ಚೆನ್ನೈ: ಮೊದಲ ಪಂದ್ಯದಲ್ಲಿ ಸರ್ವಾಂಗೀಣ ನಿರ್ವಹಣೆ ತೋರಿ ಸುಲಭ ಗೆಲುವು ದಾಖಲಿಸಿರುವ ಟಿ20 ವಿಶ್ವ ಚಾಂಪಿಯನ್ ಭಾರತ ತಂಡ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಚುಟುಕು ಕ್ರಿಕೆಟ್ ಸರಣಿಯ 2ನೇ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ. ಚೆಪಾಕ್ನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶನಿವಾರ ನಡೆಯಲಿರುವ ಪಂದ್ಯದಲ್ಲಿ ಮತ್ತೆ ಆಂಗ್ಲರ ಮೇಲೆ ಸ್ಪಿನ್ ಅಸ್ತ್ರ ಪ್ರಯೋಗಿಸಿ ಮುನ್ನಡೆ ವಿಸ್ತರಿಸಿಕೊಳ್ಳುವುದು ಸೂರ್ಯಕುಮಾರ್ ಬಳಗದ ಗುರಿಯಾಗಿದೆ.
ಗೌತಮ್ ಗಂಭೀರ್ ಕೋಚ್ ಆದ ಬಳಿಕ ಭಾರತ ಟೆಸ್ಟ್, ಏಕದಿನದಲ್ಲಿ ತೃಪ್ತಿದಾಯಕ ನಿರ್ವಹಣೆ ತೋರಿಲ್ಲ. ಆದರೆ ಟಿ20 ಕ್ರಿಕೆಟ್ನಲ್ಲಿ ಅವರು ಅಜೇಯ ದಾಖಲೆ ಹೊಂದಿದ್ದಾರೆ. ಸೂರ್ಯಕುಮಾರ್-ಗಂಭೀರ್ ಅವರ ಕ್ಯಾಪ್ಟನ್-ಕೋಚ್ ಕಾಂಬಿನೇಷನ್ನಲ್ಲಿ ಇದುವರೆಗೆ ಆಡಿರುವ 7 ಟಿ20 ಪಂದ್ಯಗಳಲ್ಲೂ ಭಾರತ ಗೆಲುವು ಸಾಧಿಸಿದೆ ಎಂಬುದು ಗಮನಾರ್ಹ. ಕಳೆದ ವರ್ಷದ ಟಿ20 ವಿಶ್ವಕಪ್ ಗೆಲುವಿನ ಬಳಿಕ ಭಾರತದ ಚುಟುಕು ಕ್ರಿಕೆಟ್ ತಂಡ ಯುವ ಆಟಗಾರರಿಂದ ತುಂಬಿರುವ ನಡುವೆಯೂ ಭರ್ಜರಿ ಯಶಸ್ಸು ಮುಂದುವರಿಸಿದೆ.
ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್ಗೆ ಟಿ20 ಸರಣಿಯಿಂದ ವಿಶ್ರಾಂತಿ ನೀಡಿದ ಕಾರಣ ಕೊನೇಕ್ಷಣದಲ್ಲಿ ಭಾರತ ತಂಡದಲ್ಲಿ ಸ್ಥಾನ ಸಂಪಾದಿಸಿದ್ದ ಅಭಿಷೇಕ್ ಶರ್ಮ ಮೊದಲ ಪಂದ್ಯದಲ್ಲಿ ಸ್ಫೋಟಕ ಆಟವಾಡಿ ತನ್ನ ಆಯ್ಕೆಗೆ ಸಮರ್ಥನೆ ಒದಗಿಸಿದರು. ಸಾಧಾರಣ ಸವಾಲನ್ನು ಭಾರತ ಸರಾಗವಾಗಿ ಬೆನ್ನಟ್ಟಿದ್ದರಿಂದ, ಆಲ್ರೌಂಡರ್ಗಳಿಂದ ತುಂಬಿರುವ ಭಾರತದ ಮಧ್ಯಮ ಕ್ರಮಾಂಕಕ್ಕೆ ಸರಣಿಯಲ್ಲಿ ನಿಜವಾದ ಸತ್ವಪರೀಕ್ಷೆ ಇನ್ನಷ್ಟೇ ಎದುರಾಗಬೇಕಿದೆ. ಮುಂದಿನ ವರ್ಷ ತವರಿನಲ್ಲೇ ನಡೆಯಲಿರುವ ಟಿ20 ವಿಶ್ವಕಪ್ಗೆ ಮೊದಲ ಆಯ್ಕೆಯ ವಿಕೆಟ್ ಕೀಪರ್ ಮತ್ತು ಆರಂಭಿಕನಾಗಿ ತನ್ನ ಸ್ಥಾನ ಭದ್ರಪಡಿಸುವ ನಿಟ್ಟಿನಲ್ಲಿ ಸಂಜು ಸ್ಯಾಮ್ಸನ್ಗೆ ಈ ಸರಣಿ ಉತ್ತಮ ವೇದಿಕೆ ಎನಿಸಿದೆ.
