ಕ್ರೀಡೆ

ಸೈಕಲ್ ರಾಜ ಈ ರಾಜಕುಮಾರ

ಬಸ್​ಗೆ ಹೋಗಲು ಹಣವಿಲ್ಲದ ಬೆಳಗಾವಿ ಜಿಲ್ಲೆಯ ಯುವಕ ರಾಜಕುಮಾರ ಇಂದು ಸೈಕ್ಲಿಂಗ್​ನಲ್ಲಿ ಅಂತಾರಾಷ್ಟ್ರೀಯ ಮಟ್ಟದವರೆಗೆ ಹೋಗಿ ವಿಜಯಪತಾಕೆ ಹಾರಿಸಿದ್ದಾನೆ.

 ಬೆಳಗಾವಿ: ಇಂದು ಕಾಲೇಜು ಮೆಟ್ಟಿಲೇರುತ್ತಲೇ ವಿದ್ಯಾರ್ಥಿಗಳು ತಮ್ಮಿಷ್ಟದ ಬೈಕ್, ಕಾರು ಖರೀದಿಸುತ್ತಾರೆ. ಆದರೆ, ಈ ವಿದ್ಯಾರ್ಥಿ ಕಥೆಯೇ ಭಿನ್ನ. ಬೆಂಗಳೂರು ಮಹಾನಗರದಲ್ಲಿ ಆರು ವರ್ಷಗಳ ಹಿಂದೆ ಬಸ್​ನಲ್ಲಿ ಕಾಲೇಜಿಗೆ ತೆರಳಲು ಹಣವಿಲ್ಲದೆ ಸೈಕಲ್ ಪೆಡಲ್ ತುಳಿಯುತ್ತಿದ್ದ ಇವರು, ಇಂದು ಸೈಕ್ಲಿಂಗ್​ನಲ್ಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ. ಭಾರತ ಮಾತ್ರವಲ್ಲ, ಥಾಯ್ಲೆಂಡ್ ಮತ್ತು ಫ್ರಾನ್ಸ್ ನೆಲದಲ್ಲೂ ಗೆಲುವಿನ ಪತಾಕೆ ಹಾರಿಸಿದ್ದಾರೆ.

ಇದು, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಲಾಬಾದ ಗ್ರಾಮದ ರಾಜಕುಮಾರ ಸಂಗಪ್ಪ ಖೋತ (31) ಯಶೋಗಾಥೆ. ಸದ್ಯ ಮಹಾರಾಷ್ಟ್ರದ ಪುಣೆಯಲ್ಲಿ ಸಾಫ್ಟ್​ವೇರ್​ಇಂಜಿನಿಯರ್ ಆಗಿದ್ದು, ವೃತ್ತಿ-ಪ್ರವೃತ್ತಿ ಎರಡರಲ್ಲೂ ಯಶ ಕಂಡಿದ್ದಾರೆ. ಸದ್ಯದಲ್ಲಿಯೇ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಸ್ಪರ್ಧೆಗಾಗಿ ತಯಾರಿ ನಡೆಸಿದ್ದಾರೆ.

