ನವದೆಹಲಿ: ಸಾಂಪ್ರದಾಯಿಕ ಎದುರಾಳಿ ಭಾರತ - ಪಾಕಿಸ್ತಾನ ತಂಡಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ಕ್ರಿಕೆಟ್ ವಿಶ್ವಕಪ್ನಲ್ಲಿ ಮತ್ತೆ ಎದುರಾಗುತ್ತಿವೆ. ಮುಂದಿನ ತಿಂಗಳು ಅ.23 ರಂದು ಮೆಲ್ಬೋರ್ನ್ ಅಂಗಳದಲ್ಲಿ ನಡೆಯಲಿರುವ ಈ ಹೈವೋಲ್ಟೇಜ್ ಪಂದ್ಯದ ಎಲ್ಲಾ ಟಿಕೆಟ್ಗಳು ಒಂದು ತಿಂಗಳ ಮುಂಚಿತವಾಗಿಯೇ ಸೋಲ್ಡ್ ಔಟ್ ಆಗಿದೆ ಎಂದು ಐಸಿಸಿ ತಿಳಿಸಿದೆ.
ಭಾರತ - ಪಾಕಿಸ್ತಾನ ಪಂದ್ಯ 5 ಲಕ್ಷ ಟಿಕೆಟ್ಗಳು ಬುಕ್ ಆಗಿದ್ದು, ಪಂದ್ಯ ವೀಕ್ಷಿಸಲು ವಿವಿಧ ದೇಶದ ಅಭಿಮಾನಿಗಳು ಖಾತರದಿಂದ ಕಾಯುತ್ತಿದ್ದಾರೆ. ಸದ್ಯ ಮೆಲ್ಬೋರ್ನ್ ಅಂಗಳದ ಮೀಸಲು ಸೀಟುಗಳು ಕೂಡ ಬುಕ್ ಆಗಿದೆ. ಹೀಗಾಗಿ ಪಂದ್ಯಾಟದ ದಿನ ಅಧಿಕೃತವಾಗಿ ಟಿಕೆಟನ್ನು ಮರು ಮಾರಾಟ ಮಾಡುವ ಅವಕಾಶ ಪ್ರಾರಂಭಿಸಲಾಗುವುದು. ಅಭಿಮಾನಿಗಳು ಮುಖಬೆಲೆಯಲ್ಲಿ ನೇರವಾಗಿ ಟಕೆಟ್ಗಳನ್ನು ವಿನಿಮಯ ಮಾಡಿಕೊಳ್ಳಬಹುದು ಎಂದು ಐಸಿಸಿ ಹೇಳಿದೆ.
ಇತ್ತೀಚೆಗೆಷ್ಟೇ ಮುಕ್ತಾಯವಾಗಿದ್ದ ಏಷ್ಯಾಕಪ್ನಲ್ಲಿ ಎರಡು ಬಾರಿ ಭಾರತ - ಪಾಕಿಸ್ತಾನ ತಂಡಗಳು ಎದುರಾಗಿದ್ದವು. ಮೊದಲ ಪಂದ್ಯದಲ್ಲಿ ಭಾರತ 5 ವಿಕೆಟ್ಗಳಿಂದ ಗೆದ್ದುಕೊಂಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ಸೋಲನ್ನು ಕಂಡಿತ್ತು. ಇದೀಗ ಮತ್ತೆ ಒಂದು ತಿಂಗಳ ಅಂತರದಲ್ಲಿ ಭಾರತ - ಪಾಕಿಸ್ತಾನ ತಂಡ ಎದುರಾಗುತ್ತಿದೆ.
