ನವದೆಹಲಿ: ಓರ್ವ ಆಟಗಾರನ ವಿಷಯದಲ್ಲಿ ಬಿಸಿಸಿಐ ಆಯ್ಕೆದಾರರ ವರ್ತನೆಯನ್ನು ಟೀಮ್ ಇಂಡಿಯಾದ ಮಾಜಿ ಬೌಲಿಂಗ್ ಕೋಚ್ ಪರಾಸ್ ಮಾಂಬ್ರೆ ಖಂಡಿಸಿದ್ದಾರೆ. ಆತನನ್ನು ತಂಡಕ್ಕೆ ಸೇರಿಸಿಕೊಳ್ಳದೇ ಬಿಸಿಸಿಐ ತಪ್ಪು ಮಾಡುತ್ತಿದೆ ಎಂದು ಮಾಂಬ್ರೆ ಟೀಕಾಪ್ರಹಾರ ನಡೆಸಿದ್ದಾರೆ.
ಅಂದಹಾಗೆ ಪರಾಸ್ ಮಾಂಬ್ರೆ ಅವರು ಧ್ವನಿ ಎತ್ತಿರುವುದು ಐಪಿಎಲ್ ಸೆನ್ಸೇಷನಲ್ ಮಯಾಂಕ್ ಯಾದವ್ ಬಗ್ಗೆ. ಈ ವರ್ಷದ ಐಪಿಎಲ್‌ನಲ್ಲಿ ಮಯಾಂಕ್ ಯಾದವ್ ಲಖನೌ ಸೂಪರ್ ಜೈಂಟ್ಸ್ ಪರ 4 ಪಂದ್ಯಗಳಲ್ಲಿ 7 ವಿಕೆಟ್ ಕಬಳಿಸಿದ್ದರು. ಅಲ್ಲದೆ, 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಎಲ್ಲರ ಗಮನವನ್ನು ತಮ್ಮತ್ತ ಸೆಳೆದರು. ಒಂದು ಪಂದ್ಯದಲ್ಲಿ 156 ಕಿ.ಮೀ ಬುಲೆಟ್ ವೇಗದಲ್ಲಿ ಚೆಂಡನ್ನು ಎಸೆದಿದ್ದು ದಾಖಲೆಯಾಗಿದೆ. ಕ್ರಿಕೆಟ್ ದಿಗ್ಗಜರೇ ಯಾದವ್ರನ್ನು ಕೊಂಡಾಡಿದರು.
ಸದ್ಯ ಗಾಯಗೊಂಡಿರುವ ಮಯಾಂಕ್ ಯಾದವ್, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ, ಐಪಿಎಲ್ ಮುಗಿದು ಸುಮಾರು ಮೂರು ತಿಂಗಳಾಗಿದ್ದರೂ, ಮಯಾಂಕ್ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಈ ಕಾರಣದಿಂದ ಬಿಸಿಸಿಐ ಅವರನ್ನು ದಿಲೀಪ್ ಟ್ರೋಫಿಗೆ ಆಯ್ಕೆ ಮಾಡಿಲ್ಲ. ಆದರೆ, ಆಯ್ಕೆ ಮಾಡದಿರುವ ಕ್ರಮವನ್ನು ಭಾರತದ ಮಾಜಿ ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಖಂಡಿಸಿದ್ದಾರೆ. ಅವನನ್ನು ಹತ್ತಿ ಉಣ್ಣೆಯಲ್ಲಿ ಕಟ್ಟಬಾರದು ಎಂದಿದ್ದಾರೆ.
ಯಾದವ್ ಅವರನ್ನು ಯಾಕೆ ಪರಿಗಣಿಸುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಬಿಸಿಸಿಐ ಮತ್ತು ಆಯ್ಕೆದಾರರು ಯಾದವ್ ವಿಷಯದಲ್ಲಿ ತಪ್ಪು ಮಾಡುತ್ತಿದ್ದಾರೆ. ಫಿಟ್ ಇಲ್ಲ ಎಂಬ ಕಾರಣಕ್ಕೆ ಮಯಾಂಕ್ ಆಡಿಸದಿರುವುದು ಸರಿಯಲ್ಲ. ಈ ವಯಸ್ಸಿನಲ್ಲಿ ಆದಷ್ಟು ಕ್ರಿಕೆಟ್ ಆಡಬೇಕು. ಆಗ ಮಾತ್ರ ಬೌಲರ್ಗೆ ಹಿಡಿತ ಸಿಗುತ್ತದೆ. ನೀವು ಹೆಚ್ಚು ಬೌಲ್ ಮಾಡಿದಷ್ಟೂ ಚೆಂಡನ್ನು ನಿಯಂತ್ರಿಸಬಹುದು ಎಂದು ಸಲಹೆ ನೀಡಿದರು.
ಮಯಾಂಕ್ ಯಾದವ್ ಆಡಲು ಸಿದ್ಧರಿಲ್ಲ ಎಂಬುದನ್ನು ನಾನು ಒಪ್ಪುವುದಿಲ್ಲ. ಈ ವಯಸ್ಸಿನಲ್ಲಿ ಅವರು ಸಾಧ್ಯವಾದಷ್ಟು ಬೌಲ್ ಮಾಡಬೇಕು. ಈಗ ಅವರು ಹೆಚ್ಚು ಬೌಲ್ ಮಾಡಿದಷ್ಟೂ ಮುಂದೆ ಉತ್ತಮವಾಗುತ್ತಾರೆ. ಒಬ್ಬ ವೇಗದ ಬೌಲರ್ ಸೇವೆಯನ್ನು ಎಷ್ಟು ಮತ್ತು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಆಗ ಮಾತ್ರ ಆತನ ಫಿಟ್ನೆಸ್ ಮತ್ತು ಬೌಲಿಂಗ್ ಸುಧಾರಿಸುತ್ತದೆ ಎಂದು ಮಯಾಂಕ್ ಯಾದವ್ ಪರ ಮಾಂಬ್ರೆ ಬ್ಯಾಟ್ ಬೀಸಿದ್ದಾರೆ. (ಏಜೆನ್ಸೀಸ್)