ಕ್ರೀಡೆ

37 ಎಸೆತಗಳಲ್ಲೇ ಶತಕ ಸಿಡಿಸಿದ ಆರ್​ಸಿಬಿ ಬ್ಯಾಟರ್​: ವಿಂಡೀಸ್​ ಎದುರು ಟಿ20 ಸರಣಿ ಗೆದ್ದ ಆಸ್ಟ್ರೆಲಿಯಾ

ಬಾಸ್ಸೆಟೆರ್​ (ಸೇಂಟ್​ ಕಿಟ್ಸ್​): ಟಿಮ್​ ಡೇವಿಡ್​ (102*ರನ್​, 37 ಎಸೆತ, 6 ಬೌಂಡರಿ, 11 ಸಿಕ್ಸರ್​) ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಆಸ್ಟ್ರೆಲಿಯಾದ ಅತಿವೇಗದ ಶತಕ ಸಾಧಕರೆನಿಸಿದ್ದಾರೆ. ಈ ಮೂಲಕ ಮಿಚೆಲ್​ ಮಾರ್ಷ್​ ಬಳಗ ಆತಿಥೇಯ ವೆಸ್ಟ್​ ಇಂಡೀಸ್​ ವಿರುದ್ಧದ 3ನೇ ಟಿ20 ಕಾದಾಟದಲ್ಲಿ 6 ವಿಕೆಟ್​ಗಳಿಂದ ಗೆದ್ದು ಬೀಗಿದ್ದು, ಇನ್ನೆರಡು ಪಂದ್ಯಗಳು ಬಾಕಿ ಇರುವಂತೆಯೇ 5 ಪಂದ್ಯಗಳ ಸರಣಿಯನ್ನು 3&0ಯಿಂದ ವಶಪಡಿಸಿಕೊಂಡಿದೆ.

ವಾರ್ನರ್​ ಪಾರ್ಕ್​ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ವಿಂಡೀಸ್​, ಆರಂಭಿಕರಾದ ಶೈ ಹೋಪ್​ (102) ಮತ್ತು ಬ್ರೆಂಡನ್​ ಕಿಂಗ್​ (62) ಮೊದಲ ವಿಕೆಟ್​ಗೆ 125 ರನ್​ ಸೇರಿಸಿ ಹಾಕಿಕೊಟ್ಟ ಭದ್ರ ಬುನಾದಿಯಿಂದ 4 ವಿಕೆಟ್​ಗೆ 214 ರನ್​ ಕಲೆಹಾಕಿತು. ಪ್ರತಿಯಾಗಿ ಆಸೀಸ್​, ಆರಂಭಿಕ ಆಘಾತದ ನಡುವೆಯೂ ಟಿಮ್​ ಡೇವಿಡ್​ ಆರ್ಭಟದಿಂದ 16.1 ಓವರ್​ಗಳಲ್ಲೇ 4 ವಿಕೆಟ್​ಗೆ 215 ರನ್​ ಗಳಿಸಿ ಜಯ ಸಾಧಿಸಿತು.

ವೆಸ್ಟ್​ ಇಂಡೀಸ್​: 4 ವಿಕೆಟ್​ಗೆ 214 (ಬ್ರೆಂಡನ್​ ಕಿಂಗ್​ 62, ಶೈ ಹೋಪ್​ 102, ಹೆಟ್ಮೆಯರ್​ 9, ಎಲ್ಲಿಸ್​ 37ಕ್ಕೆ 1), ಆಸ್ಟ್ರೆಲಿಯಾ: 16.1 ಓವರ್​ಗಳಲ್ಲಿ 4 ವಿಕೆಟ್​ಗೆ 215 (ಮಾರ್ಷ್​ 22, ಮ್ಯಾಕ್ಸ್​ವೆಲ್​ 20, ಇಂಗ್ಲಿಸ್​ 15, ಗ್ರೀನ್​ 11, ಡೇವಿಡ್​ 102*, ಓವನ್​ 36*, ಶೆರ್ಡ್​ 39ಕ್ಕೆ 2). ಪಂದ್ಯಶ್ರೇಷ್ಠ: ಟಿಮ್​ ಡೇವಿಡ್​.

37: ಟಿಮ್​ ಡೇವಿಡ್​ ಟಿ20ಯಲ್ಲಿ ಆಸೀಸ್​ನ ಅತಿವೇಗದ ಶತಕ ಸಾಧಕ ಎನಿಸಿದರು. ಕಳೆದ ವರ್ಷ ಸ್ಕಾಟ್ಲೆಂಡ್​ ಎದುರು ಜೋಶ್​ ಇಂಗ್ಲಿಸ್​ 43 ಎಸೆತಗಳಲ್ಲಿ ಶತಕ ಸಿಡಿಸಿದ್ದು ಹಿಂದಿನ ದಾಖಲೆ.

6: ಆಸೀಸ್​ ಟಿ20ಯಲ್ಲಿ ಗರಿಷ್ಠ 6ನೇ ಬಾರಿ 200 ಪ್ಲಸ್​ ಮೊತ್ತ ಚೇಸಿಂಗ್​ ಮಾಡಿದ ಸಾಧನೆ ಮಾಡಿತು. ಭಾರತ, ದಣ ಆಫ್ರಿಕಾ ತಲಾ 5 ಬಾರಿ ಈ ಸಾಧನೆ ಮಾಡಿವೆ.

16: ಟಿಮ್​ ಡೇವಿಡ್​ 16 ಎಸೆತಗಳಲ್ಲೇ ಅರ್ಧಶತಕ ಸಿಡಿಸಿದ್ದು ಕೂಡ ಆಸೀಸ್​ ಪರ ಅತಿವೇಗದ ಸಾಧನೆ. 2022ರಲ್ಲಿ ಮಾರ್ಕಸ್​ ಸ್ಟೋಯಿನಿಸ್​ ಮತ್ತು 2024ರಲ್ಲಿ ಟ್ರಾವಿಸ್​ ಹೆಡ್​ ತಲಾ 17 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದು ಹಿಂದಿನ ದಾಖಲೆ.

2: ಶೈ ಹೋಪ್​ ಎಲ್ಲ 3 ಮಾದರಿಯಲ್ಲಿ ಶತಕ ಸಿಡಿಸಿದ ವಿಂಡೀಸ್​ನ 2ನೇ ಬ್ಯಾಟರ್​ ಎನಿಸಿದರು. ಕ್ರಿಸ್​ ಗೇಲ್​ ಮೊದಲಿಗ.