ಮೊದಲ ಟಿ-20 ವಿಶ್ವಕಪ್ ಫೈನಲ್ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಜಯಭೇರಿ
2007ರಲ್ಲಿ ನಡೆದ ಮೊದಲ ಟಿ-20 ವಿಶ್ವಕಪ್ ಫೈನಲ್ನಲ್ಲಿ ಭಾರತ - ಪಾಕಿಸ್ತಾನ ತಂಡ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ ತಂಡ 158 ರನ್ಗಳ ಗುರಿಯನ್ನು ಪಾಕಿಸ್ತಾನಕ್ಕೆ ನೀಡಿತ್ತು. ಉತ್ತಮವಾಗಿ ಆಡುತ್ತಿದ್ದ ಪಾಕಿಸ್ತಾನ ತಂಡವೇ ಮೊದಲ ಟಿ-20 ವಿಶ್ವಕಪ್ ಗೆಲ್ಲುತ್ತದೆ ಎಂದು ಎಲ್ಲರೂ ನಿರ್ಧರಿಸಿದ್ದರು. ಆದರೆ ಕ್ರಿಕೆಟ್ ಅಂಗಳದಲ್ಲಿ ಆಗಿದ್ದೇ ಬೇರೆ. ಕೊನೆಯ ಹಂತದವರೆಗೂ ಕುತೂಹಲಕರವಾಗಿ ಸಾಗಿದ ಫೈನಲ್ ಪಂದ್ಯದಲ್ಲಿ ಭಾರತ ರೋಚಕ ಜಯ ಸಾಧಿಸಿತು. ಈ ಮೂಲಕ ಮೊದಲ ಟಿ-20 ವಿಶ್ವಕಪ್ನ್ನು ಗೆದ್ದುಕೊಂಡು ಭಾರತ ತಂಡ ಇತಿಹಾಸ ದಾಖಲಿಸಿತು.
ಸೇಡು ತೀರಿಸಿಕೊಳ್ಳುವ ತವಕದಲ್ಲಿ ಭಾರತ
ವಿಶ್ವಕಪ್ ಇತಿಹಾಸದಲ್ಲಿ ಭಾರತದ ತಂಡ ಒಮ್ಮೆಯೂ ಪಾಕಿಸ್ತಾನ ವಿರುದ್ಧ ಸೋಲದ ದಾಖಲೆ ಮಾಡಿತ್ತು. ಆದರೆ ಈ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಕಳೆದ ವರ್ಷದ ಟಿ-20 ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡಕ್ಕೆ ಸಾಧ್ಯವಾಗಿತ್ತು. ದುಬೈನಲ್ಲಿ ನಡೆದ 2021ರ ಟಿ-20 ವಿಶ್ವಕಪ್ನಲ್ಲಿ ಭಾರತ - ಪಾಕಿಸ್ತಾನ ಮತ್ತೆ ಎದುರಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ 7 ವಿಕೆಟ್ ಕಳೆದುಕೊಂಡು 151 ರನ್ ಕಲೆ ಹಾಕಿತ್ತು. ಈ ಮೊತ್ತವನ್ನು ಬೆನ್ನು ಹತ್ತಿದ ಪಾಕಿಸ್ತಾನ ತಂಡ ಯಾವುದೇ ವಿಕೆಟ್ ಕಳೆದುಕೊಳ್ಳದೆ 10 ವಿಕೆಟ್ಗಳ ಜಯ ದಾಖಲಿಸಿತ್ತು. ಈ ಮೂಲಕ ಮೊದಲ ಬಾರಿಗೆ ವಿಶ್ವಕಪ್ನಲ್ಲಿ ಭಾರತವನ್ನು ಬಾಬರ್ ಅಝಮ್ ನಾಯಕತ್ವದ ಪಾಕಿಸ್ತಾನ ತಂಡ ಸೋಲಿಸಿತ್ತು.
ಇದೀಗ ಮತ್ತೆ ಟಿ-20 ವಿಶ್ವಕಪ್ನಲ್ಲಿ ಭಾರತ - ಪಾಕಿಸ್ತಾನ ಎದುರಾಗುತ್ತಿದೆ. ಕಳೆದ ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಳ್ಳಲು ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ ಮತ್ತೆ ರೆಡಿಯಾಗಿದೆ. ಹಿಗಾಗಿ ಅ. 23 ರಂದು ಮೆಲ್ಬೋರ್ನ್ ಅಂಗಳದಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯದತ್ತ ಕ್ರಿಕೆಟ್ ಪ್ರೇಮಿಗಳು ಚಿತ್ತ ಹರಿಸಿದ್ದಾರೆ. (ಏಜೆನ್ಸೀಸ್)