ಪುಣೆ: ದಬಾಂಗ್ ಡೆಲ್ಲಿ ತಂಡದ ದಿಟ್ಟ ಪ್ರತಿರೋಧವನ್ನು ಸಮರ್ಥವಾಗಿ ಮೆಟ್ಟಿನಿಂತತಂಡ ಪ್ರೊ ಕಬಡ್ಡಿ ಲೀಗ್ 11ನೇ ಆವೃತ್ತಿಯಲ್ಲಿ ಎರಡನೇ ತಂಡವಾಗಿ ಫೈನಲ್ ಪ್ರವೇಶಿಸಿದೆ. ಡಿಸೆಂಬರ್ 29ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಮತ್ತು ಪಟನಾ ಪೈರೇಟ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಬಾಳೇವಾಡಿ ಕ್ರೀಡಾ ಸಂಕೀರ್ಣದಲ್ಲಿ ಶುಕ್ರವಾರ ನಡೆದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಟನಾ ಪೈರೇಟ್ಸ್ ತಂಡವು 32 -28 ಅಂಕಗಳ ಅಂತರದಿಂದ ದಬಾಂಗ್ ಡೆಲ್ಲಿ ತಂಡವನ್ನು ಹತ್ತಿಕ್ಕಿತು. ಇದರೊಂದಿಗೆ ನಾಲ್ಕನೇ ಬಾರಿ ಫೈನಲ್ ಪ್ರವೇಶಿದ ಸಾಧನೆಯನ್ನು ಪಟನಾ ಮಾಡಿತು. 3, 4 ಮತ್ತು 5ನೇ ಆವೃತ್ತಿಗಳಲ್ಲಿ ಪಟನಾ ಚಾಂಪಿಯನ್ ಆಗಿದೆ.
7ನೇ ಆವೃತ್ತಿಯ ರನ್ನರ್ ಅಪ್ ಹಾಗೂ 8ನೇ ಆವೃತ್ತಿಯ ಚಾಂಪಿಯನ್ ದಬಾಂಗ್ ಡೆಲ್ಲಿ ದ್ವಿತೀಯಾರ್ಧದಲ್ಲಿ ಅಬ್ಬರಿಸಿದರೂ ಕೊನೆಯ ಕ್ಷಣದಲ್ಲಿ ಎಡವಿತು. ಪಟನಾ ಪೈರೇಟ್ಸ್ ಪರ ದೇವಾಂಕ್, ಅಯಾನ್ ತಲಾ 8 ಅಂಕಗಳನ್ನು ಕಲೆಹಾಕಿದರೆ, ಶುಭಂ 5 ಅಂಕಗಳ ಕೊಡುಗೆ ನೀಡಿದರು. ಅತ್ತ ದಿಲ್ಲಿ ತಂಡದ ಪರ ಅಶು 9 ಅಂಕ ಗಳಿಸಿ ತಂಡದ ಹೋರಾಟಕ್ಕೆ ಒತ್ತು ನೀಡಿದರು.
25ನೇ ನಿಮಿಷದ ಅಂತ್ಯಕ್ಕೆ 19-12ರಲ್ಲಿ ಅಂತರ ಕಾಯ್ದುಕೊಂಡ ಪಟನಾ ನಾಲ್ಕನೇ ಬಾರಿ ಫೈನಲ್ ಪ್ರವೇಶವನ್ನು ಸನಿಹ ಮಾಡಿಕೊಂಡಿತು. ಆದರೆ ಸ್ಟಾರ್ ರೇಡರ್ ನವೀನ್ ಕುಮಾರ್ ಅವರ ಕಳಪೆ ಆಟದಿಂದ ದಬಾಂಗ್ ತಂಡ ಸೊರಗುವಂತಾಯಿತು. 30 ನಿಮಿಷಗಳ ಆಟದ ಅಂತ್ಯಕ್ಕೆ ಪೈರೇಟ್ಸ್ ತಂಡವು 22-16ರಲ್ಲಿ ಮೇಲುಗೈ ಸಾಧಿಸುವ ಮೂಲಕ ಗೆಲುವಿನತ್ತ ದಾಪುಗಾಲಿಟ್ಟಿತು.ಆದರೆ 32ನೇ ನಿಮಿಷದಲ್ಲಿ ಪಟನಾ ತಂಡವನ್ನು ಆಲೌಟ್ ಮಾಡಿದ ದಬಾಂಗ್ ಡೆಲ್ಲಿ ತಂಡವು 24-24ರಲ್ಲಿ ಪ್ರತಿ ಹೋರಾಟ ನೀಡುವ ಮೂಲಕ ಪಂದ್ಯದ ರೋಚಕತೆಯನ್ನು ತೀವ್ರಗೊಳಿಸಿತು. 35 ನಿಮಿಷಕ್ಕೆ ಎರಡೂ ತಂಡಗಳು 26-26ರಲ್ಲಿ ಜಿದ್ದಾಜಿದ್ದಿನ ಹೋರಾಟ ಸಂಘಟಿಸಿದವು.