ಸೈಕ್ಲಿಂಗ್ ಆಸೆ ಹುಟ್ಟಿದ್ದು ಹೇಗೆ?: 2014ರಲ್ಲಿ ಬೆಂಗಳೂರಿನಲ್ಲಿ ಎಂ.ಟೆಕ್ ಓದುತ್ತಿದ್ದೆ. ಬನಶಂಕರಿ ಲೇಔಟ್​ನ ಕೊಠಡಿಯಲ್ಲಿ ವಾಸವಿದ್ದೆ. ಮಲ್ಲೇಶ್ವರದಲ್ಲಿರುವ ಕಾಲೇಜಿಗೆ ನಿತ್ಯವೂ ಬಸ್​ನಲ್ಲಿ ಪ್ರಯಾಣಿಸಲು ಹಣ ಇರುತ್ತಿರಲಿಲ್ಲ. ಇದರಿಂದ ಬೇಸತ್ತು ಸ್ನೇಹಿತರ ಬಳಿ ಹಣ ಪಡೆದು, ಹಳೆಯ ಸೈಕಲ್ ಖರೀದಿಸಿದೆ. ನಿತ್ಯವೂ ಅದರ ಮೇಲೆ ಕಾಲೇಜಿಗೆ ಹೋಗುತ್ತಿದ್ದೆ. ರಜೆ ಇದ್ದಾಗ ಹಲವು ಪ್ರದೇಶಗಳಲ್ಲಿ ಸುತ್ತಾಡುತ್ತಿದ್ದೆ. ದಿನಗಳೆದಂತೆ ಸೈಕ್ಲಿಂಗ್ ನನ್ನ ಬದುಕಿನಲ್ಲಿ ಹೊಸ ಚೈತನ್ಯ ಮೂಡಿಸಿತು. ಆರೋಗ್ಯವೂ ಸುಧಾರಿಸಿತು. ಒಂದೇ ವರ್ಷದಲ್ಲಿ ನೌಕರಿ ಸಿಕ್ಕಿದ್ದರಿಂದ ಹೊಸ ಸೈಕಲ್ ಖರೀದಿಸಿದೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸೈಕ್ಲಿಸ್ಟ್​ಗಳನ್ನು ಭೇಟಿಯಾದೆ. ಹಂತ ಹಂತವಾಗಿ ಒಂದೊಂದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಆರಂಭಿಸಿದೆ. ಅಂದು ಆರಂಭಗೊಂಡ ಸೈಕಲ್ ಪಯಣ ಇಂದಿನವರೆಗೂ ಸಾಗಿದೆ ಎಂದು ಮುಗುಳ್ನಗುತ್ತಾರೆ ರಾಜಕುಮಾರ.

ಈವರೆಗೆ ಸೈಕಲ್ ಮೇಲೆ 65 ಸಾವಿರ ಕಿ.ಮೀ. ಕ್ರಮಿಸಿದ ಅವರು ಭಾರತ, ಫ್ರಾನ್ಸ್ ಮತ್ತು ಥಾಯ್ಲೆಂಡ್​ನಲ್ಲಿ ನಡೆದ ಮೂರು ಅಂತಾರಾಷ್ಟ್ರೀಯ ಸೈಕ್ಲಿಂಗ್ ಟೂರ್ನಿಗಳಲ್ಲಿ ಪದಕಗಳ ಬೇಟೆಯಾಡಿದ್ದಾರೆ.

ಸವಾಲಿನ ಹಾದಿಯಲ್ಲಿ ಗೆದ್ದೆ: ಥಾಯ್ಲೆಂಡ್​ನಲ್ಲಿ ಇಸಾನ್-2020 ಅಂತಾರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆ ಸಂಘಟಿಸಲಾಗಿತ್ತು. ಭಾರತದ 12 ಸೈಕ್ಲಿಸ್ಟ್ ಗಳು ಪಾಲ್ಗೊಂಡಿದ್ದೆವು. ನಾವು ಕ್ರಮಿಸಬೇಕಿದ್ದ ಹಾದಿ ಸವಾಲಿನಿಂದ ಕೂಡಿತ್ತು. ಬೆಳಗಿನ ಅವಧಿಯಲ್ಲಿ ತೀವ್ರ ಉಷ್ಣತೆ ಇರುತ್ತಿತ್ತು. 2,024 ಕಿ.ಮೀ. ದೂರ ಕ್ರಮಿಸಲು 202 ಗಂಟೆ ಸಮಯ ನಿಗದಿಪಡಿಸಲಾಗಿತ್ತು. ಆದರೆ, ಉತ್ಸಾಹದಿಂದ ಸೈಕಲ್ ಓಡಿಸಿದ ನಾನು 156 ಗಂಟೆ, 25 ನಿಮಿಷಗಳಲ್ಲಿ ದೂರ ಕ್ರಮಿಸಿದೆ ಎಂದು ಗೆಲುವಿನ ಚಿತ್ರಣ ಬಿಚ್ಚಿಟ್ಟರು.

