ಕ್ರೀಡೆ

VIDEO | ಯುವ ವೇಗಿಯ ಎಸೆತಕ್ಕೆ ಧೋನಿ ಕ್ಲೀನ್ ಬೋಲ್ಡ್, ವಿಡಿಯೋ ವೈರಲ್!

ಬೆಂಗಳೂರು: ಐಪಿಎಲ್ 14ನೇ ಆವೃತ್ತಿಗೆ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ಸಿದ್ಧತೆ ಈಗಾಗಲೆ ಚೆನ್ನೈನಲ್ಲಿ ಆರಂಭಗೊಂಡಿದೆ. ತಂಡದ ನಾಯಕ ಎಂಎಸ್ ಧೋನಿ ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿದ ವಿಡಿಯೋ ಕಳೆದ ವಾರ ವೈರಲ್ ಆಗಿತ್ತು. ಇದೀಗ ಎಂಎಸ್ ಧೋನಿ, ತಂಡಕ್ಕೆ ಹೊಸದಾಗಿ ಸೇರ್ಪಡೆಗೊಂಡಿರುವ ಯುವ ವೇಗಿಯ ಎಸೆತಕ್ಕೆ ಕ್ಲೀನ್ ಬೋಲ್ಡ್ ಆಗಿರುವ ವಿಡಿಯೋವೊಂದು ವೈರಲ್ ಆಗಿದೆ.

ಆಂಧ್ರ ಪ್ರದೇಶದ 22 ವರ್ಷದ ಹರಿಶಂಕರ್ ರೆಡ್ಡಿ, ಧೋನಿಯನ್ನು ಕ್ಲೀನ್ ಬೋಲ್ಡ್ ಮಾಡಿರುವ ವೇಗದ ಬೌಲರ್ ಆಗಿದ್ದಾರೆ. ಕಳೆದ ಐಪಿಎಲ್ ಹರಾಜಿನಲ್ಲಿ ಹರಿಶಂಕರ್ 20 ಲಕ್ಷ ರೂಪಾಯಿ ಮೂಲಬೆಲೆಗೆ ಚೆನ್ನೈ ಸೂಪರ್‌ಕಿಂಗ್ಸ್ ತಂಡಕ್ಕೆ ಸೇರ್ಪಡೆಗೊಂಡಿದ್ದರು. ಅಭ್ಯಾಸ ಅವಧಿಯಲ್ಲಿ ಧೋನಿಯನ್ನು ಲೆಗ್ ಸ್ಟಂಪ್ ಉರುಳಿಸುವ ಮೂಲಕ ಹರಿಶಂಕರ್ ಇದೀಗ ಎಲ್ಲರ ಗಮನಸೆಳೆದಿದ್ದಾರೆ.

ಧೋನಿ ಅವರನ್ನು ಬೋಲ್ಡ್ ಮಾಡಿದ ಬಳಿಕ ಹರಿಶಂಕರ್, ಅವರೊಂದಿಗೆ ಚಿತ್ರವನ್ನೂ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದು, ‘ಕನಸಿನ ಚಿತ್ರ’ ಎಂದೂ ಬರೆದುಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ದೇಶೀಯ ಕ್ರಿಕೆಟ್‌ನಲ್ಲಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಂಧ್ರ ಪರ ಆಡಿದ್ದ ಹರಿಶಂಕರ್ 8 ವಿಕೆಟ್ ಕಬಳಿಸಿದ್ದರು.