ಕ್ರೀಡೆ

ಆಸ್ಟ್ರಿಯಾ ಆಟಗಾರ ಡೊಮಿನಿಕ್ ಥೀಮ್‌ಗೆ ಚೊಚ್ಚಲ ಗ್ರಾಂಡ್ ಸ್ಲಾಂ ಕಿರೀಟ

ನ್ಯೂಯಾರ್ಕ್: ನಿರೀಕ್ಷೆಯಂತೆಯೇ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಹೊಸ ಗ್ರಾಂಡ್ ಸ್ಲಾಂ ಚಾಂಪಿಯನ್‌ನ ಉದಯವಾಗಿದೆ. ಆದರೆ ಇದಕ್ಕಾಗಿ ಜಿದ್ದಾಜಿದ್ದಿನ ಮ್ಯಾರಥಾನ್ ಹೋರಾಟವೇ ನಡೆದು ಕೊನೆಗೆ ಆಸ್ಟ್ರಿಯಾದ ಆಟಗಾರ ಡೊಮಿನಿಕ್ ಥೀಮ್ ಚೊಚ್ಚಲ ಗ್ರಾಂಡ್ ಸ್ಲಾಂ ಗೆಲುವಿನೊಂದಿಗೆ ಹೊಸ ಇತಿಹಾಸ ಬರೆದಿದ್ದಾರೆ. ಜರ್ಮನಿಯ ಯುವ ಆಟಗಾರ ಅಲೆಕ್ಸಾಂಡರ್ ಜ್ವೆರೇವ್ ಮೊದಲೆರಡು ಸೆಟ್ ಗೆದ್ದು ಬೀಗಿದರೂ, 27 ವರ್ಷದ ಥೀಮ್ ದಿಟ್ಟ ತಿರುಗೇಟು ನೀಡಿದರು. ಈ ಮೂಲಕ, ಕಳೆದ 71 ವರ್ಷಗಳಲ್ಲಿ ಮೊದಲೆರಡು ಸೆಟ್ ಸೋತರೂ ಪ್ರಶಸ್ತಿ ಹೋರಾಟವನ್ನು ಜಯಿಸಿದ ಮೊದಲ ಆಟಗಾರರೆಂಬ ಹೆಗ್ಗಳಿಕೆಗೆ ಪಾತ್ರರಾದರು.

ಕರೊನಾ ಕಾಲದ ಬಯೋ-ಬಬಲ್‌ನಲ್ಲಿ ಬಹುತೇಕ ಖಾಲಿಯಾಗಿದ್ದ ಆರ್ಥರ್ ಆಶ್ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ 2ನೇ ಶ್ರೇಯಾಂಕಿತ ಥೀಮ್ 2-6, 4-6, 6-4, 6-3, 7-6 (8-6) ಅಂತರದಿಂದ 23 ವರ್ಷದ ಜ್ವೆರೇವ್‌ಗೆ ಸೋಲುಣಿಸಿದರು. 4 ಗಂಟೆ 2 ನಿಮಿಷಗಳ ಕಾಲ ಸಾಗಿದ ಕಾದಾಟದಲ್ಲಿ ಅಂತಿಮ ಸೆಟ್‌ನ ಟೈಬ್ರೇಕರ್‌ವರೆಗೂ ರೋಚಕ ಸ್ಪರ್ಧೆ ಏರ್ಪಟ್ಟಿತು. ಥೀಮ್ ಒಂದೂವರೆ ಗಂಟೆಯಲ್ಲೇ ಮೊದಲೆರಡು ಸೆಟ್ ಸೋತ ಬಳಿಕ ಪಂದ್ಯ ಬೇಗನೆ ಮುಗಿಯುವಂತೆ ಕಂಡರೂ, ಬಳಿಕ ಚಿತ್ರಣವೇ ಬದಲಾಗಿ ಬಿಟ್ಟಿತು. ಯುಎಸ್ ಓಪನ್ ಇತಿಹಾಸದಲ್ಲಿ ಮೊದಲ ಬಾರಿಗೆ ಫೈನಲ್‌ನ 5ನೇ ಸೆಟ್‌ನಲ್ಲಿ ಟೈಬ್ರೇಕರ್ ಮೂಲಕ ಫಲಿತಾಂಶ ನಿರ್ಧರಿಸಲ್ಪಟ್ಟಿತು.