ಆಂಗ್ಲರಿಗೆ ಮತ್ತೆ ಸ್ಪಿನ್ ಭೀತಿ
ಮೊದಲ ಪಂದ್ಯದಲ್ಲಿ ಭಾರತದ ತ್ರಿವಳಿ ಸ್ಪಿನ್ನರ್ಗಳ ಎದುರು ಇಂಗ್ಲೆಂಡ್ ಬ್ಯಾಟರ್ಗಳು ಪರದಾಡಿದ್ದರು. ಭಾರತದ ಗುಣಮಟ್ಟದ ಸ್ಪಿನ್ನರ್ಗಳ ಎದುರು ತಂಡದ ಹೆಚ್ಚಿನ ಬ್ಯಾಟರ್ಗಳು ಇದೇ ಮೊದಲ ಬಾರಿಗೆ ಆಡಿದ್ದರಿಂದ ಹೀಗಾಯಿತು ಎಂದು ನಾಯಕ ಜೋಸ್ ಬಟ್ಲರ್ ಪಂದ್ಯದ ಬಳಿಕ ತಿಳಿಸಿದ್ದರು. ಹೀಗಾಗಿ ಚೆಪಾಕ್ ಪಿಚ್ನಲ್ಲಿ ಇಂಗ್ಲೆಂಡ್ ಬ್ಯಾಟರ್ಗಳಿಗೆ ಇನ್ನಷ್ಟು ಹೆಚ್ಚಿನ ಸವಾಲು ಎದುರಾಗಲಿದೆ. ಗಂಭೀರ್ ಮಾರ್ಗದರ್ಶನದ ಭಾರತ ಟಿ20 ತಂಡದಲ್ಲಿ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಪ್ರಮುಖ ಸ್ಪಿನ್ ಅಸ್ತ್ರವೆನಿಸಿದ್ದಾರೆ. ಉಪನಾಯಕ ಅಕ್ಷರ್ ಪಟೇಲ್ ಮತ್ತು ರವಿ ಬಿಷ್ಣೋಯಿ ಮೊದಲ ಪಂದ್ಯದಲ್ಲಿ ಉತ್ತಮ ಸಾಥ್ ಕೂಡ ನೀಡಿದ್ದರು. ಅತ್ತ ಇಂಗ್ಲೆಂಡ್ ತಂಡ ತನ್ನ ಸ್ಪಿನ್ನರ್ಗಳಾದ ಆದಿಲ್ ರಶೀದ್ ಮತ್ತು ಲಿವಿಂಗ್ಸ್ಟೋನ್ ಅವರಿಂದ ಸುಧಾರಿತ ನಿರ್ವಹಣೆ ಬಯಸಿದೆ.
*ಆರಂಭ: ರಾತ್ರಿ 7.00
*ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್ಸ್ಟಾರ್
*2: ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ತಂಡ ಇದುವರೆಗೆ 2 ಟಿ20 ಪಂದ್ಯಗಳನ್ನು ಆಡಿದೆ. ಈ ಪೈಕಿ 2012ರಲ್ಲಿ ನ್ಯೂಜಿಲೆಂಡ್ ಎದುರು ಗೆದ್ದು, 2018ರಲ್ಲಿ ವೆಸ್ಟ್ ಇಂಡೀಸ್ ಎದುರು ಸೋತಿದೆ.
*3: ಅರ್ಷದೀಪ್ ಸಿಂಗ್ (97) ಇನ್ನು 3 ವಿಕೆಟ್ ಕಬಳಿಸಿದರೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ವಿಕೆಟ್ ಕಬಳಿಸಿದ ಮೊದಲ ಭಾರತೀಯ ಎನಿಸಲಿದ್ದಾರೆ.
