ ಬೆಂಚ್ ಕಾಯಿಸಿರುವ ಸ್ಪೆಷಲಿಸ್ಟ್ ವಿಕೆಟ್ ಕೀಪರ್ ರಿಷಭ್ ಪಂತ್ಗೆ ಅವಕಾಶ ನೀಡುವ ಸಾಧ್ಯತೆ ಇದೆ. ಇನ್ನೊಂದೆಡೆ ಟಿ20 ಸರಣಿಯಲ್ಲಿ ಉತ್ತಮ ನಿರ್ವಹಣೆ ತೋರಿದ್ದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಮನೀಷ್ ಪಾಂಡೆಗೂ ಅವಕಾಶ ಸಿಗುವ ನಿರೀಕ್ಷೆ ಇದೆ. ಕೇದಾರ್ ಜಾಧವ್ ಬದಲಿಗೆ ಮನೀಷ್ ಪಾಂಡೆ ಆಡುವ ಬಳಗದಲ್ಲಿ ಸ್ಥಾನ ಪಡೆಯಬಹುದು. ಅನೌಪಚಾರಿಕ ಪಂದ್ಯವನ್ನು ಮೀಸಲು ವಿಭಾಗದ ಸಾಮರ್ಥ್ಯ ಪರೀಕ್ಷೆಗೆ ಬಳಸಿಕೊಳ್ಳುವ ಸೂಚನೆಯನ್ನು ವಿರಾಟ್ ಕೊಹ್ಲಿ ನೀಡಿರುವ ಕಾರಣ, ರಿಷಭ್ ಪಂತ್ ಹಾಗೂ ಮನೀಷ್ ಪಾಂಡೆಯೊಂದಿಗೆ ವೇಗದ ಬೌಲಿಂಗ್ ಆಲ್ರೌಂಡರ್ ಶಿವಂ ದುಬೆ ಕೂಡ ಆಡುವ ಬಳಗದಲ್ಲಿ ಸ್ಥಾನ ಪಡೆಯಬಹುದು.
ಆತಿಥೇಯ ನ್ಯೂಜಿಲೆಂಡ್ ತಂಡ ನಾಯಕ ಕೇನ್ ವಿಲಿಯಮ್ಸನ್, ಟ್ರೆಂಟ್ ಬೌಲ್ಟ್, ಲಾಕಿ ಫರ್ಗ್ಯುಸನ್ ಹಾಗೂ ಮ್ಯಾಟ್ ಹೆನ್ರಿಯಂಥ ಪ್ರಮುಖ ಆಟಗಾರರನ್ನು ಏಕದಿನ ಸರಣಿಗೂ ಮುನ್ನ, ಸ್ಕಾಟ್ ಕಗಿಲಿನ್ ಹಾಗೂ ಮಿಚೆಲ್ ಸ್ಯಾಂಟ್ನರ್ರಂಥ ಆಟಗಾರರನ್ನು 2ನೇ ಏಕದಿನ ಪಂದ್ಯದ ವೇಳೆ ಕಳೆದುಕೊಂಡಿದ್ದರೂ ತಂಡದ ನಿರ್ವಹಣೆಯ ಮೇಲೆ ಇದು ಪರಿಣಾಮ ಬೀರಲಿಲ್ಲ. ಆಕ್ಲೆಂಡ್ ಏಕದಿನ ಪಂದ್ಯದ ವೇಳೆ ಟಿಮ್ ಸೌಥಿ ಗಾಯಾಳುವಾಗಿ ಹೊರನಡೆದಾಗ ಬದಲಿ ಫೀಲ್ಡರ್ ಕಿವೀಸ್ ತಂಡದಲ್ಲಿ ಲಭ್ಯವಿರಲಿಲ್ಲ. ಸಹಾಯಕ ಕೋಚ್ ಲ್ಯೂಕ್ ರಾಂಚಿ ಫೀಲ್ಡಿಂಗ್ ಮಾಡಿದ್ದರು. ಈ ಎಲ್ಲ ಹಿನ್ನಡೆಗಳ ನಡುವೆಯೂ ಕಿವೀಸ್ ಸರಣಿ ಗೆಲ್ಲುವಲ್ಲಿ ಯಶಸ್ಸು ಕಂಡಿದೆ.
