ಅಥೆನ್ಸ್: ಕರೊನಾ ವೈರಸ್ ಭೀತಿಯಿಂದಾಗಿ ಮುಂಬರುವ ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯುವುದೇ ಅನುಮಾನದಲ್ಲಿದೆ. ಈ ನಡುವೆ ಟೋಕಿಯೊ ಗೇಮ್ಸ್ಗೆ ಪೂರ್ವಭಾವಿಯಾಗಿ ಒಲಿಂಪಿಕ್ಸ್ ಕ್ರೀಡಾಜ್ಯೋತಿ ನಿಗದಿಯಂತೆಯೇ ಮಾರ್ಚ್ 12ರಂದು ಗ್ರೀಸ್ನ ಒಲಿಂಪಿಯಾದಲ್ಲಿ ಬೆಳಗಲಿದೆ. ಸಾಂಪ್ರದಾಯಿಕ ರೀತಿಯಲ್ಲೇ ಜ್ಯೋತಿ ಬೆಳಗಲಿದ್ದು, ಬಳಿಕ ಒಂದು ವಾರ ಕಾಲ ಗ್ರೀಕ್ನಲ್ಲೇ ಕ್ರೀಡಾಜ್ಯೋತಿ ರಿಲೇ ಸಾಗಲಿದೆ ಎಂದು ಗ್ರೀಕ್ ಒಲಿಂಪಿಕ್ ಸಮಿತಿ ತಿಳಿಸಿದೆ. ಒಲಿಂಪಿಕ್ ಜ್ಯೋತಿಯನ್ನು ಮಾರ್ಚ್ 19ರಂದು ಅಥೆನ್ಸ್ನಲ್ಲಿ ಟೋಕಿಯೊ ಸಂಘಟಕರಿಗೆ ಹಸ್ತಾಂತರಿಸಲಾಗುವುದು.
ಆದರೆ ಈ ವೇಳೆ ಹಿಂದಿನಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರದೆ, ಕೆಲವೇ ಕೆಲವು ಜನರ ಹಾಜರಿಯಲ್ಲಿ ಈ ಸಮಾರಂಭ ನಡೆಯಲಿದೆ ಎನ್ನಲಾಗಿದೆ. ಗ್ರೀಸ್ನಲ್ಲೂ ಇದುವರೆಗೆ 7 ಕರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಇಟಲಿಯಿಂದ ಆಗಮಿಸಿದ ಪ್ರಯಾಣಿಕರಿಂದಾಗಿ ಈ ಸಮಸ್ಯೆ ತಲೆದೋರಿದೆ. ಕ್ರೀಡಾಜ್ಯೋತಿ ರಿಲೇ ಜುಲೈ 24ರಂದು ಟೋಕಿಯೊ ಒಲಿಂಪಿಕ್ಸ್ ಆರಂಭದವರೆಗೆ ವಿವಿಧ ದೇಶಗಳಲ್ಲಿ ಸಾಗಬೇಕಾಗಿದೆ. ಒಲಿಂಪಿಕ್ಸ್ ಜನಿಸಿದ ಒಲಿಂಪಿಯಾದಲ್ಲೇ ಸೂರ್ಯರಶ್ಮಿಯಿಂದ ಯ ಮೂಲಕ ಜ್ಯೋತಿ ಬೆಳಗುವುದು ಸಂಪ್ರದಾಯವಾಗಿದೆ.