ನವದೆಹಲಿ: ಐಪಿಎಲ್ ಹರಾಜಿನ ಸಿದ್ಧತೆ ನಡೆಯುತ್ತಿರುವ ನಡುವೆ ಕೆಲ ಊಹಾಪೋಹದ ಸುದ್ದಿಗಳೂ ಹರಿದಾಡುತ್ತಿವೆ. ಐಪಿಎಲ್ 18ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಗೆ ಮುನ್ನ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಮತ್ತು ಹಾಲಿ ಚಾಂಪಿಯನ್ ಕೋಲ್ಕತ ನೈಟ್ರೈಡರ್ಸ್ ನಡುವೆ ಇಬ್ಬರು ಪ್ರಮುಖ ಆಟಗಾರರ ವಿನಿಮಯ ನಡೆಯುವ ಸಾಧ್ಯತೆ ಇದೆ. ಭಾರತ ಟಿ20 ತಂಡದ ನಾಯಕರಾಗಿರುವ ಸೂರ್ಯಕುಮಾರ್ ಮುಂಬೈನಿಂದ ಕೆಕೆಆರ್ಗೆ ಮತ್ತು ಶ್ರೇಯಸ್ ಅಯ್ಯರ್ ಕೆಕೆಆರ್ನಿಂದ ಮುಂಬೈ ತಂಡಕ್ಕೆ ವರ್ಗಾವಣೆಗೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಸೂರ್ಯಕುಮಾರ್ ಈ ಮುನ್ನ 2014ರಿಂದ 2017ರವರೆಗೆ ಕೆಕೆಆರ್ ತಂಡದಲ್ಲೇ ಇದ್ದರು. ಇತ್ತೀಚೆಗೆ ಕೆಕೆಆರ್ ತಂಡ ಸಂಪರ್ಕಿಸಿದಾಗ ಸೂರ್ಯಕುಮಾರ್ ಕೂಡ ವರ್ಗಾವಣೆಗೆ ಒಲವು ತೋರಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ಕೂಡ ಸೂರ್ಯಕುಮಾರ್ ಬಗ್ಗೆ ಆಸಕ್ತಿ ತೋರಿವೆ ಎನ್ನಲಾಗಿದೆ. ಈ ಹಿಂದೆ ಡೆಲ್ಲಿ ಪರವೂ ಆಡಿದ್ದ ಶ್ರೇಯಸ್ ಅಯ್ಯರ್ ಕೂಡ ತವರಿನ ಮುಂಬೈ ತಂಡದ ಪರ ಆಡಲು ಒಲವು ತೋರಿದ್ದಾರೆ ಎನ್ನಲಾಗಿದೆ.
ಇನ್ನು ರೋಹಿತ್ ಶರ್ಮ ಹರಾಜಿನಲ್ಲಿ ಕಾಣಿಸಿಕೊಂಡರೆ ಅವರನ್ನು ಖರೀದಿಸಲು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಖನೌ ಸೂಪರ್ಜೈಂಟ್ಸ್ ತಂಡಗಳು 50 ಕೋಟಿ ರೂ. ಬಜೆಟ್ ಮೀಸಲಿಡಲಿವೆ ಎಂದು ವರದಿಯೊಂದು ತಿಳಿಸಿದೆ. ಮತ್ತೊಂದೆಡೆ ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ನಿಂದ ಚೆನ್ನೈ ಸೂಪರ್ಕಿಂಗ್ಸ್ಗೆ ವರ್ಗಾವಣೆಯಾಗಲಿದ್ದಾರೆ ಎಂದು ಇನ್ನೊಂದು ವರದಿ ತಿಳಿಸಿದೆ. ಮಾಜಿ ವೇಗಿ ಜಹೀರ್ ಖಾನ್ ಲಖನೌ ತಂಡದ ಮೆಂಟರ್ ಆಗಲಿದ್ದಾರೆ ಎಂದೂ ವರದಿಯಾಗಿದೆ. ಈ ಮುನ್ನ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಭ್ ಪಂತ್ ಚೆನ್ನೈ ಸೂಪರ್ಕಿಂಗ್ಸ್ಗೆ ವರ್ಗಾವಣೆಯಾಗಲಿದ್ದಾರೆ ಎಂದೂ ವರದಿಯಾಗಿತ್ತು. ಇದರೊಂದಿಗೆ, ಮಾಜಿ ನಾಯಕ ಅವರನ್ನು ಅನ್ಕ್ಯಾಪ್ಡ್ ಪ್ಲೇಯರ್ ಆಗಿ ರಿಟೇನ್ ಮಾಡಿಕೊಳ್ಳಲು ಚೆನ್ನೈ ಸೂಪರ್ಕಿಂಗ್ಸ್ಗೆ ಬಿಸಿಸಿಐ ಅವಕಾಶ ಕಲ್ಪಿಸಲಿದೆ ಎಂದೂ ಸುದ್ದಿ ಹರಡಿತ್ತು. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಹೊಂದಿ 5 ವರ್ಷ ಕಳೆದಿರುವುದರಿಂದ ಈ ವಿನಾಯಿತಿ ನೀಡಲಾಗುತ್ತದೆ ಎಂದೂ ಹೇಳಲಾಗಿತ್ತು.