ಬೆಂಗಳೂರು: ಎಂಎಸ್ಡಿ ಎಂದರೆ ಕ್ರಿಕೆಟ್ ಪ್ರೇಮಿಗಳಿಗೆ ನೆನಪಾಗುವುದು ಮಹೇಂದ್ರ ಸಿಂಗ್ ಧೋನಿ ಅಥವಾ ಎಂಎಸ್ ಧೋನಿ ಎಂದು. ಆದರೆ ತಮಿಳುನಾಡು ಪೊಲೀಸರು ಈಗ ಧೋನಿ ಅವರನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಇದಕ್ಕೀಗ ಹೊಸ ಅರ್ಥ ಕಲ್ಪಿಸಿದ್ದಾರೆ. ಅದುವೇ 'ಮೆಂಟೇನ್ ಸೋಷಿಯಲ್ ಡಿಸ್ಟೆನ್ಸ್' ಎಂದು. ಕರೊನಾ ಹಾವಳಿಯ ಸಮಯದಲ್ಲಿ ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಧೋನಿ ಹೆಸರಿನಲ್ಲಿ ಹೊಸ ರೀತಿಯ ಜಾಗೃತಿ ಮೂಡಿಸುತ್ತಿದ್ದಾರೆ.
ತಮಿಳುನಾಡಿನ ತಿರುಪ್ಪುರ ನಗರ ಪೊಲೀಸ್ ಇಲಾಖೆಯ ಟ್ವಿಟರ್ ಖಾತೆಯಿಂದ ಎಂಎಸ್ಡಿಗೆ ಈ ಹೊಸ ವ್ಯಾಖ್ಯಾನವನ್ನು ನೀಡುವ ಮೂಲಕ ಸಾಮಾಜಿಕ ಅಂತರದ ಜಾಗೃತಿ ಸಂದೇಶ ನೀಡಲಾಗಿದೆ. ಇದರೊಂದಿಗೆ ಎಂಎಸ್ ಧೋನಿ ಅವರ ಮಾಸ್ಕ್ ಧರಿಸಿರುವ ಮತ್ತು ಮಾಸ್ಕ್ ಧರಿಸಿದ ಸಹ-ಆಟಗಾರ ಜಸ್ಪ್ರೀತ್ ಬುಮ್ರಾ ಅವರಿಂದ ಸಾಮಾಜಿಕ ಅಂತರ ಕಾಯ್ದುಕೊಂಡಿರುವ ಎಡಿಟೆಡ್ ಚಿತ್ರವನ್ನೂ ಪ್ರಕಟಿಸಲಾಗಿದೆ.
ಧೋನಿ ಅವರ ಇನಿಶಿಯಲ್ಸ್ ಅನ್ನೇ ಉಪಯೋಗಿಸಿ ಜನರಲ್ಲಿ ಸಾಮಾಜಿಕ ಅಂತರದ ಜಾಗೃತಿ ಮೂಡಿಸುತ್ತಿರುವ ಪೊಲೀಸರ ಈ ಹೊಸ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಜನರಿಂದ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ.
ಇದನ್ನೂ ಓದಿ: ಬೆನ್ ಸ್ಟೋಕ್ಸ್ ಈಗ ವಿಶ್ವ ನಂ. 1 ಆಲ್ರೌಂಡರ್
ಈ ಮುನ್ನ ಮುಂಬೈ ಪೊಲೀಸರು ಕೂಡ ಜುಲೈ 7ರಂದು ಧೋನಿ ಜನ್ಮದಿನದ ಹಿನ್ನೆಲೆಯಲ್ಲಿ ಕರೊನಾ ಹಾವಳಿ ಮತ್ತು ಸಾಮಾಜಿಕ ಅಂತರದ ಜಾಗೃತಿ ಮೂಡಿಸಲು ಎಂಎಸ್ಡಿ ಮಂತ್ರವನ್ನೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅವರು ಕೂಡ ಎಂಎಸ್ಡಿ ಎಂದರೆ ಮೆಂಟೇನ್ ಸೋಷಿಯಲ್ ಡಿಸ್ಟೆನ್ಸ್ ಎಂದು ಹೇಳಿದ್ದರು. ಜತೆಗೆ ಕೂಲ್ ಕ್ಯಾಪ್ಟನ್ಗೆ ಭಿನ್ನ ರೀತಿಯಲ್ಲಿ ಜನ್ಮದಿನದ ಶುಭಾಶಯ ತಿಳಿಸಿದ್ದರು. ಧೋನಿ ರೀತಿಯಲ್ಲೇ ನಾಟೌಟ್ ಆಗಿರಿ ಮತ್ತು ಕೂಲ್ ಆಗಿರಿ ಎಂದು ಸಂದೇಶ ನೀಡಿದ್ದರು.