ಡೆಹ್ರಾಡೂನ್: ಕಾರು ಅಪಘಾತದಿಂದ ಗಂಭೀರವಾಗಿ ಗಾಯಗೊಂಡು ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಟೀಮ್ ಇಂಡಿಯಾ ಆಟಗಾರ ರಿಷಭ್ ಪಂತ್ ಅವರನ್ನು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.
ಭೇಟಿಯ ವೇಳೆ ಅಪಘಾತಕ್ಕೆ ಅಸಲಿ ಕಾರಣ ಏನು ಎಂಬುದನ್ನು ಪಂತ್ ಅವರು ಮುಖ್ಯಮಂತ್ರಿಗಳ ಬಳಿ ತಿಳಿಸಿದ್ದಾರೆ. ಪಂತ್ ಅವರ ತಾಯಿ ಮತ್ತು ಕುಟುಂಬ ಸದಸ್ಯರನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಸಿಎಂ ಪುಷ್ಕರ್ ಧಾಮಿ, ಟೀಮ್ ಇಂಡಿಯಾ ಸ್ಟಾರ್ ಆಟಗಾರನ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ವಿಚಾರಿಸಿದರು.
ರಸ್ತೆಯಲ್ಲಿನ ಗುಂಡಿ ಮತ್ತು ರಸ್ತೆ ಮಧ್ಯ ಇದ್ದ ಕಪ್ಪು ವಸ್ತು ಅಪಘಾತಕ್ಕೆ ಕಾರಣವಾಯಿತು ಎಂದು ಪಂತ್, ಮುಖ್ಯಮಂತ್ರಿಗಳೊಂದಿಗಿನ ಚರ್ಚೆಯ ವೇಳೆ ತಿಳಿಸಿದ್ದಾರೆ. ಇದನ್ನು ಪುಷ್ಕರ್ ಧಾಮಿ ಕೂಡ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ. ಆದರೆ, ಪ್ರಾಥಮಿಕ ತನಿಖೆಯ ಪ್ರಕರ ಪಂತ್, ಮಾರ್ಗ ಮಧ್ಯೆ ನಿದ್ರಿಸಿದ ಕಾರಣ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ.
2022 ರ ಡಿಸೆಂಬರ್ 30 ರಂದು ದೆಹಲಿಯಿಂದ ರೂರ್ಕಿಗೆ ತನ್ನ ತಾಯಿಗೆ ಸರ್ಪ್ರೈಸ್ ಭೇಟಿ ನೀಡಲು ಹೋಗುತ್ತಿದ್ದಾಗ ಕಾರು ಅಪಘಾತದಲ್ಲಿ ಪಂತ್ ಗಂಭೀರವಾಗಿ ಗಾಯಗೊಂಡಿದ್ದಾರೆ ಮತ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. (ಏಜೆನ್ಸೀಸ್)