ಕ್ರೀಡೆ

ಪಾಲಕರನ್ನು ಗೌರವಿಸುತ್ತಿರುವುದು ನನ್ನ ಸಾಧನೆಗಿಂತ ಹೆಚ್ಚಿನ ಖುಷಿ ನೀಡಿದೆ

ನವದೆಹಲಿ: ಚೆಸ್ ವಿಶ್ವಕಪ್‌ನಲ್ಲಿ ರನ್ನರ್ ಅಪ್ ಬಳಿಕ ಚೆಸ್‌ಗೆ ದೊರೆಯುತ್ತಿರುವ ಬೆಂಬಲವನ್ನು ಕಂಡು ಮುಂಬರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ ಜಯಿಸುವ ಉತ್ತಮ ಅವಕಾಶವಿದೆ ಎಂದು ಭಾರತದ ಗ್ರಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರಿಂದ ಶುಕ್ರವಾರ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ, ಪ್ರಜ್ಞಾನಂದ ಅವರು, ಕಳೆದ ಕೆಲ ತಿಂಗಳಿನಿಂದ ಉತ್ತಮ ಆಟ ಪ್ರದರ್ಶಿಸಿದ್ದು, ಇದು ನನಗೆ ಹೆಚ್ಚಿನ ಆತ್ಮವಿಶ್ವಾಸ ತುಂಬಿದೆ. ಏಷ್ಯಾಡ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಅವಕಾಶವೂ ಇದೆ. ಪಾಲಕರು ನನ್ನ ಅತಿ ದೊಡ್ಡ ಶಕ್ತಿಯಾಗಿದ್ದಾರೆ. ಅವರ ಬೆಂಬಲವಿಲ್ಲದೇ ಇಷ್ಟು ಎತ್ತರಕ್ಕೆ ಏರಲು ಸಾಧ್ಯವಿಲ್ಲ. ನನ್ನೊಂದಿಗೆ ಅವರನ್ನು ಪಾಲಕರನ್ನು ಗೌರವಿಸುತ್ತಿರುವುದು ನನ್ನ ಸಾಧನೆಗಿಂತ ಹೆಚ್ಚಿನ ಖುಷಿ ನೀಡಿದೆ ಎಂದರು. ಚೀನಾದ ಹೌಂಗ್ ರೆೌನಲ್ಲಿ ನಡೆಯಲಿರುವ ಕೂಟದಲ್ಲಿ ಭಾರತದ 10 ಚೆಸ್ ಆಟಗಾರರು ಭಾಗವಹಿಸಲಿದ್ದಾರೆ.

ಪ್ರಜ್ಞಾನಂದ ಕಿರಿಯ ವಯಸ್ಸಿನಲ್ಲಿ ಪ್ರಬುಧ್ಧತೆ ಸಾಧಿಸಿದ್ದು, ಮಾನಸಿಕವಾಗಿ ಬಲಶಾಲಿಯಾಗಿದ್ದಾರೆ. 10ನೇ ವರ್ಷದಲ್ಲಿ ಗ್ರಾಂಡ್ ಮಾಸ್ಟರ್ ಹಾಗೂ 16ನೇ ವಯಸ್ಸಿನಲ್ಲಿ ವಿಶ್ವ ನಂ.1 ಆಟಗಾರ ಮ್ಯಾಗ್ನಸ್ ಕಾರ್ಲೆಸನ್ ಅವರನ್ನು ಸೋಲಿಸುವುದು ದೊಡ್ಡ ವಿಷಯವಾಗಿದೆ. ಕಠಿಣ ಪರಿಶ್ರಮದ ಮೂಲಕ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಇದರಲ್ಲಿ ಪ್ರಜ್ಞಾನಂದ ಪಾಲಕರ ಪಾತ್ರ ಬಹಳ ದೊಡ್ಡದು ಎಂದು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.