ಕ್ರೀಡೆ

ವಿಶ್ವದಲ್ಲೇ ಬಲಿಷ್ಠ ತಂಡ ಕಟ್ಟಲು AI ಮೊರೆ ಹೋದ ಪಾಕ್​! ಚಾಂಪಿಯನ್ಸ್​ ಟ್ರೋಫಿಗೆ PCB ಮೆಗಾ ಪ್ಲಾನ್​

ನವದೆಹಲಿ: ಬಾಂಗ್ಲಾದೇಶ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್‌ ಪಂದ್ಯದಲ್ಲಿ ಹೀನಾಯವಾಗಿ ಸೋತ ನಂತರ ಟೀಕೆಗಳ ಕೂಪಕ್ಕೆ ಸಿಲುಕಿರುವ ಪಾಕಿಸ್ತಾನ ತಂಡಕ್ಕೆ ನೆರವಾಗಲು ಪಾಕಿಸ್ತಾನ ಕ್ರಿಕೆಟ್​ ಮಂಡಳಿ (ಪಿಸಿಬಿ) ಹೊಸ ಉಪಾಯವನ್ನು ಮಾಡಿದೆ. ಚಾಂಪಿಯನ್ಸ್​ ಟ್ರೋಫಿಯನ್ನು ಗಮನದಲ್ಲಿಟ್ಟುಕೊಂಡು ವಿಶ್ವದಲ್ಲೇ ಬಲಿಷ್ಠ ತಂಡ ಕಟ್ಟಲು ಪಾಕ್​ ಪ್ಲಾನ್​ ಮಾಡಿದೆ. ಅಷ್ಟಕ್ಕೂ ಪಾಕ್​ ಮಾಡಿರುವ ಆ ಪ್ಲಾನ್​ ಏನೆಂಬುದನ್ನು ನಾವೀಗ ತಿಳಿಯೋಣ.

ತಂಡದ ಆಯ್ಕೆಗೆ ಆರ್ಟಿಫಿಶಿಯಲ್​ ಇಂಟೆಲಿಜೆನ್ಸ್​ (ಎಐ) ವ್ಯವಸ್ಥೆಯನ್ನು ಬಳಸಲಾಗುವುದು ಎಂದು ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದಾರೆ. ಚಾಂಪಿಯನ್ಸ್ ಟ್ರೋಫಿಗಾಗಿ ಅತ್ಯುತ್ತಮ ಆಟಗಾರರನ್ನು ಹುಡುಕಲು ಪಿಸಿಬಿ ಕೃತಕ ಬುದ್ಧಿಮತ್ತೆಯನ್ನು ಬಳಸುತ್ತದೆ ಎಂದಿದ್ದಾರೆ.

ನೂತನ ತಂತ್ರಜ್ಞಾನದ ಮೂಲಕ ಉತ್ತಮ ಆಟಗಾರರನ್ನು ಹುಡುಕಿ ಬೆಳೆಸಲಾಗುವುದು ಎಂದು ಮೊಹ್ಸಿನ್ ನಖ್ವಿ ಭರವಸೆ ನೀಡಿದ್ದಾರೆ. 150 ಆಟಗಾರರಲ್ಲಿ ಶೇ. 80 ರಷ್ಟು ಆಟಗಾರರನ್ನು AI ಮೂಲಕ ಆಯ್ಕೆ ಮಾಡಲಾಗುತ್ತದೆ. ಇನ್ನುಳಿದ 20 ರಷ್ಟು ಆಟಗಾರರನ್ನು ಆಯ್ಕೆಗಾರರ ಮೂಲಕ ಆಯ್ಕೆ ಮಾಡಲಾಗುವುದು. ಕಳಪೆ ಪ್ರದರ್ಶನ ನೀಡುವವರನ್ನು ತಂಡದಿಂದ ತೆಗೆದುಹಾಕಲಾಗುವುದು ಎಂದು ಮೊಹ್ಸಿನ್ ನಖ್ವಿ ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ರಾವಲ್ಪಿಂಡಿಯಲ್ಲಿ ನಡೆದ ಎರಡು ಪಂದ್ಯಗಳ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಪಾಕ್​ 10 ವಿಕೆಟ್​ಗಳ ಅಂತರದಿಂದ ಹೀನಾಯವಾಗಿ ಸೋಲನ್ನು ಅನುಭವಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಮೊದಲ ಇನಿಂಗ್ಸ್​ನಲ್ಲಿ 6 ವಿಕೆಟ್ ನಷ್ಟಕ್ಕೆ 448 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ 565 ರನ್ ಗಳಿಸಿ ಆಲೌಟ್ ಆಯಿತು. ಎರಡನೇ ಇನ್ನಿಂಗ್ಸ್‌ನಲ್ಲಿ ಮಿಂಚಿನ ಬೌಲಿಂಗ್​ ದಾಳಿ ಮಾಡಿದ ಬಾಂಗ್ಲಾದೇಶದ ಬೌಲರ್‌ಗಳು, ಪಾಕ್ ತಂಡವನ್ನು 146 ರನ್‌ಗಳಿಗೆ ಆಲೌಟ್ ಆಯಿತು. 30 ರನ್​ಗಳ ಸಣ್ಣ ಗುರಿಯನ್ನು ಮುರಿಯಲು ಕಣಕ್ಕೆ ಇಳಿದ ಬಾಂಗ್ಲಾದೇಶ ವಿಕೆಟ್ ನಷ್ಟವಿಲ್ಲದೆ ಗೆಲುವಿನ ದಡ ಸೇರಿತು. ಈ ಗೆಲುವಿನೊಂದಿಗೆ ಬಾಂಗ್ಲಾದೇಶ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್ ಆಗಸ್ಟ್ 30 ರಂದು ಇದೇ ಮೈದಾನದಲ್ಲಿ ನಡೆಯಲಿದೆ.