ಮೊದಲ ಅವಧಿಯಲ್ಲಿ ಸಿಕ್ಕ ಮುನ್ನಡೆಯಿಂದ ಹ್ಯಾಟ್ರಿಕ್ ಚಾಂಪಿಯನ್ ಪಟನಾ ಆತ್ಮವಿಶ್ವಾಸದಲ್ಲಿ ಎರಡನೇ ಅವಧಿ ಆರಂಭಿಸಿದರೆ, 8ನೇ ಆವೃತ್ತಿಯ ಚಾಂಪಿಯನ್ ದಿಲ್ಲಿ ತಂಡ ಹಿನ್ನಡೆ ತಗ್ಗಿಸಬೇಕಾದ ಒತ್ತಡದಲ್ಲಿ ಆಟ ಪುನರಾರಂಭಿಸಿತು.
ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡಿದ ಪಟನಾ ಪೈರೇಟ್ಸ್ ತಂಡ ಮೊದಲ ಹತ್ತು ನಮಿಷಗಳ ಆಟದಲ್ಲಿ 8-3 ಅಂಕಗಳಿಂದ ಮೇಲುಗೈ ಸಾಧಿಸಿತು. ದೇವಾಂಕ್, ಅಂಕಿತ್ ಮತ್ತು ಅಯಾನ್ ತಂಡದ ಮುನ್ನಡೆಗೆ ಶ್ರಮಿಸಿದರು. ಅತ್ತ ಸಂಘಟನಾತ್ಮ ಆಟಕ್ಕೆ ಆದ್ಯತೆ ನೀಡುವ ಮುನ್ನವೇ 5 ಅಂಕಗಳ ಹಿನ್ನಡೆಗೆ ಗುರಿಯಾದ ದಬಾಂಗ್ ದಿಲ್ಲಿ ತಂಡವು ಒತ್ತಡಕ್ಕೆ ಗುರಿಯಾಯಿತು. ಇದರ ಮಧ್ಯೆಯೂ ಮಿಂಚಿನ ಆಟ ತೋರಿದ ಮೋಹಿತ್ 3 ಅಂಕ ಗಳಿಸಿ ತಂಡದ ಹೋರಾಟವನ್ನು 6-9ಕ್ಕೆ ತಗ್ಗಿಸಿದರು.
15ನೇ ನಿಮಿಷದಲ್ಲಿ ಅಶು ಮಲಿಕ್ ಅವರನ್ನು ಟ್ಯಾಕಲ್ ಮಾಡುವಲ್ಲಿ ಯಶಸ್ವಿಯಾದ ಪಟನಾ ಪೈರೇಟ್ಸ್ ತಂಡ ಮೊದಲ ಬಾರಿ ಆಲೌಟ್ ಅಂಕ ಗಳಿಸಿತು. ಇದರೊಂದಿಗೆ ತಂಡದ ಮುನ್ನಡೆಯನ್ನು 14-8 ಅಂಕಗಳಿಗೆ ವಿಸ್ತರಿಸಿಕೊಂಡಿತು. ಮುನ್ನಡೆಯಿಂದ ಆತ್ಮವಿಶ್ವಾಸ ವೃದ್ಧಿಸಿಕೊಂಡ ಪೈರೇಟ್ಸ್ , ಟ್ಯಾಕಲ್ ಮತ್ತು ರೇಡಿಂಗ್ ಎರಡರಲ್ಲೂ ಮಿಂಚಿತು. ಹೀಗಾಗಿ ಮೊದಲ ಅವಧಿಯ ಅಂತ್ಯಕ್ಕೆ 7 (17-10) ಅಂಕಗಳಿಂದ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಯಿತು.