ಕ್ರೀಡೆ

ವೀರೇಂದ್ರ ಸೆಹ್ವಾಗ್​ ಪ್ರಕಾರ ಇದೇ ನೋಡಿ ಈ ಬಾರಿ ಐಪಿಎಲ್​ ಗೆದ್ದು ಇತಿಹಾಸ ನಿರ್ಮಿಸುವ ತಂಡ! Virender Sehwag

Virender Sehwag : ಪ್ರಸ್ತುತ ನಡೆಯುತ್ತಿರುವ 18ನೇ ಆವೃತ್ತಿಯ ಐಪಿಎಲ್​ ಟೂರ್ನಿ ಕೊನೆಯ ಹಂತಕ್ಕೆ ಬಂದಿದೆ. ಎರಡು ತಿಂಗಳಿನಿಂದ ಅಭಿಮಾನಿಗಳನ್ನು ರಂಜಿಸಿದ್ದ ಈ ಮೆಗಾ ಟೂರ್ನಮೆಂಟ್ ಇಂದು (ಜೂನ್​ 03) ಮುಕ್ತಾಯವಾಗಲಿದೆ. ಅಹಮದಾಬಾದ್‌ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ಮುಖಾಮುಖಿಯಾಗಲಿವೆ.

ಆರಂಭದಿಂದಲೂ ಐಪಿಎಲ್‌ ಆಡುತ್ತಾ ಬಂದಿದ್ದರೂ ಈ ಎರಡೂ ತಂಡಗಳು ಒಮ್ಮೆಯೂ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಿಲ್ಲ. ಇದರೊಂದಿಗೆ, ಎರಡೂ ತಂಡಗಳು ತಮ್ಮ 18 ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸುವ ಭರವಸೆಯನ್ನು ಹೊಂದಿವೆ. ಎರಡೂ ತಂಡಗಳು ಸಮಬಲ ಸಾಧಿಸಿರುವುದರಿಂದ, ಅಂತಿಮ ಯುದ್ಧವು ರೋಮಾಂಚನದಿಂದ ಕೂಡಿದೆ. ಈ ನಿಟ್ಟಿನಲ್ಲಿ ಭಾರತದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಭವಿಷ್ಯವೊಂದನ್ನು ನುಡಿದಿದ್ದಾರೆ. ಈ ವರ್ಷ ಆರ್‌ಸಿಬಿ ಐಪಿಎಲ್ ಟ್ರೋಫಿಯನ್ನು ಗೆಲ್ಲುತ್ತದೆ ಎಂದು ಸೆಹ್ವಾಗ್ ಭವಿಷ್ಯ ನುಡಿದಿದ್ದಾರೆ.

ಆರ್‌ಸಿಬಿ ಫೈನಲ್ ಪಂದ್ಯವನ್ನು ಗೆಲ್ಲುತ್ತದೆ ಎಂದು ನಾನು ಭಾವಿಸುತ್ತೇನೆ. ಆದರೆ, ಸಾಮಾನ್ಯವಾಗಿ ನಾನು ಬೆಂಬಲಿಸುವ ತಂಡ ಕಳೆದ ಕೆಲವು ಪಂದ್ಯಗಳಲ್ಲಿ ಸೋಲುತ್ತಿದೆ. ಕ್ವಾಲಿಫೈಯರ್ -1 ರಲ್ಲಿ ಪಂಜಾಬ್ ತಂಡ ಆರ್‌ಸಿಬಿ ವಿರುದ್ಧ ಗೆಲ್ಲುತ್ತದೆ ಎಂದು ನಾನು ಊಹಿಸಿದ್ದೆ. ಆದರೆ ಆ ಪಂದ್ಯದಲ್ಲಿ ಪಂಜಾಬ್ ಸೋತಿತು. ಅದೇ ರೀತಿ, ಎಲಿಮಿನೇಟರ್‌ನಲ್ಲಿ ಮುಂಬೈ ವಿರುದ್ಧ ಗುಜರಾತ್ ಗೆಲ್ಲುತ್ತದೆ ಎಂದು ನಾನು ಹೇಳಿದ್ದೆ. ಆದರೆ, ಗುಜರಾತ್ ಕೂಡ ಸೋತಿತು. ನಂತರ ನಾನು ಕ್ವಾಲಿಫೈಯರ್ -2 ರಲ್ಲಿ ಮುಂಬೈ ಇಂಡಿಯನ್ಸ್‌ಗೆ ಬೆಂಬಲ ನೀಡಿದ್ದೆ. ಮುಂಬೈ ಅಲ್ಲಿಯೂ ಸೋತಿತು. ಟೀಮ್ ಇಂಡಿಯಾದಲ್ಲೂ ಇದೇ ಆಗುತ್ತಿದೆ. ಅವರು ಗೆಲ್ಲುತ್ತಾರೆ ಎಂದು ನಾನು ಹೇಳಿದಾಗ ಭಾರತ ಪ್ರತಿ ಬಾರಿಯೂ ಸೋತಿತು ಎಂದು ಸೆಹ್ವಾಗ್ ಕ್ರಿಕ್‌ಬಜ್ ಲೈವ್‌ನಲ್ಲಿ ಹೇಳಿದರು.

