ಬೆಂಗಳೂರು: ಆತಿಥೇಯ ಭಾರತ ತಂಡ ಏಕದಿನ ವಿಶ್ವಕಪ್ನಲ್ಲಿ ಮೊದಲ ತಂಡವಾಗಿ ಸೆಮಿಫೈನಲ್ ಪ್ರವೇಶ ಖಾತ್ರಿಪಡಿಸಿಕೊಂಡಿದ್ದು, ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನೂ ಭದ್ರಪಡಿಸಿಕೊಂಡಿದೆ. ಆದರೆ ಭಾರತ ತಂಡಕ್ಕೆ ಸೆಮಿಫೈನಲ್ ಎದುರಾಳಿ ಯಾರು ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ, ಸೆಮೀಸ್ನಲ್ಲಿ ಭಾರತವನ್ನು ಎದುರಿಸಲು ಮತ್ತು 4ನೇ ತಂಡವಾಗಿ ಉಪಾಂತ್ಯಕ್ಕೇರಲು ಹಾಲಿ ರನ್ನರ್ ಅಪ್ ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮುಂದಿನ 3 ದಿನಗಳಲ್ಲಿ ಅಂದರೆ ಶನಿವಾರದ ವೇಳೆಗೆ ಭಾರತದ ಸೆಮೀಸ್ ಎದುರಾಳಿ ಯಾರೆಂದು ತೀರ್ಮಾನವಾಗಲಿದೆ.
ಗುರುವಾರ ಬೆಂಗಳೂರಿನಲ್ಲಿ ನಡೆಯುವ ನ್ಯೂಜಿಲೆಂಡ್-ಶ್ರೀಲಂಕಾ, ಶುಕ್ರವಾರ ಅಹಮದಾಬಾದ್ನಲ್ಲಿ ನಡೆಯುವ ದಕ್ಷಿಣ ಆಫ್ರಿಕಾ-ಅಫ್ಘಾನಿಸ್ತಾನ ಮತ್ತು ಶನಿವಾರ ಕೋಲ್ಕತದಲ್ಲಿ ನಡೆಯುವ ಇಂಗ್ಲೆಂಡ್-ಪಾಕಿಸ್ತಾನ ನಡುವಿನ ಪಂದ್ಯಗಳ ಫಲಿತಾಂಶಗಳು 4ನೇ ಸೆಮಿಫೈನಲಿಸ್ಟ್ ತಂಡವನ್ನು ನಿರ್ಧರಿಸಲಿವೆ. ಸೆಮೀಸ್ ರೇಸ್ನಲ್ಲಿ ಮೂರೂ ತಂಡಗಳು 8 ಪಂದ್ಯಗಳಲ್ಲಿ ತಲಾ 4 ಜಯ-ಸೋಲು ಕಂಡಿವೆ.
ಸದ್ಯದ ಲೆಕ್ಕಾಚಾರದ ಪ್ರಕಾರ, ನ್ಯೂಜಿಲೆಂಡ್ ತಂಡ ಭಾರತಕ್ಕೆ ಸೆಮೀಸ್ ಎದುರಾಳಿಯಾಗಬಲ್ಲ ನೆಚ್ಚಿನ ತಂಡವಾಗಿದೆ. ಯಾಕೆಂದರೆ ಕೊನೇ ಲೀಗ್ ಪಂದ್ಯದಲ್ಲಿ ಕಿವೀಸ್, ಪಾಕ್, ಆಫ್ಘನ್ ಮೂರೂ ತಂಡಗಳು ಗೆದ್ದರೆ, ಉತ್ತಮ ರನ್ರೇಟ್ ಆಧಾರದಲ್ಲಿ ಕೇನ್ ವಿಲಿಯಮ್ಸನ್ ಬಳಗವೇ ಸೆಮಿಫೈನಲ್ಗೇರುವ ಅವಕಾಶ ಹೊಂದಿದೆ. ಇದೇ ವೇಳೆ ಆಫ್ಘನ್ ಸೆಮೀಸ್ಗೇರಲು ಪಾಕ್, ಕಿವೀಸ್ ಎರಡೂ ಕೊನೇ ಲೀಗ್ ಪಂದ್ಯಗಳಲ್ಲಿ ಸೋಲಬೇಕಾಗುತ್ತದೆ. ಯಾಕೆಂದರೆ ಈ 3 ತಂಡಗಳಲ್ಲಿ ಆಫ್ಘನ್ ರನ್ರೇಟ್ ಅತ್ಯಂತ ಕಳಪೆಯಾಗಿದೆ.
