ಗುರುರಾಜ್ ಬಿ.ಎಸ್. ಬೆಂಗಳೂರು
ಎರಡೂವರೆ ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಸಾಕ್ಷಿಯಾಗುವ ಗಾರ್ಡನ್‌ಸಿಟಿಯ ಕ್ರಿಕೆಟ್ ಅಭಿಮಾನಿಗಳ ಆಸೆಗೆ ಮೊದಲ ದಿನ ಮಳೆ ತಣ್ಣೀರು ಎರಚಿದರೆ, ಎರಡನೇ ದಿನ ಟೀಮ್ ಇಂಡಿಯಾ ಬ್ಯಾಟರ್‌ಗಳು ನೀರಸ ಪ್ರದರ್ಶನದ ಮೂಲಕ ನಿರಾಸೆ ಮೂಡಿಸಿದರು. ಹವಾಮಾನ ವೈಪರಿತ್ಯದ ನಡುವೆ ಮೊದಲು ಬ್ಯಾಟಿಂಗ್ ಮಾಡುವ ಕೆಟ್ಟ ನಿರ್ಧಾರ ಕೈಗೊಂಡ ಭಾರತ ತಂಡ, ತವರಿನ ಅಂಗಣದಲ್ಲಿ ಕನಿಷ್ಠ ಮೊತ್ತಕ್ಕೆ ಇನಿಂಗ್ಸ್ ಮುಗಿಸಿತು. ವೇಗಿ ಮ್ಯಾಟ್ ಹೆನ್ರಿ (15ಕ್ಕೆ5) ಮಾರಕ ದಾಳಿಗೆ ಕುಸಿದ ರೋಹಿತ್ ಶರ್ಮ ಪಡೆ ನಂತರ ಎಡಗೈ ಆರಂಭಿಕ ಡೆವೋನ್ ಕಾನ್ ವೇ (91 ರನ್, 105 ಎಸೆತ, 11 ಬೌಂಡರಿ, 3 ಸಿಕ್ಸರ್) ಬ್ಯಾಟಿಂಗ್ ಎದುರು ಮಂಕಾಯಿತು. ಇದರೊಂದಿಗೆ ಪ್ರವಾಸಿ ನ್ಯೂಜಿಲೆಂಡ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯರ ಎದುರು ಮೊದಲ ದಿನ ಸಂಪೂರ್ಣ ಮೇಲುಗೈ ಸಾಧಿಸಿದೆ.
ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಬೇಗನೆ ಆರಂಭಗೊಂಡ ಪಂದ್ಯದ ಎರಡನೇ ದಿನ ಮೊದಲು ಬ್ಯಾಟಿಂಗ್‌ಗೆ ಇಳಿದ ಭಾರತ, ಕಿವೀಸ್ ವೇಗಿಗಳಾದ ಮ್ಯಾಟ್ ಹೆನ್ರಿ ಹಾಗೂ ವಿಲಿಯಂ ಓರೂರ್ಕಿ (22ಕ್ಕೆ 4) ದಾಳಿಗೆ ಕುಸಿದು ಭೋಜನಾ ವಿರಾಮದ ಬಳಿಕ 31.2 ಓವರ್‌ಗಳಲ್ಲಿ ಕೇವಲ 46 ರನ್‌ಗಳಿಗೆ ಮೊದಲ ಇನಿಂಗ್ಸ್ ಮುಗಿಸಿತು. ಇದು ಟೀಮ್ ಇಂಡಿಯಾ ಟೆಸ್ಟ್ ಇನಿಂಗ್ಸ್‌ವೊಂದರಲ್ಲಿ ಪೇರಿಸಿದ 3ನೇ ಕನಿಷ್ಠ ಮೊತ್ತವಾಗಿದೆ.