ಹಾಗಂತ ಕಿವೀಸ್ ತಂಡದಲ್ಲಿ ಸಮಸ್ಯೆ ಇಲ್ಲವೆಂದಲ್ಲ. ರಾಸ್ ಟೇಲರ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಆಟವಾಡಿದ ಕಾರಣಕ್ಕೆ ಇಲ್ಲಿನ ಲೋಪದೋಷಗಳು ಎದ್ದು ಕಂಡಿಲ್ಲ. ತವರು ಮೈದಾನದಲ್ಲಿ ಕೇನ್ ವಿಲಿಯಮ್ಸನ್ ಕಣಕ್ಕಿಳಿಯಲು ಸಿದ್ಧರಾಗಿರುವುದು ಮಧ್ಯಮ ಕ್ರಮಾಂಕದಲ್ಲಿನ ಲೋಪದೋಷಗಳಿಗೆ ಕೆಲ ಪರಿಹಾರ ಸಿಗಬಹುದು. ಸ್ಯಾಂಟ್ನರ್ ಹಾಗೂ ಸ್ಕಾಟ್ ಕಗಿಲಿನ್ ಕೂಡ ತಂಡ ಸೇರಿಕೊಂಡಿದ್ದಾರೆ. ಎ ತಂಡದ ಸೇವೆಗಾಗಿ ತೆರಳಿದ್ದ ಸ್ಪಿನ್ನರ್ ಇಶ್ ಸೋಧಿ, ಮೌಂಟ್ ಮೌಂಗನುಯಿಗೆ ಬಂದಿದ್ದು, 3ನೇ ಏಕದಿನಕ್ಕೆ ಲಭ್ಯವಿದ್ದಾರೆ ಎಂದು ಕಿವೀಸ್ ಬೌಲಿಂಗ್ ಕೋಚ್ ಶೇನ್ ಜರ್ಗೆನ್ಸನ್ ತಿಳಿಸಿದ್ದಾರೆ.
ಭಾರತ: ಟೆಸ್ಟ್ ಸರಣಿಯ ಕಾರಣಕ್ಕಾಗಿ ಈಡನ್ ಪಾರ್ಕ್ ಏಕದಿನ ಪಂದ್ಯದಿಂದ ಅನುಭವಿ ವೇಗಿ ಮೊಹಮದ್ ಶಮಿಗೆ ವಿಶ್ರಾಂತಿ ನೀಡಲಾಗಿತ್ತು. ಕೊನೇ ಏಕದಿನ ಪಂದ್ಯದಲ್ಲಿ ಮತ್ತೊಬ್ಬ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಿ ಶಮಿಯನ್ನು ತಂಡಕ್ಕೆ ವಾಪಸ್ ಕರೆಸಿಕೊಳ್ಳುವ ಸಾಧ್ಯತೆ ಇದೆ. ಉಳಿದಂತೆ ತಂಡದ ಪ್ರಮುಖ ಮೀಸಲು ಬಳಗದ ಆಟಗಾರರು ಇಲ್ಲಿ ಆಡುವ ಅವಕಾಶ ಪಡೆದುಕೊಳ್ಳುವ ನಿರೀಕ್ಷೆ ಇಡಬಹುದು.
ನ್ಯೂಜಿಲೆಂಡ್: ತಂಡದ ಪ್ರಮುಖ ಆಟಗಾರರು ಗಾಯ ಹಾಗೂ ಅನಾರೋಗ್ಯದ ಸಮಸ್ಯೆಗೆ ತುತ್ತಾಗಿರುವ ಕಾರಣ, ಕಿವೀಸ್ ತಂಡ 3ನೇ ಪಂದ್ಯಕ್ಕೆ ಇನ್ನಷ್ಟು ಆಟಗಾರರನ್ನು ಸೇರಿಸಿಕೊಂಡಿದೆ. ಸ್ಪಿನ್ನರ್ ಇಶ್ ಸೋಧಿ ಹಾಗೂ ಬ್ಲೇರ್ ಟಿಕ್ನೆರ್ ತಂಡವನ್ನು ಸೇರಿಕೊಂಡಿದ್ದಾರೆ.
ಏಕದಿನ ಕ್ರಿಕೆಟ್ನಲ್ಲಿ ಭಾರತ ತಂಡ ಮೂರು ಹಾಗೂ ಅದಕ್ಕಿಂತ ಹೆಚ್ಚಿನ ಪಂದ್ಯಗಳ ಸರಣಿಯಲ್ಲಿ ವೈಟ್ವಾಷ್ ಅವಮಾನಕ್ಕೆ ಕೊನೇ ಬಾರಿಗೆ ತುತ್ತಾಗಿದ್ದು 31 ವರ್ಷಗಳ ಹಿಂದೆ. 1989ರಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ಪ್ರವಾಸ ಮಾಡಿದ್ದ ವೇಳೆ, ಐದು ಪಂದ್ಯಗಳ ಏಕದಿನ ಸರಣಿಯನ್ನು 0-5ರಲ್ಲಿ ಸೋಲು ಕಂಡಿತ್ತು. 2006-07ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ತಂಡ ಐದು ಪಂದ್ಯಗಳ ಏಕದಿನ ಸರಣಿಯನ್ನು 0-4ರಿಂದ ಸೋತಿತ್ತು. ಒಂದು ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.
