ನವದೆಹಲಿ: ಸೆಪ್ಟೆಂಬರ್ 9ರಿಂದ 28ರವರೆಗೆ ಯುಎಇಯಲ್ಲಿ ಏಷ್ಯಾಕಪ್ ಟಿ20 ಟೂರ್ನಿ ನಡೆಯಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಚೇರ್ಮನ್ ಮೊಹ್ಸಿನ್ ನಖ್ವಿ ಶನಿವಾರ ಘೋಷಿಸಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಧ್ಯಕ್ಷರೂ ಆಗಿರುವ ನಖ್ವಿ, ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಟೂರ್ನಿ ನಡೆಯಲಿರುವುದನ್ನು ಖಚಿತಪಡಿಸಿದ್ದಾರೆ. ಬಿಸಿಸಿಐ ಆತಿಥ್ಯದಲ್ಲೇ ಈ ಬಾರಿ ಟೂರ್ನಿ ನಡೆಯಲಿದೆ ಎಂದು ಇತ್ತೀಚೆಗೆ ಎಸಿಸಿ ಸಭೆಯಲ್ಲಿ ನಿರ್ಧರಿಸಲಾಗಿತ್ತು.
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ತಂಡಗಳು ಸೆಪ್ಟೆಂಬರ್ 14ರಂದು ಮುಖಾಮುಖಿ ಆಗಲಿವೆ. ಸೂಪರ್-4 ಹಂತದಲ್ಲಿ ಸೆಪ್ಟೆಂಬರ್ 21ರಂದು 2ನೇ ಬಾರಿ ಮುಖಾಮುಖಿ ಆಗಲಿವೆ. ಸೆ.9ರಂದು ಅಫ್ಘಾನಿಸ್ತಾನ-ಹಾಂಕಾಂಗ್ ನಡುವಿನ ಪಂದ್ಯದೊಂದಿಗೆ ಟೂರ್ನಿಗೆ ಚಾಲನೆ ಸಿಗಲಿದೆ. ಹಾಲಿ ಚಾಂಪಿಯನ್ ಭಾರತ ತಂಡ ಸೆ.10ರಂದು ಯುಎಇ ವಿರುದ್ಧ ತನ್ನ ಮೊದಲ ಪಂದ್ಯ ಆಡಲಿದೆ. 3ನೇ ಲೀಗ್ ಪಂದ್ಯದಲ್ಲಿ ಸೆ. 19ರಂದು ಓಮನ್ ವಿರುದ್ಧ ಆಡಲಿದೆ.
8 ತಂಡಗಳು ಆಡಲಿರುವ ಟೂರ್ನಿಯಲ್ಲಿ ಒಟ್ಟು 19 ಪಂದ್ಯಗಳು ನಡೆಯಲಿವೆ. ತಲಾ 4ರಂತೆ 2 ಗುಂಪುಗಳಲ್ಲಿ ತಂಡಗಳನ್ನು ವಿಭಾಗಿಸಲಾಗಿದ್ದು, ರೌಂಡ್ ರಾಬಿನ್ ಮಾದರಿ ಲೀಗ್ ಹಂತದ ಬಳಿಕ ಪ್ರತಿ ಗುಂಪಿನ ಅಗ್ರ 2 ತಂಡಗಳು ಸೂಪರ್-4 ಹಂತಕ್ಕೇರಲಿವೆ. ಇಲ್ಲೂ ಎಲ್ಲ ತಂಡಗಳು ತಲಾ ಒಮ್ಮೆ ಮುಖಾಮುಖಿ ಆಗಲಿದ್ದು, ಅಂತಿಮವಾಗಿ ಅಗ್ರ 2 ತಂಡಗಳ ನಡುವೆ ಸೆ. 28ರಂದು ಫೈನಲ್ ಪಂದ್ಯ ನಡೆಯಲಿದೆ. ಎಲ್ಲ ಪಂದ್ಯಗಳು ದುಬೈ ಮತ್ತು ಅಬುಧಾಬಿಯಲ್ಲಿ ನಡೆಯಲಿವೆ. ಮುಂದಿನ ವರ್ಷದ ಟಿ20 ವಿಶ್ವಕಪ್ಗೆ ಪೂರ್ವಸಿದ್ಧತೆಯಾಗಿ ಈ ಬಾರಿ ಟೂರ್ನಿ ಚುಟುಕು ಕ್ರಿಕೆಟ್ ಮಾದರಿಯಲ್ಲಿ ನಡೆಯಲಿದೆ. ಸೋನಿ ಸ್ಪೋರ್ಟ್ಸ್ನಲ್ಲಿ ಎಲ್ಲ ಪಂದ್ಯಗಳು ನೇರಪ್ರಸಾರ ಕಾಣಲಿವೆ.
ಬಿ: ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಹಾಂಕಾಂಗ್.
ಎ: ಭಾರತ, ಪಾಕಿಸ್ತಾನ, ಯುಎಇ, ಓಮನ್.
ಗುಂಪುಗಳು:
ಏಷ್ಯಾಕಪ್ ಟಿ20 ವೇಳಾಪಟ್ಟಿ ಲೀಗ್ ಹಂತ ದಿನಾಂಕ ಪಂದ್ಯ ಸೆ. 9 ಅಫ್ಘಾನಿಸ್ತಾನ-ಹಾಂಕಾಂಗ್ ಸೆ.10 ಭಾರತ-ಯುಎಇ ಸೆ. 11 ಬಾಂಗ್ಲಾದೇಶ-ಹಾಂಕಾಂಗ್ ಸೆ. 12 ಪಾಕಿಸ್ತಾನ-ಓಮನ್ ಸೆ. 13 ಬಾಂಗ್ಲಾದೇಶ-ಶ್ರೀಲಂಕಾ ಸೆ. 14 ಭಾರತ-ಪಾಕಿಸ್ತಾನ ಸೆ. 15 ಯುಎಇ-ಓಮನ್ ಸೆ. 15 ಶ್ರೀಲಂಕಾ-ಹಾಂಕಾಂಗ್ ಸೆ. 16 ಬಾಂಗ್ಲಾದೇಶ-ಅಫ್ಘಾನಿಸ್ತಾನ ಸೆ. 17 ಪಾಕಿಸ್ತಾನ-ಯುಎಇ ಸೆ. 18 ಶ್ರೀಲಂಕಾ-ಅಫ್ಘಾನಿಸ್ತಾನ ಸೆ. 19 ಭಾರತ-ಓಮನ್ ಸೂಪರ್-4 ಹಂತ ಸೆ. 20 ಬಿ1-ಬಿ2 ಸೆ.21 ಎ1-ಎ2 ಸೆ.23 ಎ2-ಬಿ1 ಸೆ. 24 ಎ1-ಬಿ2 ಸೆ. 25 ಎ2-ಬಿ2 ಸೆ.26 ಎ1-ಬಿ1 ಸೆ.28 ಫೈನಲ್