ಥೀಮ್ ಯುಎಸ್ ಓಪನ್‌ನಲ್ಲಿ ಮೊದಲೆರಡು ಸೆಟ್ ಹಿನ್ನಡೆಯ ಬಳಿಕ ಪ್ರಶಸ್ತಿ ಜಯಿಸಿದ 2ನೇ ಆಟಗಾರರೆನಿಸಿದರು. ಇದಕ್ಕೆ ಮುನ್ನ 1949ರಲ್ಲಿ ಪ್ಯಾಂಚೊ ಗೊಂಜಲೆಜ್ ಅವರು ಟೆಡ್ ಸ್ಕ್ರೋಡರ್ ವಿರುದ್ಧ ಈ ಸಾಧನೆ ಮಾಡಿದ್ದರು. ಮುಕ್ತ ಟೆನಿಸ್ ಯುಗದಲ್ಲಿ ಇದು ಮೊದಲ ಸಾಧನೆಯಾಗಿದೆ.

ಬೋರಿಸ್ ಬೆಕರ್ ಬಳಿಕ ಗ್ರಾಂಡ್ ಸ್ಲಾಂ ಜಯಿಸಿದ ಜರ್ಮನಿಯ ಮೊದಲ ಆಟಗಾರ ಎನಿಸಿಕೊಳ್ಳುವ ಪ್ರಯತ್ನದಲ್ಲಿ 5ನೇ ಶ್ರೇಯಾಂಕಿತ ಜ್ವೆರೇವ್ ಸ್ವಲ್ಪದರಲ್ಲಿಯೇ ಎಡವಿದರು. ಆದರೆ ನನಗಿನ್ನೂ 23 ವರ್ಷ. ಇದೇನು ಕೊನೇ ಅವಕಾಶವಲ್ಲ ಎಂದು 6.6 ಅಡಿ ಎತ್ತರದ ಜ್ವೆರೇವ್ ಪಂದ್ಯದ ಬಳಿಕ ಆತ್ಮವಿಶ್ವಾಸದ ಮಾತುಗಳನ್ನೇ ನುಡಿದರು. ಪೋಷಕರಿಗೆ ಕರೊನಾ ಇದ್ದ ಕಾರಣ ತಮ್ಮೊಂದಿಗೆ ನ್ಯೂಯಾರ್ಕ್‌ಗೆ ಬಂದಿರಲಿಲ್ಲ ಎಂಬುದನ್ನೂ ಅವರು ಇದೇ ವೇಳೆ ಬಹಿರಂಗಪಡಿಸಿದರು.

ಥೀಮ್ 4ನೇ ಗ್ರಾಂಡ್ ಸ್ಲಾಂ ಫೈನಲ್‌ನಲ್ಲಿ ಚೊಚ್ಚಲ ಪ್ರಶಸ್ತಿ ಒಲಿಸಿಕೊಂಡರು. ಈ ಮುನ್ನ 2018, 2019ರ ಫ್ರೆಂಚ್ ಓಪನ್ (ನಡಾಲ್) ಮತ್ತು 2020ರ ಆಸ್ಟ್ರೇಲಿಯನ್ ಓಪನ್ (ಜೋಕೊವಿಕ್) ಫೈನಲ್‌ನಲ್ಲಿ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಥೀಮ್ ಯುಎಸ್ ಓಪನ್ ಜಯಿಸಿದ ಮೊದಲ ಮತ್ತು ಗ್ರಾಂಡ್ ಸ್ಲಾಂ ಜಯಿಸಿದ 2ನೇ ಆಸ್ಟ್ರಿಯಾ ಆಟಗಾರ. ಥಾಮಸ್ ಮಸ್ಟರ್ 1995ರಲ್ಲಿ ಗ್ರಾಂಡ್ ಸ್ಲಾಂ (ಫ್ರೆಂಚ್ ಓಪನ್) ಜಯಿಸಿದ ಮೊದಲ ಆಸ್ಟ್ರಿಯಾ ಆಟಗಾರರೆನಿಸಿದ್ದರು.