01: ವಿರಾಟ್ ಕೊಹ್ಲಿ ಇನ್ನೊಂದು ಅರ್ಧಶತಕ ಬಾರಿಸಿದರೆ, ನ್ಯೂಜಿಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಗರಿಷ್ಠ ಬಾರಿಗೆ 50 ಪ್ಲಸ್ ರನ್ ಬಾರಿಸಿದ ಆಟಗಾರ ಎನಿಸಿಕೊಳ್ಳಲಿದ್ದಾರೆ. ಪ್ರಸ್ತುತ ಕೊಹ್ಲಿ 25 ಪಂದ್ಯಗಳಿಂದ 13 ಬಾರಿ (5 ಶತಕ, 8 ಅರ್ಧಶತಕ) 50 ಹಾಗೂ ಅದಕ್ಕಿಂತ ಹೆಚ್ಚಿನ ರನ್ ಬಾರಿಸಿದ ಸಾಧನೆ ಮಾಡುವ ಮೂಲಕ ಸಚಿನ್ ತೆಂಡುಲ್ಕರ್ ಜತೆ ಅಗ್ರಸ್ಥಾನ ಸಂಪಾದಿಸಿದ್ದಾರೆ. ಸಚಿನ್ ತೆಂಡುಲ್ಕರ್ 42 ಪಂದ್ಯಗಳಿಂದ 13 ಬಾರಿ (5 ಶತಕ, 8 ಅರ್ಧಶತಕ)ಈ ಸಾಧನೆ ಮಾಡಿದ್ದಾರೆ.
ಟಿ20 ಸರಣಿ ನಾವು ಎಣಿಸಿದಂತೆ ಸಾಗಲಿಲ್ಲ. ಆದರೆ, ಎಲ್ಲ ಪಂದ್ಯಗಳಲ್ಲಿ ಪೈಪೋಟಿ ನೀಡಿದ್ದೆವು. ಏಕದಿನ ಮಾದರಿಯಲ್ಲಿ ಬಹಳ ಉತ್ತಮ ನಿರ್ವಹಣೆ ತೋರಿದೆವು. ಕೆಲವು ಪ್ರಮುಖ ಆಟಗಾರರು ಇರದ ಹೊರತಾಗಿಯೂ ಸರಣಿ ಜಯಿಸಿದ್ದೇವೆ. ಪ್ರಸ್ತುತ ನಮ್ಮ ಏಕದಿನ ತಂಡ ಉತ್ತಮ ಹಾದಿಯಲ್ಲಿದೆ. | ಟಿಮ್ ಸೌಥಿ, ನ್ಯೂಜಿಲೆಂಡ್ ವೇಗಿ ಪ್ರತಿ ಪಂದ್ಯವೂ ಪ್ರಮುಖ. ಸರಣಿಯಲ್ಲಿ ನಾವು 0-2ರ ಹಿನ್ನಡೆಯಲ್ಲಿರುವ ಕಾರಣಕ್ಕೆ ಈ ಪಂದ್ಯ ಮುಖ್ಯವಲ್ಲ ಎಂದರ್ಥವಲ್ಲ. ಪ್ರತಿ ಪಂದ್ಯದಲ್ಲಿ ಏನಾದರೂ ಒಂದು ಸಾಧಿಸಲು ಇರುತ್ತದೆ. ಕೊನೇ ಪಂದ್ಯದಲ್ಲಿ ನಿರಾಳವಾಗಿ ಆಟವಾಡುತ್ತೇವೆ. | ಶಾರ್ದೂಲ್ ಠಾಕೂರ್, ಟೀಮ್ ಇಂಡಿಯಾ ವೇಗಿ
2019ರಲ್ಲಿ ಈ ಎರಡೂ ತಂಡಗಳು ಬೇ ಓವಲ್ನಲ್ಲಿ ಮುಖಾಮುಖಿಯಾಗಿದ್ದಾಗ ಪಿಚ್ ಬಹಳ ನಿಧಾನಗತಿಯಲ್ಲಿ ವರ್ತಿಸಿತ್ತು. ಕಳೆದ ವಾರ ಇದೇ ಮೈದಾನದಲ್ಲಿ ನಡೆದ ಟಿ20 ಅಂತಾರಾಷ್ಟ್ರೀಯ ಪಂದ್ಯದಲ್ಲೂ ದೊಡ್ಡ ಮೊತ್ತ ದಾಖಲಾಗಿರಲಿಲ್ಲ ಹಾಗೂ ಬೌಲರ್ಗಳಿಗೆ ನೆರವು ನೀಡಿತ್ತು. ಈ ಬಾರಿಯೂ ಇದೇ ಪರಿಸ್ಥಿತಿಯನ್ನು ಅಂದಾಜಿಸಬಹುದಾಗಿದೆ. ಪಂದ್ಯಕ್ಕೆ ಮಳೆ ಅಡ್ಡಿ ಇಲ್ಲ.