ಟೀಮ್ ನ್ಯೂಸ್:
ಭಾರತ: ಚೆಪಾಕ್ ಪಿಚ್ ಈಡನ್ಗಿಂತಲೂ ಹೆಚ್ಚಾಗಿ ಸ್ಪಿನ್ಗೆ ನೆರವು ನೀಡುವ ನಿರೀಕ್ಷೆ ಇರುವುದರಿಂದ ಭಾರತ ಮೂವರು ಸ್ಪಿನ್ನರ್ಗಳ ಕಾರ್ಯತಂತ್ರವನ್ನೇ ಮುಂದುವರಿಸುವ ನಿರೀಕ್ಷೆ ಇದೆ. ಹೀಗಾಗಿ ವೇಗಿ ಮೊಹಮದ್ ಶಮಿ ಗುರುವಾರ ನೆಟ್ಸ್ನಲ್ಲಿ ಬೌಲಿಂಗ್ ಅಭ್ಯಾಸ ನಡೆಸಿದ್ದರೂ, 2ನೇ ಪಂದ್ಯದಲ್ಲೂ ಕಣಕ್ಕಿಳಿಯುವ ಬಗ್ಗೆ ಅನುಮಾನವಿದೆ. ಈ ಬಾರಿ ನಿತೀಶ್ ಕುಮಾರ್ ರೆಡ್ಡಿ ಅಥವಾ ರವಿ ಬಿಷ್ಣೋಯಿ ಬದಲಿಗೆ ಶಮಿ ಕಣಕ್ಕಿಳಿದರೂ ಅಚ್ಚರಿ ಇಲ್ಲ. ಅಭ್ಯಾಸದ ವೇಳೆ ಕಾಲು ಟ್ವಿಸ್ಟ್ ಆಗಿರುವುದರಿಂದ ಆರಂಭಿಕ ಅಭಿಷೇಕ್ ಶರ್ಮ ಪಂದ್ಯಕ್ಕೆ ಫಿಟ್ ಆಗುವುದು ಅನುಮಾನವೆನಿಸಿದೆ.
ಇಂಗ್ಲೆಂಡ್: ಮೊದಲ ಪಂದ್ಯದ ಸೋಲಿನ ಬಳಿಕ ಇಂಗ್ಲೆಂಡ್ ಆಡುವ 11ರ ಬಳಗದಲ್ಲಿ ಬದಲಾವಣೆ ಖಚಿತವೆನಿಸಿದೆ. ಪಂದ್ಯಕ್ಕೆ ಮುನ್ನಾದಿನವೇ 12ರ ಬಳಗವನ್ನು ಪ್ರಕಟಿಸಿರುವ ಇಂಗ್ಲೆಂಡ್, ವೇಗಿ ಗಸ್ ಅಟ್ಕಿನ್ಸನ್ ಬದಲಿಗೆ ಬೆಡನ್ ಕರ್ಸ್ರನ್ನು ಸೇರಿಸಿಕೊಂಡಿದೆ. ಯುವ ಬ್ಯಾಟರ್ ಜೇಮಿ ಸ್ಮಿತ್ 12ರ ಬಳಗಕ್ಕೆ ಮತ್ತೋರ್ವ ಹೊಸ ಸೇರ್ಪಡೆಯಾಗಿದ್ದಾರೆ. ಜೇಕಬ್ ಬೆಥೆಲ್ ಅನಾರೋಗ್ಯದಿಂದ ಬಳಲುತ್ತಿದ್ದು, ಅವರು ಫಿಟ್ ಆಗದಿದ್ದರೆ ಸ್ಮಿತ್ ಕಣಕ್ಕಿಳಿಯಬಹುದು. ಚೆಪಾಕ್ ಪಿಚ್ ಗಮನಿಸಿದಾಗ ಇಂಗ್ಲೆಂಡ್ ಹೆಚ್ಚುವರಿ ಸ್ಪಿನ್ನರ್ ಆಗಿ ರೆಹನ್ ಅಹ್ಮದ್ ಸೇರ್ಪಡೆಗೆ ಒಲವು ತೋರಿದರೂ ಅಚ್ಚರಿ ಇಲ್ಲ.