2019ರ ಆಗಸ್ಟ್​ನಲ್ಲಿ ಫ್ರಾನ್ಸ್​ನಲ್ಲಿ ಪ್ಯಾರಿಸ್ ಬ್ರೆಸ್ಟ್ ಪ್ಯಾರಿಸ್ ಅಂತಾರಾಷ್ಟ್ರೀಯ ಸೈಕ್ಲಿಂಗ್ ಟೂರ್ನಿ ಆಯೋಜಿಸಲಾಗಿತ್ತು. ಆಗ, 90 ಗಂಟೆಗಳಲ್ಲಿ 1,230 ಕಿ.ಮೀ. ಕ್ರಮಿಸಿದೆ. ಅದೇ ವರ್ಷ ಅಕ್ಟೋಬರ್​ನಲ್ಲಿ ಗೋವಾದಲ್ಲಿ ನಡೆದ ಐರನ್ ಮೆನ್ 70.3 ಅಂತಾರಾಷ್ಟ್ರೀಯ ಟೂರ್ನಿಯಲ್ಲೂ ಪಾಲ್ಗೊಂಡಿದ್ದೆ. ಸಮುದ್ರದಲ್ಲಿ 1.9 ಕಿ.ಮೀ. ಈಜಿದ ನಂತರ, 90 ಕಿ.ಮೀ. ಸೈಕಲ್ ಓಡಿಸುವುದು ಮತ್ತು 21 ಕಿ.ಮೀ. ಓಡುವ ಸ್ಪರ್ಧೆ ಅದಾಗಿತ್ತು. 7 ಗಂಟೆ, 12 ನಿಮಿಷದಲ್ಲೇ (8 ಗಂಟೆ, 30 ನಿಮಿಷ ನಿಗದಿಯಾದ ಅವಧಿ) ಗುರಿ ಮುಟ್ಟಿದೆ. ಈವರೆಗೆ ರಾಜ್ಯಮಟ್ಟದ 20ಕ್ಕಿಂತ ಹೆಚ್ಚು ಸ್ಪರ್ಧೆಗಳಲ್ಲಿ ಮಿಂಚಿದ್ದೇನೆ ಎಂದು ಸಾಧನೆ ಪಥ ಸ್ಮರಿಸಿಕೊಂಡರು.

ಬದುಕಿನ ಪಥ ಬದಲಿಸಿದ ಪ್ರವೃತ್ತಿ

ನನ್ನ ಪಾಲಿಗೆ ಸೈಕ್ಲಿಂಗ್ ಕೇವಲ ಪ್ರವೃತ್ತಿಯಾಗಿ ಉಳಿದಿಲ್ಲ. ಅದು ನನ್ನ ಬದುಕಿನ ಪಥವನ್ನೇ ಬದಲಿಸಿದೆ. ಆತ್ಮವಿಶ್ವಾಸ, ನಾಯಕತ್ವ ಗುಣ ಬೆಳೆಸಿದೆ. ಇಡೀ ದೇಶಾದ್ಯಂತ ಸಂಚರಿಸಿದ್ದರಿಂದ ಹತ್ತು-ಹಲವು ನಗರಗಳಲ್ಲಿ ಸಾವಿರಾರು ಜನರ ಪರಿಚಯವಾಗಿದೆ. ಈಗಲೂ ನಿತ್ಯ ಬೆಳಗ್ಗೆ ಸೈಕ್ಲಿಂಗ್ ಅಭ್ಯಾಸ ಮಾಡುತ್ತೇನೆ. ವೀಕೆಂಡ್​ನಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತೇನೆ. ಕೆಲಸದ ಬಿಡುವಿನ ಅವಧಿಯಲ್ಲಿ ಶಾಲಾ-ಕಾಲೇಜಿಗೆ ತೆರಳಿ, ಸೈಕ್ಲಿಂಗ್ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ತಿಳಿಸುತ್ತೇನೆ. ಸೈಕ್ಲಿಂಗ್​ನಲ್ಲಿ ಇನ್ನೂ ಹೆಚ್ಚು ಸಾಧನೆ ಮಾಡಿ ಭಾರತದ ಕೀರ್ತಿ ಹೆಚ್ಚಿಸಬೇಕೆಂಬ ತುಡಿತವಿದೆ ಎಂದು ಹೇಳುತ್ತಾರೆ ರಾಜಕುಮಾರ (ಮೊ: 9900514151)

ಇಮಾಮಹುಸೇನ್ ಗೂಡುನವರ