ಇದಕ್ಕೆ ಉತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ನ್ಯೂಜಿಲೆಂಡ್, ಡೆವೋನ್ ಕಾನ್‌ವೇ ಹಾಗೂ ಟಾಮ್ ಲಾಥನ್ ಒದಗಿಸಿದ ಉತ್ತಮ ಆರಂಭದ ನೆರವಿನಿಂದ 15ನೇ ಓವರ್‌ನಲ್ಲೇ ಇನಿಂಗ್ಸ್ ಮುನ್ನಡೆ ಸಾಧಿಸಿತು. ದಿನದಂತ್ಯಕ್ಕೆ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 180 ರನ್‌ಕಲೆಹಾಕಿರುವ ಕಿವೀಸ್, ಸದ್ಯ 134 ರನ್ ಮುನ್ನಡೆ ಸಾಧಿಸಿ ಸುಸ್ಥಿತಿಯಲ್ಲಿದೆ. ಬೆಂಗಳೂರು ಮೂಲದ ಆಲ್ರೌಂಡರ್ ರಚಿನ್ ರವೀಂದ್ರ (22* ರನ್, 34 ಎಸೆತ, 2 ಬೌಂಡರಿ) ಜತೆಗೆ ಡೆರಿಲ್ ಮಿಚೆಲ್ (14* ರನ್, 39 ಎಸೆತ, 1 ಬೌಂಡರಿ) ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಭಾರತಕ್ಕೆ ಕೈಕೊಟ್ಟ ಬ್ಯಾಟಿಂಗ್: ತೇವಾಂಶದಿಂದ ಕೂಡಿದ್ದ ಪಿಚ್‌ನ ಲಾಭ ಪಡೆದ ಕಿವೀಸ್ ಬೌಲರ್‌ಗಳು ಪಾರಮ್ಯ ಮೆರೆದರು. ರೋಹಿತ್ ಶರ್ಮ (2) ಮುನ್ನುಗ್ಗಿ ಬಾರಿಸುವ ಯತ್ನದಲ್ಲಿ ಅನುಭವಿ ವೇಗಿ ಟಿಮ್ ಸೌಥಿ ಸ್ವಿಂಗ್ ದಾಳಿಗೆ ಬೌಲ್ಡ್ ಆದರು. ಗಿಲ್ ಗೈರಿನಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ ವಿರಾಟ್ ಕೊಹ್ಲಿ (0) ಬೌನ್ಸ್ ಎಸೆತಕ್ಕೆ ಲೆಗ್ ಗಲ್ಲಿಯಲ್ಲಿದ್ದ ಗ್ಲೆನ್ ಫಿಲಿಪ್ಸ್‌ಗೆ ಕ್ಯಾಚ್ ನೀಡಿದರು. ಮರು ಓವರ್‌ನಲ್ಲೇ ರ್ಸ್ರಾಜ್ ಖಾನ್ (0) ಔಟಾದರು. ಆಗ ತಂಡದ ಮೊತ್ತ 10. ಆಗ ಯಶಸ್ವಿ ಜೈಸ್ವಾಲ್ (13) ಜತೆಯಾದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ (20) ತುಸು ಚೇತರಿಕೆ ನೀಡಿದರು.
ಇವರಿಬ್ಬರು 4ನೇ ವಿಕೆಟ್‌ಗೆ 68 ಎಸೆತದಲ್ಲಿ 21 ರನ್‌ಗಳಿಸಿದ್ದು ಭಾರತೀಯ ಇನಿಂಗ್ಸ್‌ನ ಗರಿಷ್ಠ ಜತೆಯಾಟ ಎನಿಸಿತು. ಈ ನಡುವೆ ಮಳೆಯಿಂದಾಗಿ ಅರ್ಧ ಗಂಟೆ ಆಟ ನಿಲ್ಲಿಸಲಾಗಿತ್ತು. ನಂತರ ಜೈಸ್ವಾಲ್ ಓರೂರ್ಕಿಗೆ ವಿಕೆಟ್ ಒಪ್ಪಿಸಿದರೆ, ಕನ್ನಡಿಗ ಕೆಎಲ್ ರಾಹುಲ್ (0) ತವರಿನ ಅಂಗಣದಲ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ನಂತರ ಆಲ್ರೌಂಡರ್ ರವೀಂದ್ರ ಜಡೇಜಾ ಖಾತೆ ತೆರೆಯಲು ವಿಲರಾದರು. ಇದರೊಂದಿಗೆ ಭಾರತ ಭೋಜನ ವಿರಾಮದ ವೇಳೆ 34 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ತತ್ತರಿಸಿತು. ವಿರಾಮದ ಬಳಿಕ ಮೊದಲ ಎಸೆತದಲ್ಲೇ ಆರ್.ಆಶ್ವಿನ್ (0) ಔಟಾದರೆ, ಜಸ್‌ಪ್ರೀತ್ ಬುಮ್ರಾ (1) ಬೇಗನೆ ನಿರ್ಗಮಿಸಿದರು. ಕುಲದೀಪ್ ಯಾದವ್ (2) ಔಟಾಗುವುದರೊಂದಿಗೆ ಇನಿಂಗ್ಸ್ ಕೊನೆಗೊಂಡಿತು. ಭಾರತ ಮೊದಲ ಬಾರಿ ತವರಿನಲ್ಲಿ 50ರ ಗಡಿ ದಾಟಲು ವಿಲವಾಯಿತು.