ಭಾರತ-ಪಾಕ್ ಸೆಮೀಸ್ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಈಗಲೂ ಇದೆ. ಇದಕ್ಕಾಗಿ ಪಾಕ್ ಕೊನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ಎದುರು ಗೆಲ್ಲಬೇಕು. ಜತೆಗೆ ಲಂಕಾ ಎದುರು ಕಿವೀಸ್ ಸೋತರೆ ಉತ್ತಮ. ಒಂದು ವೇಳೆ ಕಿವೀಸ್ 1 ರನ್ನಿಂದ ಗೆದ್ದರೂ, ಪಾಕ್ ಕನಿಷ್ಠ 130 ರನ್ಗಳಿಂದ ಗೆದ್ದರಷ್ಟೇ ರನ್ರೇಟ್ನಲ್ಲಿ ಅದನ್ನು ಹಿಂದಿಕ್ಕಲು ಸಾಧ್ಯವಿದೆ. ಕಿವೀಸ್ 50 ರನ್ಗಳಿಂದ ಗೆದ್ದರೆ, ಪಾಕ್ 180 ರನ್ಗಳಿಂದ ಗೆಲ್ಲಬೇಕಾಗುತ್ತದೆ. ಕಿವೀಸ್ ಪಂದ್ಯದ ನಂತರ ಪಾಕ್ ಪಂದ್ಯ ನಡೆಯಲಿರುವುದರಿಂದ ರನ್ರೇಟ್ ಲೆಕ್ಕಾಚಾರ ನೋಡಿಕೊಂಡು ಆಡುವ ಅನುಕೂಲವೂ ಇದೆ.
ಸೆಮೀಸ್ ಎದುರಾಳಿ ಲೆಕ್ಕಾಚಾರ
ಭಾರತ-ನ್ಯೂಜಿಲೆಂಡ್
*ಶ್ರೀಲಂಕಾ ವಿರುದ್ಧ ನ್ಯೂಜಿಲೆಂಡ್ ಗೆಲ್ಲಬೇಕು
*ಇಂಗ್ಲೆಂಡ್ ಎದುರು ಪಾಕ್ 130ಕ್ಕಿಂ ಹೆಚ್ಚು ರನ್ಗಳಿಂದ ಗೆಲ್ಲಬಾರದು.
ಭಾರತ-ಪಾಕಿಸ್ತಾನ
*ಇಂಗ್ಲೆಂಡ್ ಎದುರು ಪಾಕಿಸ್ತಾನ ಗೆಲ್ಲಬೇಕು.
*ಲಂಕಾ ಎದುರು ಕಿವೀಸ್ ಸೋಲಬೇಕು ಅಥವಾ ಪಂದ್ಯ ಮಳೆಗೆ ರದ್ದಾಗಬೇಕು ಅಥವಾ ಇಂಗ್ಲೆಂಡ್ ಎದುರು ಪಾಕ್ 130ಕ್ಕಿಂತ ಹೆಚ್ಚು ರನ್ಗಳಿಂದ ಗೆಲ್ಲಬೇಕು.
ಭಾರತ-ಅಫ್ಘಾನಿಸ್ತಾನ
*ದಕ್ಷಿಣ ಆಫ್ರಿಕಾ ಎದುರು ಅಫ್ಘಾನಿಸ್ತಾನ ಗೆಲ್ಲಬೇಕು.
*ಶ್ರೀಲಂಕಾ ಎದುರು ನ್ಯೂಜಿಲೆಂಡ್ ಸೋಲಬೇಕು.
*ಇಂಗ್ಲೆಂಡ್ ಎದುರು ಪಾಕಿಸ್ತಾನ ಸೋಲಬೇಕು.
*ಆಸೀಸ್-ಆಫ್ರಿಕಾ ಸೆಮೀಸ್ ಖಚಿತ
ಕೊನೇ ಪಂದ್ಯದ ಫಲಿತಾಂಶ ಏನೇ ಬಂದರೂ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೆಲಿಯಾ ತಂಡಗಳು ಲೀಗ್ ಹಂತದ ಅಂಕಪಟ್ಟಿಯಲ್ಲಿ 2 ಮತ್ತು 3ನೇ ಸ್ಥಾನ ಅಲಂಕರಿಸುವುದು ಖಚಿತಗೊಂಡಿದೆ. ಇದರಿಂದಾಗಿ ಸೆಮಿಫೈನಲ್ನಲ್ಲಿ ಇವೆರಡು ತಂಡಗಳ ಮುಖಾಮುಖಿಯೂ ಖಚಿತಗೊಂಡಿದೆ. ಆದರೆ ಈ ಪಂದ್ಯ ಎಲ್ಲಿ ನಡೆಯಲಿದೆ ಎಂಬುದು ಸ್ಪಷ್ಟವಾಗಿಲ್ಲ. ಯಾಕೆಂದರೆ ಸೆಮೀಸ್ನಲ್ಲಿ ಭಾರತ-ಪಾಕ್ ಮುಖಾಮುಖಿ ಏರ್ಪಟ್ಟರೆ ಆಗ ಈ ಪಂದ್ಯ ಕೋಲ್ಕತದಲ್ಲಿ ನಡೆಯಲಿದೆ ಮತ್ತು ಆಫ್ರಿಕಾ-ಆಸೀಸ್ ಸೆಮೀಸ್ ನವೆಂಬರ್ 15ರಂದು ಮುಂಬೈನಲ್ಲಿ ನಡೆಯಲಿದೆ. ಒಂದು ವೇಳೆ ಪಾಕ್ ಸೆಮೀಸ್ಗೆ ಅರ್ಹತೆ ಪಡೆಯದಿದ್ದರೆ, ಆಸೀಸ್-ಆಫ್ರಿಕಾ ಸೆಮೀಸ್ ನವೆಂಬರ್ 16ರಂದು ಕೋಲ್ಕತದಲ್ಲಿ ನಡೆಯಲಿದೆ.