ಕಳೆದ 4 ವರ್ಷಗಳಲ್ಲಿ ಮೊದಲ ಬಾರಿಗೆ ಫೆಡರರ್, ನಡಾಲ್, ಜೋಕೊವಿಕ್ ಹೊರತಾದ ಆಟಗಾರರಿಗೆ ಗ್ರಾಂಡ್ ಸ್ಲಾಂ ಪ್ರಶಸ್ತಿ ಒಲಿದಿದೆ. 2016ರ ಯುಎಸ್ ಓಪನ್‌ನಲ್ಲಿ ಕೊನೆಯದಾಗಿ ಸ್ಟಾನಿಸ್ಲಾಸ್ ವಾವ್ರಿಂಕಾ ಈ ಸಾಧನೆ ಮಾಡಿದ್ದರು. ಚಾಂಪಿಯನ್ ಥೀಮ್ 22.04 ಕೋಟಿ ರೂ. ಬಹುಮಾನ ಮೊತ್ತ ಪಡೆದರೆ, ರನ್ನರ್‌ಅಪ್ ಜ್ವೆರೇವ್ 11.02 ಕೋಟಿ ರೂ. ಬಹುಮಾನ ಗಳಿಸಿದರು.

ಥೀಮ್ ಗ್ರಾಂಡ್ ಸ್ಲಾಂ ಪ್ರಶಸ್ತಿ ಜಯಿಸಿದ ವಿಶ್ವದ 150ನೇ ಆಟಗಾರರೆನಿಸಿದರು. ಮುಕ್ತ ಟೆನಿಸ್ ಯುಗದಲ್ಲಿ (1968ರಿಂದ) ಚೊಚ್ಚಲ ಗ್ರಾಂಡ್ ಸ್ಲಾಂ ಜಯಿಸಿದ 55ನೇ ಆಟಗಾರ. ಕಳೆದ 6 ವರ್ಷಗಳಲ್ಲಿ ಮೊದಲ ಬಾರಿ ಹೊಸ ಗ್ರಾಂಡ್ ಸ್ಲಾಂ ಚಾಂಪಿಯನ್‌ನ ಉದಯವಾಗಿದೆ. 2014ರಲ್ಲಿ ಕೊನೆಯದಾಗಿ ಮರಿನ್ ಸಿಲಿಕ್ ಯುಎಸ್ ಓಪನ್‌ನಲ್ಲೇ ಚೊಚ್ಚಲ ಗ್ರಾಂಡ್ ಸ್ಲಾಂ ಜಯಿಸಿದ್ದರು.

ಇಬ್ಬರಿಗೂ ಪ್ರಶಸ್ತಿಯನ್ನು ಹಂಚುವಂತಿರಬೇಕಿತ್ತು!

ಫೈನಲ್‌ನಲ್ಲಿ ಬದ್ಧ ಎದುರಾಳಿಗಳಾಗಿ ಹೋರಾಡಿದರೂ, ಪಂದ್ಯದ ಬಳಿಕ ಥೀಮ್-ಜ್ವೆರೇವ್ ನಡುವಿನ ಸ್ನೇಹ ಮತ್ತೆ ಮುಂದುವರಿದಿದೆ. 2014ರಿಂದಲೂ ಜ್ವೆರೇವ್ ಜತೆ ಉತ್ತಮ ಗೆಳೆತನ ಹೊಂದಿರುವುದಾಗಿ ಹೇಳಿದ ಥೀಮ್, ಈ ಪ್ರಶಸ್ತಿಯನ್ನು ಇಬ್ಬರಿಗೂ ಹಂಚುವಂತಿರಬೇಕು. ನಾವಿಬ್ಬರೂ ಗೆಲುವಿಗೆ ಅರ್ಹರು ಎಂದು ಕ್ರೀಡಾಸ್ಫೂರ್ತಿ ಮೆರೆದರು.

ಮುಂದಿನ ಗ್ರಾಂಡ್ ಸ್ಲಾಂ

ಫ್ರೆಂಚ್ ಓಪನ್

ಯಾವಾಗ: ಸೆಪ್ಟೆಂಬರ್ 27-ಅಕ್ಟೋಬರ್ 11

ಎಲ್ಲಿ: ಪ್ಯಾರಿಸ್ (ಫ್ರಾನ್ಸ್)