ಕ್ರೀಡೆ

ಇಂದಿನಿಂದ ಚೆಸ್ ಒಲಿಂಪಿಯಾಡ್: ಮಹಿಳಾ ತಂಡಕ್ಕೆ ಅಗ್ರಶ್ರೇಯಾಂಕ

ಬುಡಾಪೆಸ್ಟ್: ಎರಡು ವರ್ಷಕೊಮ್ಮೆನಡೆಯಲಿರುವ ಪ್ರತಿಷ್ಠಿತ 45ನೇ ಚೆಸ್ ಒಲಿಂಪಿಯಾಡ್ ಟೂರ್ನಿಗೆ ಬುಧವಾರ ಚಾಲನೆ ದೊರೆಯಲಿದೆ. ಭಾರತ ಪುರುಷರ ಹಾಗೂ ಮಹಿಳಾ ತಂಡಗಳು ಈ ಬಾರಿ ಪೋಡಿಯಂ ಏರುವ ಬಲಿಷ್ಠ ತಂಡ ಎನಿಸಿದ್ದು, ಡಿ.ಹರಿಕಾ ಹಾಗೂ ಆರ್.ವೈಶಾಲಿ ಅವರನ್ನು ಒಳಗೊಂಡಿರುವ ಮಹಿಳಾ ತಂಡ ಟೂರ್ನಿಯಲ್ಲಿ ಅಗ್ರ ಶ್ರೇಯಾಂಕ ಪಡೆದುಕೊಂಡಿದೆ. ಇದು ತಂಡಗಳ ವಿಭಾಗದ ಸ್ಪರ್ಧೆಯಲ್ಲಿ ಪ್ರತಿಷ್ಠಿತ ಚೆಸ್ ಟೂರ್ನಿ ಎನಿಸಿದೆ.

2020ರಲ್ಲಿ ನಡೆದ ಆನ್‌ಲೈನ್ ಚೆಸ್ ಒಲಿಂಪಿಯಾಡ್‌ನಲ್ಲಿ ರಷ್ಯಾದೊಂದಿಗೆ ಜಂಟಿ ಅಗ್ರಸ್ಥಾನದೊಂದಿಗೆ ಚಿನ್ನ ಜಯಿಸಿದ್ದ ಭಾರತ ತಂಡ, 2014 ಹಾಗೂ 2022ರಲ್ಲಿ ಕಂಚಿನ ಪದಕ ಗೆದ್ದುಕೊಂಡಿದೆ. ಇದುವರೆಗಿನ ಟೂರ್ನಿಯಲ್ಲಿ ಭಾರತದಿಂದ ಭಾಗವಹಿಸಿರುವ ಅತಿ ಬಲಿಷ್ಠ ತಂಡ ಇದಾಗಿದ್ದು, ಹಾಲಿ ಆಟಗಾರರ ತಂಡ 2022ರ ಏಷ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿತ್ತು. ಐದು ಬಾರಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಹಾಗೂ ಅನುಭವಿ ಕೊನೆರು ಹಂಪಿ ಗೈರಿನಲ್ಲಿ ಭಾರತ ಈ ಬಾರಿ ಕಣಕ್ಕಿಳಿಯಲಿದೆ.

ಗ್ರಾಂಡ್ ಮಾಸ್ಟರ್ ಡಿ. ಹರಿಕಾ, ಆರ್.ಪ್ರಜ್ಞಾನಂದ ಸಹೋದರಿ ಆರ್.ವೈಶಾಲಿ, ದಿವ್ಯಾ ದೇಶ್‌ಮುಖ್ ಹಾಗೂ ವಾಂತಿಕಾ ಅಗರ್ವಾಲ್ ಒಳಗೊಂಡ ಮಹಿಳಾ ತಂಡ ಯುವ, ಅನುಭವಿ ಆಟಗಾರ್ತಿಯರಿಂದ ಕೂಡಿದೆ. ತಾನಿಯಾ ಸಚ್‌ದೇವ್ ಮೀಸಲು ಆಟಗಾರ್ತಿ ಆಗಿದ್ದಾರೆ.