ಬಾಂಗ್ಲಾಗೆ ಮೊದಲ ಜಯ

ಪಾಕ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯ ಗೆದ್ದ ಬಾಂಗ್ಲಾ ಸಂಭ್ರಮಾಚರಣೆ ಮಾಡಿತು. ಈ ಹಿಂದೆ ನಡೆದ 13 ಮ್ಯಾಚ್​ಗಳ ಪೈಕಿ 12 ಬಾರಿ ಸೋಲುಂಡಿದ್ದರೆ, ಒಂದರಲ್ಲಿ ಡ್ರಾ ಕಂಡಿತ್ತು. ಆದ್ರೆ, ಇದೇ ಮೊದಲ ಬಾರಿಗೆ ಪಾಕಿಸ್ತಾನ ತಂಡಕ್ಕೆ ಬೆವರಿಳಿಸಿದ ಬಾಂಗ್ಲಾ ತಂಡ ಐತಿಹಾಸಿಕ ಗೆಲುವು ದಾಖಲಿಸಿದೆ.

ಮೊಹ್ಸಿನ್ ನಖ್ವಿ ಆಕ್ರೋಶ

ಸೋಮವಾರ (ಆ.26) ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಿಸಿಬಿ ಮುಖ್ಯಸ್ಥ ನಖ್ವಿ, ಈ ಸೋಲನ್ನು ನಿಜಕ್ಕೂ ಊಹಿಸಿರಲಿಲ್ಲ. ಇದನ್ನು ಅರಗಿಸಿಕೊಳ್ಳುವುದೇ ದೊಡ್ಡ ಕಷ್ಟವಾಗಿದೆ. ನಮ್ಮ ಆಯ್ಕೆ ಸಮಿತಿಯಲ್ಲೇ ಮೊದಲ ಸಮಸ್ಯೆ ಅಡಗಿರುವುದು. ಟಿ20 ವಿಶ್ವಕಪ್ ಟೂರ್ನಿಯಿಂದ ಬಹಳ ವೇಗವಾಗಿ ನಿರ್ಗಮಿಸಿದಾಗಲೇ ನಾವು ಸರ್ಜರಿ ಮಾಡಬೇಕಿತ್ತು. ಆದ್ರೆ, ಆಗ ಮಾಡಲಿಲ್ಲ. ಈಗ ಸರಿಯಾದ ಸಮಯ ಎದುರಾಗಿದೆ. ಶೀಘ್ರವೇ ಒಂದು ಪರಿಹಾರ ಕಂಡುಕೊಳ್ಳಲು ಚರ್ಚೆ ನಡೆಸಲಿದ್ದೇವೆ ಎಂದು ಹೇಳಿದ್ದರು. (ಏಜೆನ್ಸೀಸ್)