ಇದೀಗ ಆರ್​ಸಿಬಿ ಗೆಲ್ಲುತ್ತದೆ ಎಂದು ಸೆಹ್ವಾಗ್​ ಹೇಳಿದ್ದಾರೆ ಏನಾಗುತ್ತದೋ ಎಂದು ಕಾದು ನೋಡಬೇಕಿದೆ.

ಆರ್​ಸಿಬಿಗೆ ಇದು ಸುವರ್ಣಾವಕಾಶ

ವಿರಾಟ್ ಕೊಹ್ಲಿ ಅವರ ಜೆರ್ಸಿ ನಂಬರ್ 18 ಮತ್ತು ಇದು 18ನೇ ಆವೃತ್ತಿ ಎಂದಾಗಲೇ ಆರ್​ಸಿಬಿ ಅಭಿಮಾನಿಗಳು ‘ಈ ಸಲ ಕಪ್ ನಮ್ದೇ’ ಎಂದು ಇನ್ನಷ್ಟು ಜೋರಾಗಿ ಹೇಳುತ್ತಿದ್ದರು. ಅವರ ಈ ಘೋಷವಾಕ್ಯ ನಿಜವಾಗಲು ಇನ್ನೀಗ ಒಂದೇ ಒಂದು ಗೆಲುವು ಬೇಕಾಗಿದೆ. ಐಪಿಎಲ್​ನಲ್ಲಿ ಮೊದಲ ಆವೃತ್ತಿಯಿಂದಲೂ ಒಂದೇ ತಂಡಕ್ಕೆ ನಿಷ್ಠೆಯಿಂದಿರುವ ಏಕೈಕ ಆಟಗಾರರಾಗಿರುವ ವಿರಾಟ್ ಕೊಹ್ಲಿಗೆ ಟ್ರೋಫಿ ಗೆಲುವಿನ ಪ್ರತಿಫಲ ಸಿಗಬೇಕಾಗಿದೆ ಎಂಬುದು ಅಭಿಮಾನಿಗಳ ಒತ್ತಾಸೆಯೂ ಆಗಿದೆ. ಹಾಲಿ ಆವೃತ್ತಿಯಲ್ಲಿ ಆರ್​ಸಿಬಿಗೆ ಬ್ಯಾಟಿಂಗ್​ನಲ್ಲಿ ಉಪಯುಕ್ತ ಕೊಡುಗೆ ನೀಡುತ್ತ ಬಂದಿರುವ ಕೊಹ್ಲಿ (614) ತಂಡದ ಗರಿಷ್ಠ ಸ್ಕೋರರ್ ಕೂಡ ಆಗಿದ್ದಾರೆ. ಅವರಿಗೆ ಫಿಲ್ ಸಾಲ್ಟ್ (387), ರಜತ್ ಪಾಟೀದಾರ್ (286), ಜಿತೇಶ್ ಶರ್ಮ (237) ಉತ್ತಮ ಬೆಂಬಲ ನೀಡುತ್ತ ಬಂದಿದ್ದಾರೆ. ಬೌಲಿಂಗ್​ನಲ್ಲಿ ಆಸೀಸ್ ವೇಗಿ ಜೋಶ್ ಹ್ಯಾಸಲ್​ವುಡ್ (21) ಆರ್​ಸಿಬಿಯ ಟ್ರಂಪ್ ಕಾರ್ಡ್ ಎನಿಸಿದ್ದರೆ, ಕೃನಾಲ್ ಪಾಂಡ್ಯ (15), ಭುವನೇಶ್ವರ್ (15), ಯಶ್ ದಯಾಳ್ (12), ಸುಯಶ್ ಶರ್ಮ (8) ಉತ್ತಮ ಬೆಂಬಲ ಒದಗಿಸಿದ್ದಾರೆ. ಲೀಗ್ ಹಂತದಲ್ಲಿ ಒಮ್ಮೆ ಮಾತ್ರವಲ್ಲದೆ, ಮೊದಲ ಕ್ವಾಲಿಫೈಯರ್ ಪಂದ್ಯದಲ್ಲೂ ಪಂಜಾಬ್ ಎದುರು ಬಲಿಷ್ಠ ನಿರ್ವಹಣೆ ತೋರಿ ಏಕಪಕ್ಷೀಯ ಗೆಲುವು ದಾಖಲಿಸಿದ ವಿಶ್ವಾಸ ಆರ್​ಸಿಬಿ ತಂಡಕ್ಕಿದೆ. (ಏಜೆನ್ಸೀಸ್​)