ಫಿಡೆ ಸೆಪ್ಟೆಂಬರ್‌ನಲ್ಲಿ ಪ್ರಕಟಿಸಿರುವ ರೇಟಿಂಗ್‌ನಲ್ಲಿ ಅಗ್ರ 4 ಸ್ಥಾನ ಪಡೆದಿರುವ ಚೀನಾ ಆಟಗಾರ್ತಿಯರು ಟೂರ್ನಿಯ ಭಾಗವಾಗಿಲ್ಲ. ಜತೆಗೆ ಕ್ರೀಡಾ ನಿರ್ಬಂಧಗಳಿಂದಾಗಿ ರಷ್ಯಾ ಸತತ ಎರಡನೇ ಬಾರಿಗೆ ಟೂರ್ನಿಯಿಂದ ಹೊರಗುಳಿದಿದ್ದು, ಯೂಕ್ರೇನ್ ಉತ್ತಮ ತಂಡ ರಚಿಸಲು ವಿಲವಾಗಿರುವ ಹಿನ್ನಲೆ ಭಾರತ ಮಹಿಳಾ ತಂಡ ೇವರಿಟ್ ಎನಿಸಿದೆ. ಜಾರ್ಜಿಯಾ, ಪೋಲೆಂಡ್ ಕ್ರಮವಾಗಿ 2,3ನೇ ಶ್ರೇಯಾಂಕ ಪಡೆದಿವೆ.

ಮುಕ್ತವಿಭಾಗದಲ್ಲಿ ವಿದಿತ್ ಗುಜರಾತಿ, ಚೆಸ್ ವಿಶ್ವಕಪ್ ರನ್ನರ್ ಅಪ್ ಆರ್ ಪ್ರಜ್ಞಾನಂದ, ಡಿ.ಗುಕೇಶ್, ಅರ್ಜುನ್ ಎರಿಗೈಸಿ ಹಾಗೂ ಪಿ.ಹರಿಕೃಷ್ಣ ಅವರನ್ನೊಳಗೊಂಡ ಭಾರತದ ಯುವ ತಂಡ ಈ ಬಾರಿ 2ನೇ ಶ್ರೇಯಾಂಕ ಪಡೆದಿದ್ದು, ಕಳೆದ ಬಾರಿಯ ಕಂಚಿನ ಪದಕವನ್ನು ಸುಧಾರಿಸಿಕೊಳ್ಳಲು ಹೋರಾಡಲಿದೆ. ಮುಕ್ತ ವಿಭಾಗದಲ್ಲಿ ಅಮೆರಿಕದಿಂದ ನಿಕಟ ಪೈಪೋಟಿ ಏರ್ಪಡುವ ಸಾಧ್ಯತೆಗಳಿವೆ. ಮೂರನೇ ಶ್ರೇಯಾಂಕ ಪಡೆದಿರುವ ಚೀನಾವನ್ನು, ಹಾಲಿ ವಿಶ್ವಚಾಂಪಿಯನ್ ಡಿಂಗ್ ಲಿರೆನ್ ಮುನ್ನಡೆಸಲಿದ್ದಾರೆ. ಸೆಪ್ಟೆಂಬರ್ 23ಕ್ಕೆ ಟೂರ್ನಿಯ ಅಂತಿಮ ಸುತ್ತು ನಡೆಯಲಿದ್ದು, ಸೋವಿಯತ್ ಯೂನಿಯನ್/ರಷ್ಯಾ ಇದುವರೆಗೆ ಗರಿಷ್ಠ 24 ಬಾರಿ ಪ್ರಶಸ್ತಿ ಜಯಿಸಿದೆ.

ಟೂರ್ನಿಯ ಸ್ವರೂಪ: ಟೂರ್ನಿಯ ಮುಕ್ತ ಹಾಗೂ ಮಹಿಳೆಯರ ವಿಭಾಗದಲ್ಲಿ ತಲಾ 11 ಸುತ್ತಿನ ಸ್ಪರ್ಧೆ ನಡೆಯಲಿದ್ದು, ವಿಜೇತ ತಂಡಗಳು ಸ್ವಿಸ್ ಮಾದರಿಯಲ್ಲಿ ಪ್ರತಿ ಗೆಲುವಿಗೆ ಎರಡು ಮ್ಯಾಚ್ ಪಾಯಿಂಟ್ ಪಡೆಯುತ್ತವೆ. ಈವೆಂಟ್‌ನ ಕೊನೆಯಲ್ಲಿ ಟೈಬ್ರೇಕರ್‌ನಲ್ಲಿ ಗೇಮ್ ಪಾಯಿಂಟ್‌ಗಳು ಪ್ರಮುಖವಾಗಲಿವೆ. ಮುಕ್ತ ವಿಭಾಗದಲ್ಲಿ 191 ಮತ್ತು ಮಹಿಳೆಯರ ವಿಭಾಗದಲ್ಲಿ 180 ತಂಡಗಳು ಟೂರ್ನಿಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.