ನವದೆಹಲಿ: ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿದ ಭಾರತದ ಆ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಪತ್ರ ಬರೆದು, 14 ವರ್ಷಗಳ ಯಶಸ್ವಿ ವೃತ್ತೀಜಿವನಕ್ಕಾಗಿ ಅಭಿನಂದನೆ ಸಲ್ಲಿಸಿದ್ದಾರೆ. ಜತೆಗೆ ಅಶ್ವಿನ್ ಅವರ ಅಚ್ಚರಿಯ ವಿದಾಯವನ್ನು "ಕ್ಯಾರಂ ಬಾಲ್' ಎಂದು ಬಣ್ಣಿಸಿರುವುದು ವಿಶೇಷವಾಗಿದೆ.
"ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿಮ್ಮ ನಿವೃತ್ತಿಯ ಘೋಷಣೆ ಭಾರತ ಮತ್ತು ವಿಶ್ವದೆಲ್ಲೆಡೆಯ ಅಭಿಮಾನಿಗಳಿಗೆ ಅಚ್ಚರಿ ತಂದಿತು. ಎಲ್ಲರೂ ಇನ್ನಷ್ಟು ಆಫ್-ಬ್ರೇಕ್ ಎಸೆತಗಳನ್ನು ನಿರೀಕ್ಷಿಸುತ್ತಿದ್ದಾಗ ನೀವು ಕ್ಯಾರಂ ಬಾಲ್ ಎಸೆದು ಎಲ್ಲರನ್ನೂ ಬೌಲ್ಡ್ ಮಾಡಿದಿರಿ. ಆದರೆ ಭಾರತ ಪರ ಅಮೋವಾದ ವೃತ್ತೀಜಿವನವನ್ನು ಕಂಡ ಬಳಿಕ ಇದು ನಿಮಗೂ ಕಠಿಣವಾದ ನಿರ್ಧಾರವೆಂಬುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬಲ್ಲರು' ಎಂದು ಮೋದಿ ಪತ್ರದಲ್ಲಿ ಬರೆದಿದ್ದಾರೆ.
765 ಅಂತಾರಾಷ್ಟ್ರೀಯ ವಿಕೆಟ್, 11 ಸರಣಿಶ್ರೇಷ್ಠ ಪ್ರಶಸ್ತಿ ಜತೆಗೆ 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಸಹಿತ ಭಾರತದ ಹಲವು ಗೆಲುವುಗಳಿಗೆ ಅಶ್ವಿನ್ ಕೊಡುಗೆಗಳನ್ನು ನೀಡಿರುವುದನ್ನು ಪ್ರಧಾನಿ ಉಲ್ಲೇಖಿಸಿದ್ದಾರೆ. ಅಶ್ವಿನ್ ಅವರ ಜೆರ್ಸಿ ನಂ. 99 ಅನ್ನೂ ಮಿಸ್ ಮಾಡಿಕೊಳ್ಳುತ್ತೇವೆ ಎಂದಿರುವ ಮೋದಿ, 2022ರ ಟಿ20 ವಿಶ್ವಕಪ್ನಲ್ಲಿ ಪಾಕ್ ವಿರುದ್ಧದ ಪಂದ್ಯದ ಕೊನೇ ಓವರ್ನಲ್ಲಿ ಅಶ್ವಿನ್ ಸಮಯಪ್ರಜ್ಞೆಯಿಂದ ವೈಡ್ ಎಸೆತವನ್ನು ಆಡದೆ ಬಿಟ್ಟ ಪ್ರಸಂಗವನ್ನೂ ನೆನಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಯುವ ಆಟಗಾರರಿಗೆ ನಿಮ್ಮ ಜ್ಞಾನವನ್ನು ಹಂಚಿಕೊಳ್ಳುವ ಮೂಲಕ ನೆರವಾಗಿ ಎಂದೂ ಪ್ರಧಾನಿ ಪ್ರೇರಣೆ ತುಂಬಿದ್ದಾರೆ.