ಕ್ರೀಡೆ

ಈ ಕನ್ನಡದ ನಟ RCB ಪರ ಆಡಲೇಬೇಕೆಂದ ನೆಟ್ಟಿಗರು! ಯಾರ ಆ ಹೀರೋ?

ಬೆಂಗಳೂರು: ಇಂಡಿಯನ್ ಪ್ರೀಮಿಯರ್​ ಲೀಗ್ 2024ರ ಸೀಸನ್​ ಆವೃತ್ತಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈಗಾಗಲೇ ಬಿಸಿಸಿಐ ಮೊದಲ 21 ದಿನಗಳ ಪಂದ್ಯಗಳ ವೇಳಾಪಟ್ಟಿಯನ್ನು ಸಹ ಬಿಡುಗಡೆಗೊಳಿಸಿದೆ. ಶೆಡ್ಯೂಲ್ ಪ್ರಕಾರ, ಆರಂಭಿಕ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಮತ್ತು ಮಹೇಂದ್ರ ಸಿಂಗ್ ಧೋನಿ ಕ್ಯಾಪ್ಟನ್ಸಿಯ ಚೆನ್ನೈ ಸೂಪರ್ ಕಿಂಗ್ಸ್​ ತಂಡಗಳು ಮುಖಾಮುಖಿಯಾಗಿ ಭರ್ಜರಿ ಪೈಪೋಟಿ ಕೊಡಲು ಸಜ್ಜಾಗಿವೆ.

ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ವೈರತ್ವ ಹಾಗೂ ಅಭಿಮಾನಿಗಳನ್ನು ಹೊಂದಿರುವ ತಂಡಗಳೆಂದರೆ ಅದು ಆರ್​ಸಿಬಿ ಮತ್ತು ಸಿಎಸ್​ಕೆ ಮಾತ್ರ. ಈ ಎರಡು ತಂಡಗಳಿಗಿರುವ ಅಭಿಮಾನಿ ಬಳಗ ದೊಡ್ಡದು. ಇವೆರೆಡು ಟೀಮ್​ಗಳೇ 2024ರ ಆವೃತ್ತಿಯ ಕಿಕ್​ಸ್ಟಾರ್ಟ್​ ಪಂದ್ಯದಲ್ಲಿ ಎದುರು-ಬದುರು ಆಡುತ್ತಿರುವುದು ಕ್ರಿಕೆಟ್ ಫ್ಯಾನ್ಸ್​ಗಳಲ್ಲಿ ಮತ್ತಷ್ಟು ಕಿಚ್ಚು ಹೆಚ್ಚಿಸಿದೆ. ಅಪಾರ ಸಂಖ್ಯೆಯ ಫ್ಯಾನ್ಸ್​ಗಳನ್ನು ಸಂಪಾದಿಸಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಎಷ್ಟು ಬಾರಿ ಸೋತರೂ, ಗೆದ್ದರೂ ಅಥವಾ ಟೂರ್ನಿಯಿಂದ ಬಹುಬೇಗ ಹೊರಗುಳಿದರೂ ಕೂಡ ಫ್ಯಾನ್ಸ್​ಗಳು ಮಾತ್ರ ಸೀಸನ್​ ಮುಗಿಯವರೆಗೂ ಅದೇ ಪ್ರೀತಿ, ಅಭಿಮಾನಿವನ್ನು ಹಂಚುವುದು ಈ ತಂದ ವಿಶೇಷ ಎಂದೇ ಹೇಳಬಹುದು.

ಸದ್ಯ ಆರ್​ಸಿಬಿ ಮತ್ತು ಸಿಎಸ್​ಕೆ ಮೊದಲ ಪಂದ್ಯಕ್ಕೆ ಎದುರುನೋಡುತ್ತಿರುವ ಕ್ರಿಕೆಟ್ ಅಭಿಮಾನಿಗಳು ಇದೀಗ ಸ್ಯಾಂಡಲ್​ವುಡ್​ ನಟನ ಬ್ಯಾಟಿಂಗ್ ವೈಖರಿ ನೋಡಿ ಇವರು ಸಹ ಐಪಿಎಲ್​ನಲ್ಲಿ ಈ ಬಾರಿ ಬೆಂಗಳೂರು ತಂಡಕ್ಕೆ ಆಡಲೇಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದುಬೈನಲ್ಲಿ ಆರಂಭಗೊಂಡ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್​) ಪಂದ್ಯಗಳಲ್ಲಿ ಕರ್ನಾಟಕ ಬುಲ್ಡೋಜರ್ಸ್​ ತಂಡದ ಪರ ನಟ ಡಾರ್ಲಿಂಗ್ ಕೃಷ್ಣ ಆಡಿದ ವೈಖರಿ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ.

ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೃಷ್ಣ ಅವರ ಆಟ ನೋಡಿದ ಕ್ರಿಕೆಟ್ ಅಭಿಮಾನಿಗಳು, ಎಂತಹ ಅದ್ಬುತ ಬ್ಯಾಟಿಂಗ್ ವೈಖರಿ! ಖಂಡಿತವಾಗಿ ಇವರು ಈ ಬಾರಿ ಆರ್​ಸಿಬಿ ತಂಡದ ಪರ ಆಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.